23, ಫೆಬ್ರವರಿ, 2023, ತುಮಕೂರು: ದೃಶ್ಯ (ರಿ.) ಬೆಂಗಳೂರು ಪ್ರಯೋಗಿಸುತ್ತಿರುವ ಶ್ರೀಮತಿ ದಾಕ್ಷಾಯಣ ಭಟ್ ಎ. ನಿರ್ದೇಶದ ಐತಿಹಾಸಿಕ ನಾಟಕ “ರಕ್ತ ಧ್ವಜ” ದಿನಾಂಕ 21 -02 -2023ರ ಮಂಗಳವಾರದಂದು ತುಮಕೂರಿನ ಡಾ. ಗುಬ್ಬಿ ವೀರಣ್ಣ ಕಲಾ ಕ್ಷೇತ್ರದಲ್ಲಿ ಸಂಜೆ 6-30ಕ್ಕೆ ಪ್ರದರ್ಶನಗೊಂಡಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಡಿ.ಎಂ. ರವಿ ಕುಮಾರ್ ಸಹಾಯಕ ನಿರ್ದೇಶಕರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ತುಮಕೂರು ಇವರು ನೆರವೇರಿಸಿದರು. ಅತಿಥಿಗಳಾಗಿ ಡಾ| ಲಕ್ಷ್ಮಣ ದಾಸ್ ಕೇಂದ್ರ ಸಂಗೀತ ನಾಟಕ ಅಕಾಡಮಿ ಪ್ರಶಸ್ತಿ ಪುರಸ್ಕೃತರು, ಶ್ರೀಮತಿ ಖಾ.ಹ. ರವಿಕುಮಾರಿ ಸಾಹಿತಿಗಳು ಹಾಗೂ ನಿಕಟ ಪೂರ್ವ ಅಧ್ಯಕ್ಷರು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಶ್ರೀ. ಉಗಮ ಶ್ರೀನಿವಾಸ ಪತ್ರಕರ್ತರು ರಂಗ ಸಂಘಟಕರು ಜಿನ್ ಟೀಮ್, ಶ್ರೀ ಮಳೀವಲ್ಲಿ ದೇವರಾಜ್ ರಂಗ ನಿರ್ದೇಶಕರು ತುಮಕೂರು ಇವರುಗಳು ಭಾಗವಹಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕರ್ನಾಟಕ ಸರ್ಕಾರ ಬೆಂಗಳೂರು ಇವರ ಸಹಕಾರದಲ್ಲಿ ನಡೆದ ಈ ಕಾರ್ಯಕ್ರಮವನ್ನು ಪ್ರಣುಚ ಆಯೋಜಿಸಿದರು.
ನಾಟಕದ ಬಗ್ಗೆ : “ರಕ್ತ ಧ್ವಜ” : ಒಂದನೇ ವಿಶ್ವಮಹಾಯುದ್ಧದಲ್ಲಿ ಬ್ರಿಟಿಷರ ಪರವಾಗಿ ಹೋರಾಡಿದ ತನ್ನ ಕಣ್ಣನ್ನು ಕಳೆದುಕೊಂಡ ರಾಮಸಿಂಗ್ ನ ಹತ್ತು ವರ್ಷದ ಮಗ ಕಿಸನ್ ತನ್ನ ಪ್ರಾಣವನ್ನೂ ಲೆಕ್ಕಿಸದೆ ರಾಷ್ಟ್ರ ಧ್ವಜವನ್ನು ಹಾರಿಸಿ ಬ್ರಿಟಿಷರ ಬಂದೂಕಿಗೆ ಬಲಿಯಾಗುವ ಕಥೆಯೇ ಬಸವರಾಜ್ ಕಟ್ಟೀಮನಿಯವರ “ರಕ್ತ ಧ್ವಜ” ಕಥೆ. ಈ ಕಥೆ ಹಾಗೂ ಈಸೂರಿನ ಚಿರಂಜೀವಿಗಳು ಕಾದಂಬರಿಯನ್ನು ಆಧರಿಸಿ ನಿಮ್ಮ ಮುಂದೆ ಪ್ರಸ್ತುತ ಪಡಿಸುತ್ತಿರುವ ನಾಟಕವೇ “ರಕ್ತ ಧ್ವಜ”.
ಬಸವರಾಜ್ ಕಟ್ಟೀಮನಿ : 5 ಅಕ್ಟೋಬರ್ 1919 ರಂದು ಬೆಳಗಾವಿ ಜಿಲ್ಲೆಯ ಮುಲಾಮರಡಿ ಹಳ್ಳಿಯಲ್ಲಿ ಜನಿಸಿದ ಇವರು, ತಮ್ಮ ತಾಯಿಯಿಂದ ಸಾಹಿತ್ಯದ ಒಲವನ್ನು ಬೆಳೆಸಿಕೊಂಡರು. ಸಂಯುಕ್ತ ಕರ್ನಾಟಕ ದಿನಪ್ರತಿಕೆಯಲ್ಲಿ ಪತ್ರಕರ್ತರಾಗಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದ ಇವರು ಕರ್ನಾಟಕ ವಿಧಾನ ಪರಿಷತ್ತಿನ ನಾಮ ನಿರ್ದೇಶನಗೊಂಡ ಸದಸ್ಯರಾಗಿ 1968-1974ರವರೆಗೆ ಸೇವೆ ಸಲ್ಲಿಸಿದರು. ಮುಖ್ಯವಾಗಿ ಕಥೆ ಕಾದಂಬರಿಗಳಿಂದ ಹಾಗೂ ತಮ್ಮ ಕ್ರಾಂತಿಕಾರಿ ಬದುಕು ಹಾಗೂ ಸಾಹಿತ್ಯದಿಂದ ಪ್ರಸಿದ್ದಿ ಪಡೆದ ಬಸವರಾಜ್ ಕಟ್ಟೀಮನಿಯವರು “ಕಾರವಾನ್”, “ಆಗಸ್ಟ್ ಒಂಬತ್ತು ಮತ್ತು ಇತರೆ ಕತೆಗಳು” ಕಥಾಸಂಕಲನಗಳನ್ನು, “ಕುಮಾರರಾಮ” ರೀತಿಯ ಕಥೆಗಳನ್ನು “ನೀ ನನ್ನ ಮುಟ್ಟಬೇಡ” ಮುಂತಾದ ಕಾದಂಬರಿಗಳನ್ನು ಹಾಗೂ ಇತ್ಯಾದಿ ಬಗೆಯ ಸಾಹಿತ್ಯವನ್ನು ಬರೆದು ಸೋವಿಯಟ್ ಲ್ಯಾಂಡ್ ನೆಹರು ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮುಂತಾದ ಪ್ರಶಸ್ತಿ ಗಳನ್ನು ಪಡೆದಿದ್ದಾರೆ.
ದೃಶ್ಯ ರಂಗತಂಡ : ಮುಖ್ಯವಾಗಿ ವಿದ್ಯಾರ್ಥಿ, ಯುವಜನರನ್ನು ಗಮನದಲ್ಲಿಟ್ಟುಕೊಂಡು ರೂಪಿತವಾದ ರಂಗ ತಂಡ ದೃಶ್ಯ. ಸ್ವಾವಲಂಬಿ ಬದುಕಿನ ಇರವು ಮತ್ತು ಅರಿವಿನ ವಿವೇಕವನ್ನು ರಂಗಭೂಮಿಯ ಲೋಕದೃಷ್ಟಿಯಿಂದ ಪಡೆದುಕೊಳ್ಳುವ ಹಂಬಲದಿಂದ ಕಳೆದ 16 ವರ್ಷಗಳಿಂದ ಈ ತಂಡ ಹಲವಾರು ರಂಗ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತ ಬಂದಿದೆ. ವಿದ್ಯಾರ್ಥಿಗಳು ಹಾಗೂ ಪರಿಣತ ರಂಗ ನಟ, ನಟಿಯರನ್ನು ಒಟ್ಟಿಗೆ ಸೇರಿಸುತ್ತ, ಹಲವು ರಂಗ ಶಿಬಿರಗಳನ್ನು ನಡೆಸುತ್ತ, ಹಲವು ಪ್ರದರ್ಶನಗಳನ್ನು ಸಂಘಟಿಸುತ್ತ ಬಂದ ತಂಡವು ಇದುವರೆಗೂ ೨೫ಕ್ಕೂ ಹೆಚ್ಚು ನಾಟಕಗಳನ್ನು ಸಿದ್ಧಪಡಿಸಿದೆ.
ನಿರ್ದೇಶಕರ ಬಗ್ಗೆ: 2013-2014ನೇ ಸಾಲಿನ ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಉಸ್ತಾದ್ ಬಿಸ್ಮಿಲ್ಲಾಖಾನ್ ಯುವಪುರಸ್ಕಾರ್ ಪ್ರಶಸ್ತಿ ಪಡೆದಿರುವ ದಾಕ್ಷಾಯಿಣಿ ಭಟ್ ರವರು ನೀನಾಸಂನಲ್ಲಿ ಪದವಿ ಪಡೆದು, ಹಲವು ವರ್ಷಗಳಿಂದ ರಂಗಭೂಮಿಯನ್ನು ಉಸಿರಾಗಿಸಿಕೊಂಡು, ನಿರಂತರ ಹೊಸ ಪ್ರಯೋಗಕ್ಕೆ ಹಾತೊರೆಯುತ್ತಾ,ರಂಗಭೂಮಿಗೆ ಒಡ್ಡಿಕೊಂಡಿದ್ದಾರೆ. ಗುಣಮುಖ, ಮಿಡ್ ಸಮ್ಮರ್, ನೈಟ್ ಡ್ರೀಮ್ಸ್ ಸ್ವಪ್ನವಾಸವದತ್ತ, ಪೇಯಿಂಗ್ ಗೆಸ್ಟ್, ಪಂಪನಿಗೆ ಬಿದ್ದ ಕನಸುಗಳು, ಕೊಳ್ಳಿ ಹೀಗೆ ಹಲವಾರು ನಾಟಕಗಳನ್ನು ನಿರ್ದೇಶಿಸಿ ಯಶಸ್ವಿ ಪ್ರದರ್ಶನ ನೀಡುವುದರೊಂದಿಗೆ ರಂಗಭೂಮಿಯಲ್ಲಿ ತನ್ನದೇ ಆದ ನಿಲುವನ್ನು ಹೊಂದಿರುವರು. ಮನಸ್ಸಿಗೆ ವೇದ್ಯವಾದ ಸಂಗತಿಗಳು, ದಕ್ಕುವ ಅನುಭವಗಳ ಜೊತೆ, ನಾಟಕ-ಕೃತಿಯನ್ನು, ಸಂಸ್ಕೃತಿ ಮತ್ತು ಬದುಕನ್ನು ಬಿಂಬಿಸುವ ರಂಗಕೃತಿಯನ್ನಾಗಿಸಿರುವುದು ಇವರ ವೈಶಿಷ್ಟ್ಯತೆ