ದುಬಾಯಿ: ಯು.ಎ.ಇ ಬ್ರಾಹ್ಮಣ ಸಮಾಜದ ಸಂವತ್ಸರ ಪೂರ್ತಿ ನಡೆಯಲಿರುವ ವಿಂಶತಿ ಉತ್ಸವದ 2ನೇ ಕಾರ್ಯಕ್ರಮ ಯಕ್ಷಗಾನ ಸಾಧಕರ ಸನ್ಮಾನ ಮತ್ತು ತಾಳ ಮದ್ದಳೆಯ ‘ಯಕ್ಷ ಮದ್ದಳೆ’ ಕಾರ್ಯಕ್ರಮ ಜೂನ್ 10 ಶನಿವಾರ ಸಂಜೆ ದುಬೈಯ ಫಾರ್ಚ್ಯೂನ್ ಪ್ಲಾಜಾ ಸಭಾಂಗಣದಲ್ಲಿ ಯಶಸ್ವಿಯಾಗಿ ನೆರವೇರಿತು.
ತಾಯ್ನಾಡಿನಿಂದ ಆಗಮಿಸಿದ ಅಥಿತಿ ಕಲಾವಿದರಾದ ಶ್ರೀ ಪದ್ಮನಾಭ ಉಪಾಧ್ಯಾಯ (ಹಿಮ್ಮೇಳ ಕಲಾವಿದರು ಬಪ್ಪನಾಡು ಮೇಳ) ಹಿರಿಯ ಕಲಾವಿದರಾದ ಶ್ರೀ ಮಧೂರು ರಾಧಾಕೃಷ್ಣ ನಾವಡ (ಪಾವಂಜೆ ಮತ್ತು ಬಪ್ಪನಾಡು ಮೇಳ) ಶ್ರೀ ಚೈತನ್ಯ ಕೃಷ್ಣ ಪದ್ಯಾಣ (ಹಿಮ್ಮೇಳ ಕಲಾವಿದರು ಹನುಮಗಿರಿ ಮೇಳ) ವಿದುಷಿ ಸುಮಂಗಲಾ ರತ್ನಾಕರ್ ರಾವ್ (ಯಕ್ಷಾರಾಧನಾ ಕಲಾಕೇಂದ್ರ ಮಂಗಳೂರು) ಇವರನ್ನು ಸ್ಮರಣಿಕೆ ಶಾಲು ಹಾಗೂ ಚಿನ್ನದ ನಾಣ್ಯದೊಂದಿಗೆ ಗೌರವಿಸಿ ಸನ್ಮಾನಿಸಲಾಯಿತು.
ಈ ಸಂಧರ್ಭದಲ್ಲಿ ವೇದಿಕೆಯಲ್ಲಿ ವೀನಸ್ ಹೋಟೆಲ್ ನ ಮಾಲೀಕರು ಮತ್ತು ವಿಂಶತಿ ಸಮಿತಿಯ ಗೌರವಾಧ್ಯಕ್ಷರಾದ ಶ್ರೀ ಪುತ್ತಿಗೆ ವಾಸು ಭಟ್, ಭೀಮ ಜ್ಯೂವೆಲ್ಡರ್ಸ್ ನ ನಿರ್ದೇಶಕರು ಹಾಗು ವಿಂಶತಿ ಸಮಿತಿಯ ಕಾರ್ಯಾಧ್ಯಕ್ಷರಾದ ಶ್ರೀ ನಾಗರಾಜ ರಾವ್, ಕರ್ನಾಟಕ ಸಂಘ ಅಬುಧಾಬಿಯ ಶ್ರೀ ಸರ್ವೋತ್ತಮ್ ಶೆಟ್ಟಿ, ಕರ್ನಾಟಕ ಅನಿವಾಸಿ ಭಾರತೀಯ ವೇದಿಕೆಯ ಅಧ್ಯಕ್ಷರಾದ ಶ್ರೀ ಪ್ರವೀಣ್ ಶೆಟ್ಟಿ, ವಿದ್ವಾನ್ ಚಂದ್ರಶೇಖರ ನಾವಡ, ಕಾರ್ಯಕ್ರಮದ ಮುಖ್ಯ ಪ್ರಾಯೋಜಕರಾದ ಶ್ರೀಮತಿ ಗೋಪಿಕಾ ಮಯ್ಯ ಮತ್ತು ಬ್ರಾಹ್ಮಣ ಸಮಾಜದ ಹಿರಿಯ ಸಂಚಾಲಕರಾದ ಶ್ರೀ ಸುಧಾಕರ ಪೇಜಾವರ ಉಪಸ್ಥಿತರಿದ್ದರು.
ನಂತರ ಅತಿಥಿಗಳು ಹಾಗೂ ಸಮಾಜದ ಹವ್ಯಾಸಿ ಕಲಾವಿದರ ಸಂಗಮದಲ್ಲಿ ಪಣಂಬೂರು ಶ್ರೀ ವೆಂಕಟ್ರಾಯ ಐತಾಳ ವೇದಿಕೆಯಲ್ಲಿ ನಡೆದ ತಾಳಮದ್ದಳೆ “ಕದಂಬ ಕೌಶಿಕೆ”ಯಲ್ಲಿ ಅರ್ಥಧಾರಿಗಳ ವಾಗ್ಜರಿ, ಹಿಮ್ಮೇಳದ ಕೈಚಳಕ ಮತ್ತು ಕರ್ಣಾನಂದದ ಭಾಗವತಿಕೆ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿತು.
ದೇವಿಯಾಗಿ ಸುಮಂಗಲ ರತ್ನಾಕರ್ ಅವರು ನವರಸಗಳ ಮುಖಭಾವದೊಂದಿಗೆ ಅರ್ಥಗರ್ಭಿತ ಮಾತುಗಳ ಪ್ರವಾಹವನ್ನೇ ಹರಿಸಿ ಪ್ರೇಕ್ಷಕರ ಮುಕ್ತ ಪ್ರಶಂಸೆಗೆ ಒಳಗಾದರು. ರಕ್ತಬೀಜನಾಗಿ ರಂಗದ ರಾಜಾ ರಾಧಾಕೃಷ್ಣ ನಾವಡರು ತರ್ಕ ಬದ್ಧ, ತತ್ವ ಬದ್ಧ, ಸಾಹಿತ್ಯಬದ್ಧ ಅರ್ಥವನ್ನು ಹೇಳಿ ರಾರಾಜಿಸಿದರು. ಚೆಂಡೆ ಮದ್ದಳೆಯಲ್ಲಿ ಭಾಗವಹಿಸಿದ ಪದ್ಮನಾಭ ಉಪಾಧ್ಯಾಯರು ಮೊದಲನೇ ಭಾಗವತರಾಗಿ ಕೂಡ ಉತ್ತಮ ಪ್ರದರ್ಶನ ನೀಡಿದರು.
ಚೈತನ್ಯ ಕೃಷ್ಣ ಪದ್ಯಾಣರ ಚಂಡೆ ಮದ್ದಳೆ ತಾಳ ಮದ್ದಳೆಯ ಒಂದು ಪಾತ್ರವೇ ಆಗಿತ್ತು . ಸಮಾಜದ ಹವ್ಯಾಸಿ ಭಾಗವತ ಪ್ರತಿಭಾವಂತ ಕಲಾವಿದರಾರ ಕೃಷ್ಣ ಪ್ರಸಾದ್ ರಾವ್ ಅವರು ವೃತ್ತಿಪರ ಭಾಗವತರಿಗೆ ಕಡಿಮೆ ಇಲ್ಲ ಎಂದು ಮತ್ತೊಮ್ಮೆ ತಮ್ಮ ಅಮೋಘ ಹಾಡುಗಳಿಂದ ಸಾಬೀತು ಪಡಿಸಿದರು. ಶ್ರೀ ವೆಂಕಟೇಶ್ ಶಾಸ್ತ್ರಿಯವರು ಹಿಮ್ಮೇಳದಲ್ಲಿ ಸಹಕರಿಸಿದರೆ, ಶುಂಭನಾಗಿ ಭವಾನಿ ಶಂಕರ ಶರ್ಮ, ಸುಗ್ರೀವನಾಗಿ ಸ್ವಾತಿ ಶರತ್ ಸರಳಾಯ, ಧೂಮ್ರಾಕ್ಷನಾಗಿ ವಿಶ್ವೇಶ್ವರ ಅಡಿಗರು ತಮ್ಮ ತಮ್ಮ ಪಾತ್ರಗಳಿಗೆ ಜೀವ ತುಂಬಿ ಸಭಾಂಗಣವನ್ನು ಅಕ್ಷರಶಹ ಕದಂಬ ಕಾಂತಾರವನ್ನಾಗಿಸಿದರು.
ಯಕ್ಷಮಿತ್ರರು ದುಬೈ ಮತ್ತು ಯಕ್ಷಗಾನ ಅಭ್ಯಾಸ ಕೇಂದ್ರ ದುಬೈಯ ಸಹಕಾರದೊಂದಿಗೆ ಆಯೋಜಿಸಿದ ಕಾರ್ಯಕ್ರಮದಲ್ಲಿ ಕಲಾ ಪೋಷಕರುಗಳಾದ ಕರ್ನಿರೆ ಪ್ರಭಾಕರ ಸುವರ್ಣ, ವೇದವ್ಯಾಸ ಉಡುಪ ಹಾಗು ಹಲವಾರು ಕಲಾಭಿಮಾನಿಗಳು ಮತ್ತು ಸಮಾಜ ಭಾಂದವರು ಉಪಸ್ಥಿತರಿದ್ದರು
ಕಾರ್ಯಕ್ರಮದ ಆರಂಭದಲ್ಲಿ ಸುಧಾಕರ ಪೇಜಾವರ ಅವರು ಸ್ವಾಗತಿಸಿದರೆ, ಆರತಿ ಅಡಿಗರು ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.