ಮಂಗಳೂರು : ಎರಿಕ್ ಅಲೆಕ್ಸಾಂಡರ್ ಒಝೇರಿಯೊ ಇವರ ಜನುಮದ ಅಮೃತೋತ್ಸವ ಪ್ರಯುಕ್ತ, ಅವರು ಭಾಷೆ, ಸಂಗೀತ, ಕಲೆ, ಸಂಸ್ಕೃತಿ, ಸಂಘಟನೆ ಹೀಗೆ ಕೊಂಕಣಿಯ ಸಮಗ್ರ ಅಭಿವೃದ್ಧಿಗಾಗಿ ಮಾಡಿದ ಕಾರ್ಯಗಳನ್ನು ಗೌರವಿಸಲು, ಅವರಿಂದ ಪ್ರೇರಣೆ ಪಡೆದು, ಅವರ ಕೊಂಕಣಿ ಕೆಲಸಗಳ ಮುಂದುವರಿಕೆಯನ್ನು ಪ್ರೋತ್ಸಾಹಿಸಲು ಮಾಂಡ್ ಸೊಭಾಣ್ ‘ಎರಿಕ್ ಅಲೆಕ್ಸಾಂಡರ್ ಒಝೇರಿಯೊ ಅಮೃತೋತ್ಸವ ಸಂಶೋಧನಾ ಅನುದಾನ’ವನ್ನು ಘೋಷಿಸಿದೆ.
ಈ ಅನುದಾನ ಒಂದು ಲಕ್ಷ ರೂಪಾಯಿಯನ್ನು ಒಳಗೊಂಡಿದ್ದು, ಮೂರು ತಿಂಗಳ ಕಾಲಾವಧಿಯಲ್ಲಿ, ಕೆಳಗೆ ನೀಡಿದ ವಿಷಯಗಳ ಪೈಕಿ ಒಂದರ ಮೇಲೆ ಅಧ್ಯಯನಾತ್ಮಕ ಸಂಶೋಧನೆ ನಡೆಸಬೇಕು. ಬೇರೆ ಬೇರೆ ಸಂಶೋಧನಾ ಅಧ್ಯಯನದ ಬಗ್ಗೆ ಈ ಅನುದಾನವನ್ನು ವಾರ್ಷಿಕವಾಗಿ ನೀಡಲಾಗುವುದು. ಕೊಂಕಣಿ ಭಾಷೆ-ಸಂಸ್ಕೃತಿಯ ಬಗ್ಗೆ ಅಧ್ಯಯನ ನಡೆಸುವ ಕ್ಷಮತೆಯುಳ್ಳ, ಯಾವುದೇ ಭಾಷೆ ಅಥವಾ ಕೊಂಕಣಿಯ ಯಾವುದೇ ಭಾಷಾ ಪ್ರಬೇಧದ ಜನರು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 31-07-2024.
ಆಸಕ್ತಿಯುಳ್ಳವರು ತಮ್ಮ ಪರಿಚಯ ಹಾಗೂ ಸಂಶೋಧನೆಗೆ ಆಯ್ಕೆ ಮಾಡಿದ ವಿಷಯದ ಸಾರಾಂಶ ಬರೆದು ಮಾಂಡ್ ಸೊಭಾಣ್ ಮಿಂಚಂಚೆಗೆ ಕಳುಹಿಸತಕ್ಕುದು. ಸಂದರ್ಶನದ ಮುಖಾಂತರ ಯೋಗ್ಯ ಅಭ್ಯರ್ಥಿಯ ಆಯ್ಕೆ ಮಾಡಲಾಗುವುದು. ಈ ಅನುದಾನ ಕೇವಲ ಸಂಶೋಧನೆಗೆ ಮೀಸಲಾಗಿದ್ದು, ಮುದ್ರಣ ಅಥವಾ ಇತರೆ ಮಾಧ್ಯಮದಲ್ಲಿ ಪ್ರಕಟಿಸುವ ಜವಾಬ್ದಾರಿ ಸಂಸ್ಥೆಯದ್ದು.
2024ನೇ ಸಾಲಿಗೆ ಸಂಶೋಧನಾ ವಿಷಯಗಳು:
1. ಕರಾವಳಿಯ ಕೊಂಕಣಿ ಕ್ರೈಸ್ತರ ಭಾಷಾ ಪ್ರಬೇಧದಲ್ಲಿ ವಿವಿಧತೆ ಉಂಟಾಗಲು ಕಾರಣವಾದ ಅಂಶಗಳು ಏನು ?: ಒಂದು ಭಾಷಾ ಶಾಸ್ತ್ರೀಯ ಅಧ್ಯಯನ
2. ಕೊಂಕಣಿ ಕ್ರೈಸ್ತರ ಪಾಕ ಪದ್ಧತಿಗಳು : ರುಚಿ ಮತ್ತು ವೈವಿಧ್ಯತೆ (ಪಾಕ ಪದ್ಧತಿಗಳ ತಲೆತಲಾಂತರದ ಇತಿಹಾಸ, ಸಂಸ್ಕೃತಿ-ಪರಂಪರೆ ಮತ್ತು ಒಳಗೊಂಡಿರುವ ಆರೋಗ್ಯ ಭಾಗ್ಯಗಳ ವಿಶ್ಲೇಷಣೆ)
3. ಬ್ರಾಸ್ ಬ್ಯಾಂಡ್ – ಹಿಂದೆ, ಇಂದು, ಮುಂದೆ : ಸಮಗ್ರ ಸಾಂಸ್ಕೃತಿಕ ಅಧ್ಯಯನ
4. ಕೊಂಕಣಿ ಜನಪದ ಸಂಸ್ಕೃತಿ : ನಡೆದು ಬಂದ ದಾರಿ
ಹೆಚ್ಚಿನ ಮಾಹಿತಿಗಾಗಿ ಫೋನ್ : 8105 22 6626
ಮಿಂಚಂಚೆ : [email protected]
ವಿಳಾಸ: Mandd Sobhann, Kalangann, Shakthinagar, Mangalore 575 016.