ಉಡುಪಿ : ಕಥೊಲಿಕ್ ಸಭಾ ಉಡುಪಿ ಪ್ರದೇಶ ಆಶ್ರಯದಲ್ಲಿ ಕನ್ನಡ ಭಾಷೆಯಲ್ಲಿ ಕ್ರೈಸ್ತ ಸಾಹಿತಿಗಳು ಬರೆದಿರುವ ಪುಸ್ತಕಗಳಿಗೆ ವರ್ಷಂಪ್ರತಿ ನೀಡುವ ‘ದಾಂತಿ ಪುರಸ್ಕಾರ’ಕ್ಕೆ 2023ನೇ ಸಾಲಿನ ವಿನಿಶಾ ರೊಡ್ರಿಗಸ್ ಅವರ ‘ಎತ್ತಿನಗಾಡಿ ಎಕ್ಸ್ ಪ್ರೆಸ್ 2’ ಕೃತಿ ಆಯ್ಕೆಯಾಗಿದೆ. ಅದರ ಮೊದಲ ಭಾಗ 2015ರಲ್ಲಿ ಪ್ರಕಟವಾಗಿದೆ.
ಇಂಗ್ಲೀಷ್ ಸಾಹಿತ್ಯದಲ್ಲಿ ಎಂ.ಎ. ಪದವಿ ಪಡೆದಿರುವ ವಿನಿಶಾ, ಪ್ರಸ್ತುತ ಬೆಂಗಳೂರಿನಲ್ಲಿ ಪ್ರಾಧ್ಯಾಪಕಿಯಾಗಿದ್ದಾರೆ. ಝೀ ಟಿವಿ ಮತ್ತು ದೂರದರ್ಶನ ವಾಹಿನಿಯಲ್ಲಿ ನಾಟಕ, ಯಕ್ಷಗಾನದಲ್ಲಿ ಪಾತ್ರ ನಿರ್ವಹಿಸಿದ್ದಾರೆ. ಕರಾವಳಿ ಕರ್ನಾಟಕದ ಕನ್ನಡ, ಕೊಂಕಣಿ ಹಾಗೂ ಇತರ ಭಾಷೆಯ ಪತ್ರಿಕೆಗಳಲ್ಲಿ ಅವರ ಅಂಕಣಗಳು ಪ್ರಕಟವಾಗಿದೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯವರಾದ ವಿನಿಶಾ, ವಿಕ್ಟರ್ ರೊಡ್ರಿಗಸ್ ಮತ್ತು ವಿಕ್ಟೋರಿಯ ಡಿ’ಮೆಲ್ಲೊ ಪುತ್ರಿ. ಬರಹಗಾರ ಪ್ರಮೋದ್ ರೊಡ್ರಿಗಸ್ ಹೊಸ್ಪೆಟ್ ಪತ್ನಿ.
ಈ ಪ್ರಶಸ್ತಿಯು ರೂ.25 ಸಾವಿರ ನಗದಿನೊಂದಿಗೆ ಶಾಲು, ನೆನಪಿನ ಕಾಣಿಕೆಯನ್ನು ಹೊಂದಿದ್ದು, ದಿನಾಂಕ 09-06-2024ರಂದು ಕಕ್ಕುಂಜೆ ಅನುಗ್ರಹ ಪಾಲನಾ ಕೇಂದ್ರದಲ್ಲಿ ನಡೆಯಲಿರುವ ಕಥೊಲಿಕ್ ಸಭಾ ಉಡುಪಿ ಪ್ರದೇಶ ವಾರ್ಷಿಕ ಮಹಾಸಭೆಯಲ್ಲಿ ಪ್ರದಾನ ಮಾಡಲಾಗುವುದು ಎಂದು ಪುರಸ್ಕಾರ ಸಮಿತಿ ಸಂಚಾಲಕ ಅಲ್ಲೋನ್ಸ್ ಡಿ’ಕೋಸ್ತಾ ತಿಳಿಸಿದ್ದಾರೆ.