ಮಂಗಳೂರು : ನೃತ್ಯ ಗುರುಗಳ ಸಂಘಟನೆಯಾದ ಕರ್ನಾಟಕ ಕರಾವಳಿ ನೃತ್ಯ ಕಲಾ ಪರಿಷತ್ ಆಯೋಜಿಸಿದ ನೃತ್ಯ ಕ್ಷೇತ್ರದಲ್ಲಿ ಸತತ 170 ಗಂಟೆಗಳ ಕಾಲ ಭರತನಾಟ್ಯ ಮ್ಯಾರಥಾನ್ ಮಾಡಿ ಗೋಲ್ಡನ್ ಬುಕ್ ರೆಕಾರ್ಡ್ ಮಾಡಿದ ಸೌರಭ ನೃತ್ಯಕಲಾ ಪರಿಷತ್ ಸಂಸ್ಥೆಯ ಡಾ .ಶ್ರೀವಿದ್ಯಾ ರವರ ಶಿಷ್ಯೆ ರೆಮೋನಾ ಎವೆಟ್ ಪಿರೇರಾ ಇವರಿಗೆ ಅಭಿನಂದನಾ ಸಮಾರಂಭ ದಿನಾಂಕ 03 ಆಗಸ್ಟ್ 2025ರ ಭಾನುವಾರದಂದು ಮಂಗಳೂರಿನ ಶರವು ದೇವಳದ ದ್ಯಾನ ಮಂದಿರದಲ್ಲಿ ನಡೆಯಿತು.
ಸಮಾರಂಭದಲ್ಲಿ ರೆಮೋನಾ ಎವೆಟ್ ಪಿರೇರಾ ಇವರನ್ನು ಅಭಿನಂದಿಸಿದ ಶರವು ಕ್ಷೇತ್ರದ ಶಿಲೆ ಶಿಲೆ ಮೊಕ್ತೇಸರರಾದ ರಾಘವೇಂದ್ರ ಶಾಸ್ತ್ರಿಯವರು ಮಾತನಾಡಿ “ಸಾಧನೆಯಿಂದ ಯಶಸ್ಸು ಖಂಡಿತಾ ದೊರೆಯುತ್ತದೆ. ಮನುಷ್ಯ ಸಾಧನೆಯಿಂದ ಏನನ್ನೂ ಸಾಧಿಸಬಹುದು. ಸಾಧನೆ ಎಂದರೆ ಒಬ್ಬ ವ್ಯಕ್ತಿ ತನಗೆ ತಾನೇ ಹಾಕಿಕೊಂಡ ಗುರಿಯನ್ನು ತಲಪುವುದು ಅಥವಾ ಒಂದು ನಿರ್ದಿಷ್ಟ ಕೆಲಸವನ್ನು ಯಶಸ್ವಿಯಾಗಿ ಪೂರ್ತಿಗೊಳಿಸಿ ಅದರಲ್ಲಿ ತೃಪ್ತಿ ಹೊಂದುವುದು. ಇಂದು ರೆಮೋನಾ ಊಟ ತಿಂಡಿ ನಿದ್ರೆ ದೈನಂದಿನ ನಿತ್ಯ ಕಾರ್ಯಗಳನ್ನು ಹತೋಟಿಯಲ್ಲಿಟ್ಟುಕೊಂಡು ನೃತ್ಯ ಕ್ಷೇತ್ರದಲ್ಲಿ ಒಂದು ವಿಶೇಷ ಸಾಧನೆ ಮಾಡಿದ್ದು ನಮ್ಮ ಜಿಲ್ಲೆಗೆ ಹೆಮ್ಮೆ ಅಲ್ಲದೆ ನಮ್ಮ ಜಿಲ್ಲೆಯ ಹೆಸರನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಕಲಾವಿದೆಗೆ ನಾಟ್ಯಾಧಿ ದೇವರಾದ ನಟರಾಜನು ಅನುಗ್ರಹಿಸಲಿ. ಆಕೆಗೆ ಸದಾ ಪ್ರೋತ್ಸಾಹ ನೀಡುತ್ತಿರುವ ಆಕೆಯ ತಾಯಿ ಮತ್ತು ಗುರುಗಳು ಸಾದಾ ಸ್ತುತ್ಯಾರ್ಹರು” ಎಂದರು. ಅಧ್ಯಕ್ಷೆ ರಾಜಶ್ರೀ ಉಳ್ಳಾಲ್ ಅಭಿನಂದನೆಯ ಮಾತುಗಳನ್ನಾಡಿದರು.
ಅಭಿನಂದನೆಯನ್ನು ಸ್ವೀಕರಿಸಿ ಮಾತನಾಡಿದ ರೆಮೋನಾ “ನನ್ನ ಯಶಸ್ಸಿನ ಹಿಂದೆ ತಾಯಿ ಮತ್ತು ಗುರುಗಳ ಅಲ್ಲದೆ ಜಿಲ್ಲೆಯ ಎಲ್ಲಾ ಕಲಾಭಿಮಾನಿಗಳ ಆಶೀರ್ವಾದದಿಂದ ಇದು ಸಾಧ್ಯವಾಯಿತು” ಎಂದರು.
ಕೋಶಾಧಿಕಾರಿ ವಿದ್ವಾನ್ ಸುರೇಶ್ ಅತ್ತಾವರ, ಉಪಾಧ್ಯಕ್ಷ ವಿದ್ವಾನ್ ಚಂದ್ರಶೇಖರ ನಾವಡ, ಟ್ರಸ್ಟಿಗಳಾದ ವಿದ್ವಾನ್ ಪ್ರವೀಣ್ ಯು ಕೆ. ವಿದುಷಿ ನಯನ ವಿ ರೈ ಪುತ್ತೂರು. ವಿದ್ವಾನ್ ಸುದರ್ಶನ್, ದೀಪಕ್ ಕುಮಾರ್ ಪುತ್ತೂರು, ಭವಾನಿ ಶಂಕರ ಉಡುಪಿ, ವಿದುಷಿಯರಾದ ಮಂಜುಳಾ ಸುಬ್ರಹ್ಮಣ್ಯ, ಸವಿತಾ ಜೀವನ್, ಲತಾ ಶಶಿಧರ್, ವಿದ್ಯಾಶ್ರೀ ರಾಧಾಕೃಷ್ಣ, ಹಾಗೂ ಹಾಗೂ ಪರಿಷತ್ ಸದಸ್ಯರಾದ ಹಿರಿಯ ಕಿರಿಯ ನೃತ್ಯ ಗುರುಗಳು ಉಪಸ್ಥಿತರಿದ್ದರು. ಪರಿಷತ್ ನ ಕಾರ್ಯದರ್ಶಿ ವಿದುಷಿ ಶಾರದಾಮಣಿ ಶೇಖರ್ ಸ್ವಾಗತಿಸಿ, ಜತೆ ಕಾರ್ಯದರ್ಶಿ ಶ್ರೀಧರ ಹೊಳ್ಳ ನಿರೂಪಿಸಿ ವಂದಿಸಿದರು.