ಮಂಗಳೂರು : ಪ್ರೊ. ಅಮೃತ ಸೋಮೇಶ್ವರರ ನೆನಪಿನ ‘ತುಳು ನಾಟಕ ರಚನಾ ಕಾರ್ಯಾಗಾರ’ದ ಮೊದಲ ಹಂತವು 19 ಜುಲೈ 2024ರಿಂದ 21 ಜುಲೈ 2024ರವರೆಗೆ ಮಂಗಳೂರಿನ ಶಕ್ತಿನಗರದಲ್ಲಿರುವ ಕಲಾಂಗಣ್ ನಲ್ಲಿ ನಡೆಯಿತು. ಈ ಕಾರ್ಯಾಗಾರವನ್ನು ಮಂಗಳೂರಿನ ಹವ್ಯಾಸಿ ನಾಟಕ ತಂಡ ಜರ್ನಿ ಥೇಟರ್ ಗ್ರೂಪ್ (ರಿ.) ಆಯೋಜಿಸಿತ್ತು.
ಕಾರ್ಯಾಗಾರದ ಉದ್ಘಾಟನೆಯ ಸಂದರ್ಭ ಕಲಾಂಗಣ್ ನ ಎರಿಕ್ ಒಸಾರಿಯೋ, ಅಮೃತರ ಒಡನಾಡಿ ಸದಾಶಿವ ಉಚ್ಚಿಲ್, ಚೇತನ್ ಸೋಮೇಶ್ವರ ಮತ್ತು ರಾಜೇಶ್ವರಿ, ಜೀವನ್ ಸೋಮೇಶ್ವರ ಮತ್ತು ಸತ್ಯಾ ಜೀವನ್, ರೋಹನ್ ಉಚ್ಚಿಲ್ ಉಪಸ್ಥಿತರಿದ್ದರು. ಶಿಬಿರದ ಮಾರ್ಗದರ್ಶಕರಾಗಿ ನಾಟಕಕಾರ, ನಟ, ನಿರ್ದೇಶಕ ಮೈಸೂರಿನ ಎಸ್. ರಾಮನಾಥ್ ಮತ್ತು ಶಿಬಿರ ನಿರ್ದೇಶಕರಾಗಿ ನಟ, ಮಂಗಳೂರಿನ ವಿದ್ದು ಉಚ್ಚಿಲ್ ಕಾರ್ಯನಿರ್ವಹಿಸಿದರು.
ಉಡುಪಿ, ಕಾಸರಗೋಡು, ಪುತ್ತೂರು, ಉಪ್ಪಿನಂಗಡಿ, ಪೂಂಜಾಲಕಟ್ಟೆ, ಬೆಳ್ತಂಗಡಿ, ಬಂಟ್ವಾಳ, ವಾಮಂಜೂರು, ಮಂಗಳೂರು ಮೊದಲಾದ ಪ್ರದೇಶಗಳಿಂದ ಅಭ್ಯರ್ಥಿಗಳು (ಮಹಿಳೆಯರೂ ಮತ್ತು ಪುರುಷರೂ) ಭಾಗವಹಿಸಿದ್ದರು. ಈ ಕಾರ್ಯಾಗಾರವು ಸಂಪೂರ್ಣವಾಗಿ ಉಚಿತವಾಗಿದ್ದು, ಅಭ್ಯರ್ಥಿಗಳಿಗೆ ವಸತಿ, ಊಟೋಪಚಾರದ ವ್ಯವಸ್ಥೆಯನ್ನು ಒದಗಿಸಲಾಗಿತ್ತು.
ನಾಟಕ ಬರವಣಿಗೆಯನ್ನು ಆರಂಭಿಸುವ ಹಿನ್ನೆಲೆಯಲ್ಲಿ ಇರಬೇಕಾದ ಪೂರ್ವತಯಾರಿ, ಬರವಣಿಗೆಯಲ್ಲಿ ಪಳಗುವಿಕೆ, ಕತೆಗಳನ್ನು ಗ್ರಹಿಸುವ ಬಗೆ, ಸಿದ್ಧಕತೆಗಳನ್ನು ನಮ್ಮ ಕತೆಗಳನ್ನಾಗಿ ನಾಟಕದಲ್ಲಿ ಬರೆಯುವ ರೀತಿ, ಅನುವಾದ, ರೂಪಾಂತರ, ಪಾತ್ರ ಚಿತ್ರಣ, ದೃಶ್ಯ ಕಟ್ಟುವಿಕೆ, ಭಾಷಾ ಬಳಕೆ – ಇನ್ನೂ ಅನೇಕ ಸಂಗತಿಗಳನ್ನು ಪ್ರಾಯೋಗಿಕವಾಗಿ ತಿಳಿಸಿಕೊಡಲಾಯಿತು. ಜೊತೆಗೆ ಅಭ್ಯರ್ಥಿಗಳ ಮೂಲಕ ಕಾರ್ಯಾಗಾರದಲ್ಲಿಯೇ ಬರವಣಿಗೆಗಳನ್ನು ಮಾಡಿಸಲಾಯಿತು.
ಕಾರ್ಯಾಗಾರದ ಮುಂದಿನ ಹಂತವು ದಿನಾಂಕ 03-08-2024 ಮತ್ತು 04-08-2024ರಂದು ನಡೆಯಲಿದೆ. ತುಳು ರಂಗಭೂಮಿಯಲ್ಲಿ ಇದೊಂದು ಹೊಸ ಬಗೆಯ ಪ್ರಯತ್ನವಾಗಿದ್ದು ಆಧುನಿಕ ತುಳು ರಂಗಭೂಮಿಗೆ ಹೊಸಪಠ್ಯಗಳು ರಚನೆಯಾಗಬೇಕು ಎಂಬ ನೆಲೆಯಲ್ಲಿ ಕೈಗೊಂಡಿರುವ ಈ ಕಾರ್ಯವು ಶ್ಲಾಘನೆಗೆ ಒಳಗಾಗಿರುವುದು ಹರ್ಷದಾಯಕ ಸಂಗತಿ.