ಕಾಸರಗೋಡು : ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕದ ಆಶ್ರಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ 110ನೇ ಸಂಸ್ಥಾಪನ ದಿನಾಚರಣೆಯು ಕಾಸರಗೋಡಿನಲ್ಲಿರುವ ಸಾಹಿತ್ಯ ಪರಿಷತ್ತು ಕಚೇರಿಯಲ್ಲಿ ದಿನಾಂಕ 05-05-2024ರಂದು ನಡೆಯಿತು.
ಹಿರಿಯ ಸಾಹಿತಿ ವೈ. ಸತ್ಯನಾರಾಯಣ ಕಾಸರಗೋಡು ಇವರು ಸಂಸ್ಥಾಪನ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ “ಕನ್ನಡಿಗರನ್ನು ಬೆಸೆಯುವಲ್ಲಿ ಕನ್ನಡವನ್ನು ಬೆಳೆಸುವಲ್ಲಿ ಸಾಹಿತ್ಯ ಪರಿಷತ್ತಿನ ಕೊಡುಗೆ ಅಪಾರವಾದುದು” ಎಂದು ಹೇಳಿದರು. ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ. ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಅಧ್ಯಕ್ಷತೆ ವಹಿಸಿದರು.
ಮೀಯಪದವು ಶ್ರೀ ವಿದ್ಯಾವರ್ಧಕ ಹೈಯರ್ ಸೆಕಂಡರಿ ಶಾಲೆಯ ಮುಖ್ಯ ಶಿಕ್ಷಕ ರಾಜಾರಾಮ ರಾವ್ ಇವರು ‘ಜನಸಾಮಾನ್ಯರತ್ತ ಕನ್ನಡ ಸಾಹಿತ್ಯ ಪರಿಷತ್ತು’ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಹುಟ್ಟು ಬೆಳೆದು ಬಂದ ದಾರಿ, ಜನಸಾಮಾನ್ಯರನ್ನು ತನ್ನತ್ತ ಸೆಳೆದ ಬಗೆಯನ್ನು ವಿವರಿಸಿ ಕನ್ನಡ ಭಾಷೆ, ಸಂಸ್ಕೃತಿಯ ಬೆಳವಣಿಗೆಯಲ್ಲಿ ಪರಿಷತ್ ವಹಿಸಿದ ಪಾತ್ರ ಮಹತ್ತರವಾದುದು ಎಂದು ಅವರು ಹೇಳಿದರು. ಮೀಯಪದವು ಹೈಯರ್ ಸೆಕೆಂಡರಿ ಶಾಲೆಯ ಕನ್ನಡ ಪ್ರಾಧ್ಯಾಪಕ ಹರೀಶ ಜಿ. ಶುಭಹಾರೈಸಿದರು. ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ವೈ. ಸತ್ಯನಾರಾಯಣ ಕಾಸರಗೋಡು ಅವರನ್ನು ಅಭಿನಂದಿಸಲಾಯಿತು.
ದಕ್ಷಿಣ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಅನುಜ್ಞಾ ಲಕ್ಷ್ಮೀ ಪಿ. ಮತ್ತು ಅನನ್ಯಾ ಪಿ. ನಾಡಗೀತೆ, ಭಾವಗೀತೆ, ಜಾನಪದ ಗೀತೆಗಳನ್ನು ಹಾಡಿದರು. ಪರಿಷತ್ತಿನ ಗೌರವ ಕಾರ್ಯದರ್ಶಿ ಶೇಖರ ಶೆಟ್ಟಿ ಬಾಯಾರು ಸ್ವಾಗತಿಸಿ, ಸಂಘಟನಾ ಕಾರ್ಯದರ್ಶಿ ವಿಶಾಲಾಕ್ಷ ಪುತ್ರಕಳ ಕಾರ್ಯಕ್ರಮ ನಿರೂಪಿಸಿ, ಗೌರವ ಕಾರ್ಯದರ್ಶಿ ಪ್ರದೀಪ್ ಕುಮಾರ್ ಶೆಟ್ಟಿ ವಂದಿಸಿದರು.