ಕನ್ನಡ ಸಾಹಿತ್ಯ ಪರಿಷತ್ 1915 ಮೇ 5ರಂದು ಶ್ರೀ ಕೃಷ್ಣ ರಾಜ ಪರಿಷನ್ಮಂದಿರದಲ್ಲಿ ಆಗಿನ ಮೈಸೂರು ಅರಸರಾಗಿದ್ದ ಶ್ರೀ ರಾಜರ್ಷಿ ನಾಲ್ವಡಿ ಕೃಷ್ಣ ರಾಜ ಒಡೆಯರ್ ಅವರಿಂದ ಸ್ಥಾಪಿಸಲ್ಪಟ್ಟಿತ್ತು. ಆರಂಭವಾಗುವಾಗ ಕರ್ನಾಟಕ ಸಾಹಿತ್ಯ ಪರಿಷತ್ ಎಂದು ನಾಮಕರಣಗೊಂಡರೂ ಮುಂದೆ 1935ರಲ್ಲಿ ‘ಕನ್ನಡ ಸಾಹಿತ್ಯ ಪರಿಷತ್’ ಎಂದು ಮರು ನಾಮಕರಣಗೊಂಡಿತ್ತು. ಕನ್ನಡ ನಾಡಿನ ಅಸ್ಮಿತೆಯ ಪ್ರತೀಕವಾಗಿರುವ ಕನ್ನಡ ಸಾಹಿತ್ಯ ಪರಿಷತ್, ಕನ್ನಡ ನಾಡು- ನುಡಿಯ ಸಂರಕ್ಷಣೆ ಮತ್ತು ಕನ್ನಡ ಭಾಷೆಗಾಗಿ ಶ್ರಮಿಸಲು ಕಟ್ಟಲಾಗಿರುವ ಸಮಸ್ತ ಕನ್ನಡಿಗರ ಏಕೈಕ ಪ್ರಾತಿನಿಧಿಕ ಸಂಸ್ಥೆಯಾಗಿರುತ್ತದೆ. ಕನ್ನಡ ಭಾಷೆಯನ್ನು ಉಳಿಸಿ-ಬೆಳೆಸಿ, ಉತ್ತೇಜಿಸಲು ಕಟ್ಟಲಾಗಿರುವ ಈ ಸಂಸ್ಥೆ ಕರ್ನಾಟಕ ರಾಜ್ಯದಾದ್ಯಂತ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ಆಯೋಜಿಸುತ್ತದೆ. ಸಮೃದ್ಧವಾಗಿರುವ ಕನ್ನಡ ಸಾಹಿತ್ಯವನ್ನು ಮತ್ತಷ್ಟು ಶ್ರೀಮಂತಗೊಳಿಸಿ ನಾಡಿನ ಮೂಲೆ ಮೂಲೆಗೆ ಕನ್ನಡದ ಕಂಪನ್ನು ಪಸರಿಸುವ ಕಾರ್ಯವನ್ನು ಸದ್ದಿಲ್ಲದೆ ಮಾಡುತ್ತಿದೆ. ನಮ್ಮ ಕನ್ನಡ ನಾಡಿನ ಜನರ ಜೀವನಾಡಿಯಂತೆ ಕೆಲಸ ಮಾಡುವ ಕನ್ನಡ ಸಾಹಿತ್ಯ ಪರಿಷತ್ ಆರಂಭವಾದ ದಿನ ಮೇ 5ರಂದು ರಾಜ್ಯದಾದ್ಯಂತ ಸಂತಸ ಸಡಗರ ಸಂಭ್ರಮಗಳಿಂದ ಕನ್ನಡ ಸಾಹಿತ್ಯ ಪರಿಷತ್ ಸಂಸ್ಥಾಪನ ದಿನ ಎಂದು ಆಚರಿಸಲಾಗುತ್ತದೆ. ಈ ದಿನದಂದು ಶಾಲೆ ಕಾಲೇಜುಗಳಲ್ಲಿ ಕನ್ನಡದ ಕವಿಗಳ ಪರಿಚಯ, ಕನ್ನಡದ ಕೃತಿಗಳ ಪರಿಚಯ, ಕನ್ನಡದ ಸಾಹಿತ್ಯದ ತೇರನ್ನು ಏಳೆಯುವ ಸಾಧಕರನ್ನು ಗುರುತಿಸಿ ಗೌರವಿಸುವ ಕಾರ್ಯವನ್ನು ಮಾಡಲಾಗುತ್ತಿದೆ. ಯುವಜನರಲ್ಲಿ ಕನ್ನಡ ಸಾಹಿತ್ಯದ ಬಗ್ಗೆ ಒಲವು ಮೂಡಿಸುವ ಕಾರ್ಯಕ್ರಮ ಆಯೋಜಿಸಲಾಗುತ್ತದೆ. ಮುಚ್ಚಿ ಹೋಗುತ್ತಿರುವ ಕನ್ನಡ ಶಾಲೆಗಳನ್ನು ಪುನಶ್ಚೇತನಗೊಳಿಸುವ ಬಗ್ಗೆಯೂ ತೀವ್ರವಾದ ಚಿಂತನೆ ನಡೆಸಿ ತಾಯಿ ಭುವನೇಶ್ವರಿಯ ಸೇವೆಯನ್ನು ಎಲ್ಲರೂ ಮತ್ತಷ್ಟು ಮುತುವರ್ಜಿಯಿಂದ ನಡೆಸುವಂತೆ ಜನರನ್ನು ಹುರಿದುಂಬಿಸಲಾಗುತ್ತದೆ. ಒಟ್ಟಿನಲ್ಲಿ ಸಂಸ್ಥಾಪನ ದಿನ ಎಲ್ಲಾ ಕನ್ನಡಿಗರಿಗೆ ಬಹಳ ಸಂಭ್ರಮದ ಹಾಗೂ ಜವಾಬ್ದಾರಿಯನ್ನು ಮಗದೊಮ್ಮೆ ಎಚ್ಚರಿಸುವ ದಿನ ಎಂದರೂ ತಪ್ಪಾಗಲಾರದು.
ನಾಡಿನ ಏಕೀಕರಣದ ಹೋರಾಟಗಾರರು, ನಾಡಿನ ಖ್ಯಾತ ಸಾಹಿತಿಗಳು, ವಿದ್ವಾಂಸರು, ಮೈಸೂರಿನ ಆಡಳಿತಗಾರರು, ಅಧ್ಯಾಪಕರು ಮತ್ತು ಸಾರ್ವಜನಿಕ ಗಣ್ಯರು ಹೀಗೆ ಹತ್ತು ಹಲವು ಜನರ ಹೋರಾಟ ಮತ್ತು ಪಾಲ್ಗೊಳ್ಳುವಿಕೆಯ ಕಾರಣದಿಂದ ಹಾಗೂ ಸಾವಿರಾರು ಕನ್ನಡದ ಕಟ್ಟಾಳುಗಳ ಸಂಯುಕ್ತ ಶ್ರಮ ತ್ಯಾಗಗಳ ಫಲವಾಗಿ ಕನ್ನಡ ಸಾಹಿತ್ಯ ಪರಿಷತ್ ಉದಯವಾಯಿತು. ಶ್ರೀ ಸರ್. ಎಂ. ವಿಶ್ವೇಶ್ವರಯ್ಯ, ಹೆಚ್.ವಿ. ನಂಜುಂಡಯ್ಯ, ಆಲೂರು ವೆಂಕಟರಾಯರು, ಅಚ್ಯುತರಾವ್, ಬಹುದ್ದೂರ್ ಶ್ಯಾಮರಾವ್ ಹೀಗೆ ಹತ್ತು ಹಲವು ಗಣ್ಯರು ಸೇರಿ ಅಹರ್ನಿಶಿ ನಡೆಸಿದ ಹೋರಾಟ, ಚಿಂತನೆ ಮತ್ತು ಪರಿಶ್ರಮಗಳ ಪರಿಣಾಮವಾಗಿ ಕನ್ನಡ ಸಾಹಿತ್ಯ ಪರಿಷತ್ ರೂಪಗೊಂಡಿತು. ನಾಲ್ವಡಿ ಕೃಷ್ಣರಾಜ ಅರಸರು ಶ್ರೀ ಎಂ. ವಿಶ್ವೇಶ್ವರಯ್ಯ ಅವರ ಅಭಿಲಾಷೆಯಂತೆ ಮೈಸೂರು ರಾಜ್ಯದ ಸಮಗ್ರ ಅಭಿವೃದ್ಧಿಗಾಗಿ ಮೂರು ಉಪಸಮಿತಿ ನಿರ್ಮಿಸಿದರು. ಅದರಲ್ಲಿ ವಿದ್ಯಾಸಮಿತಿಗೆ ಅಧ್ಯಕ್ಷರಾಗಿ ಹೆಚ್.ವಿ. ನಂಜುಡಯ್ಯ ಮತ್ತು ವಿ. ಸುಬ್ರಮಣ್ಯ ಅಯ್ಯರ್ ಕಾರ್ಯದರ್ಶಿಗಳಾಗಿ ನೇಮಕಗೊಂಡರು. ಈ ಸಮಿತಿ ಎರಡು ಜಾಗತಿಕ ನಿರ್ಣಯ ತೆಗೆದುಕೊಂಡು ಮೈಸೂರು ವಿಶ್ವವಿದ್ಯಾಲಯ ಸ್ಥಾಪನೆ ಮತ್ತು ಕನ್ನಡ ಸಾಹಿತ್ಯ ಪರಿಷತ್ ಸ್ಥಾಪನೆಗೆ ಚಾಲನೆ ನೀಡಿದರು. ಈ ವಿಚಾರವಾಗಿ ಶ್ರೀ ಬಿ.ಎಂ. ಶ್ರೀಕಂಠಯ್ಯನವರು ಐತಿಹಾಸಿಕ ಉಪನ್ಯಾಸ ನೀಡಿ ಸಾಹಿತ್ಯ ಪರಿಷತ್ತಿನ ಸ್ಥಾಪನೆಗೆ ಹೆಚ್ಚು ಶಕ್ತಿ ತುಂಬಿದರು. ಇದರ ಫಲಶ್ರುತಿಯಾಗಿ ಮೊದಲನೆ ಕನ್ನಡ ಸಾಹಿತ್ಯ ಸಮ್ಮೇಳನ 1915 ಮೇ 3ರಿಂದ ಮೇ 5ರವರೆಗೆ ಜರುಗಿ, ಅಧಿಕೃತವಾಗಿ ದಿನಾಂಕ 05-05-1915ರಂದು ಕನ್ನಡ ಸಾಹಿತ್ಯ ಪರಿಷತ್ ಜನ್ಮ ತಾಳಿತು.
ಡಾ. ಮುರಳಿ ಮೋಹನ್ ಚೂಂತಾರು