ಲಾವಣ್ಯ (ರಿ) ಬೈಂದೂರು ಮಕ್ಕಳ ತಂಡದ ಮುದ್ದು ಮಕ್ಕಳು ನಾನು ಬರೆದಿರುವ ‘ನಿದ್ರಾನಗರಿ’ ನಾಟಕವನ್ನು ದಿನಾಂಕ 01-05-2024ರಂದು ಬೈಂದೂರಲ್ಲಿ ಅತ್ಯುತ್ತಮವಾಗಿ ಅಭಿನಯಿಸಿದರು. ಲಾವಣ್ಯ ಬೈಂದೂರು ತಂಡದ ಗಣೇಶ್ ಕಾರಂತರ ಸಮರ್ಥ ನಿರ್ದೇಶನದಲ್ಲಿ ಪುಟಾಣಿ ಮಕ್ಕಳು ವಿಶಿಷ್ಟ ಪ್ರತಿಭೆಯಿಂದ ಅಭಿನಯಿಸಿ ಪ್ರೇಕ್ಷಕರ ಮನೆಗೆದ್ದರು. ಪುಟ್ಟ ಚಿಕುಣಿ ಮಗುವಿಂದ ಹಿಡಿದು 13-14 ವರ್ಷದ ಮಕ್ಕಳ ತಂಡ ಇದಾಗಿದ್ದು, ಪ್ರತಿಯೊಂದು ಮಗುವಿನ ಸ್ಪಷ್ಟ ಕನ್ನಡ ಮಾತು, ತುಂಟತನದ ಜೀವಜೀವ ಆಂಗಿಕ ಅಭಿನಯ, ಅತ್ಯುತ್ತಮ ಬೆಳಕನ್ನು ಬಳಸಿಕೊಂಡ ರೀತಿ ವಿಶೇಷವಾದದ್ದು. ನಾಟಕಕ್ಕೆ ಪೂರಕವಾದ ರಂಗಸಂಗೀತ ಹಾಗೂ ಮಕ್ಕಳಿಗೆ ಇಷ್ಟವಾಗುವ ಬಣ್ಣ ಬಣ್ಣದ ವೇಷಭೂಷಣ, ರಂಗಪರಿಕರ ಚಂದಮಾಮದ ಬಣ್ಣದ ಚಿತ್ರಗಳಂತೆ ಅದ್ಭುತ ಮಾಂತ್ರಿಕ ಲೋಕದಲ್ಲಿ ಹಿರಿಯರೂ ಮಕ್ಕಳಾಗಿ ಮೈಮರೆಯುವಂತೆ ಮಾಡಿತು. ಮಾಟಗಾತಿ, ಕಾಕಿ, ಕಿನ್ನರಿಯರು, ರಾಜ-ರಾಣಿ, ರಾಜಕುಮಾರ ಮುಂತಾದ ಕೇಂದ್ರ ಪಾತ್ರಗಳು ಮಾತ್ರವಲ್ಲ ಪ್ರತಿಯೊಂದು ಚಿಕ್ಕ ಪಾತ್ರವೂ ಮನದಲ್ಲಿ ನಿಂತು ನಾಟಕದ ಯಶಸ್ಸಿಗೆ ಕಾರಣವಾಯಿತು.
ಸುಮಾರು 14 ವರ್ಷಗಳ ಹಿಂದೆ ನಾನು ಬರೆದ ನಾಟಕ ‘ನಿದ್ರಾನಗರಿ’. ಈ ಮಕ್ಕಳ ನಾಟಕವನ್ನು ಕನ್ನಡದ ಹಲವು ಶ್ರೇಷ್ಠ ನಿರ್ದೇಶಕರು ನಿರ್ದೇಶಿಸಿದ್ದಾರೆ. ಅಮೇರಿಕಾದಲ್ಲಿ ನೆಲೆಸಿರುವ ಕನ್ನಡಿಗ ಮಕ್ಕಳು ಕೂಡ ಅಭಿನಯಿಸಿದ್ದಾರೆ. ದಿನಾಂಕ 05-05-2024ರಂದು ಮೈಸೂರು ರಂಗಾಯಣದ ಶಿಬಿರದ ಮಕ್ಕಳು ‘ನಿದ್ರಾನಗರಿ’ ಎಂಬ ನಾಟಕವನ್ನು ಅಭಿವ್ಯಕ್ತಿಸಲಿದ್ದಾರೆ. ಮಕ್ಕಳ ಚೈತನ್ಯ, ಲವಲವಿಕೆ, ಜೀವಂತಿಕೆ, ತುಂಟತನ, ಪ್ರತಿಭೆ ನಾಟಕ ಬರೆದದ್ದು ಸಾರ್ಥಕವೆನಿಸುವಂತೆ ಮಾಡುತ್ತದೆ. ಬರೆದ ನಾಟಕ ಪ್ರದರ್ಶನವಾದರೆ ಮಾತ್ರ ಅದಕ್ಕೆ ಜೀವ. ನಾಟಕ ನಿರ್ದೇಶಕರಿಗೆ, ರಂಗದ ಹಿಂದೆ ಮುಂದೆ ಪರಿಶ್ರಮಿಸುವ ಕಲಾವಿದರಿಗೆ, ಅಭಿನಯಿಸುವ ರಂಗದ ಪುಟಾಣಿ ದೇವತೆಗಳಿಗೆ ಅಭಿನಂದನೆಗಳು.