21 ಮಾರ್ಚ್ 2023, ಬೆಂಗಳೂರು: ಸ್ವಾತಂತ್ರ್ಯ ಅಮೃತ ಮಹೋತ್ಸವ ನಿಮಿತ್ತ ಕರ್ನಾಟಕ ಲೇಖಕಿಯರ ಸಂಘ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ದಿ ಪ್ರಾಧಿಕಾರ ಹಾಗೂ ಶೇಷಾದ್ರಿಪುರ ಕನ್ನಡ ಸಂಘ ದಿನಾಂಕ 18-03-2023ರ ಶನಿವಾರದಂದು ಶೇಷಾದ್ರಿಪುರದಲ್ಲಿ “ಗಡಿನಾಡು ಪ್ರದೇಶ ಲೇಖಕಿಯರ ಸಮಾವೇಶವನ್ನು ಆಯೋಜಿಸಿತ್ತು.
ಕಾರ್ಯಕ್ರಮವನ್ನು ಕರ್ನಾಟಕ ಗಡಿ ಪ್ರದೇಶ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ.ಸೋಮಶೇಖರ್ ಉದ್ಘಾಟಿಸಿ, “ಗಡಿನಾಡ ಪ್ರದೇಶಗಳ ಅಸ್ಮಿತೆ ಕಾಪಾಡುವ ನಿಟ್ಟಿನಲ್ಲಿ ಕೆಲ ಪ್ರಮುಖ ಕ್ರಮಗಳನ್ನು ಕೈಕೊಳ್ಳಲಾಗಿದೆ. ಗಡಿನಾಡು ಪ್ರದೇಶದಲ್ಲಿ ಮಹಿಳೆಯರ ಪಾತ್ರ ವಿಶೇಷವಾದದ್ದು. ಕನ್ನಡದ ಅಸ್ಮಿತೆ ರಕ್ಷಿಸಲು ಲೇಖಕಿಯರ ಶ್ರಮ ಅಪರವಾದದ್ದು. ಮಹಿಳೆಯರು ಪುರುಷರಿಗಿಂತ ಹೆಚ್ಚು ಸಂವೇದನಾಶೀಲರು ಮತ್ತು ದಾರ್ಶನಿಕರು. ಸರ್ಕಾರದ ಅಧಿಕಾರಿಗಳು ಗಡಿನಾಡ ಪ್ರದೇಶಕ್ಕೆ ಆಗಾಗ್ಗೆ ಭೇಟಿ ನೀಡಿದರೆ ಅಲ್ಲಿನ ವಾಸ್ತವ ಸ್ಥಿತಿ ಚೆನ್ನಾಗಿ ಗೊತ್ತಾಗಲಿದೆ. ಗಡಿ ಭಾಗದ ಶೈಕ್ಷಣಿಕ ಸಮಸ್ಯೆಗಳನ್ನು ಬಗೆಹರಿಸಿ, ಶಾಲಾ ಕೊಠಡಿಗಳು ಮತ್ತು ಗ್ರಂಥಾಲಯಗಳನ್ನು ಸೇರಿಸಿ ಇತರ ಸೌಲಭ್ಯಗಳನ್ನು ಕಲ್ಪಿಸಲಾಗುವುದು. ಅನೇಕ ಸಂಘ ಸಂಸ್ಥೆಗಳಿಗೆ ಅನುದಾನ ನೀಡುವ ಮೂಲಕ ನಾಡಿನ ಸಂಸ್ಕೃತಿಯನ್ನು ಉಳಿಸಿ ಬೆಳೆಸಲಾಗುತ್ತದೆ” ಎಂದರು.
ಕರ್ನಾಟಕ ಲೇಖಕಿಯರ ಸಂಘದ ಮಾಜಿ ಅಧ್ಯಕ್ಷೆ ಹೇಮಲತಾ ಮಹಿಷಿ ಮಾತನಾಡಿ “ಗಡಿಯಲ್ಲಿ ಪುರುಷ ಮತ್ತು ಮಹಿಳೆಯರು ಎದುರಿಸುವ ಸಮಸ್ಯೆ ಒಂದೇ ಆದರೂ ಮಹಿಳೆಯರೇ ಹೆಚ್ಚಾಗಿ ಅವುಗಳ ಪರಿಣಾಮ ಎದುರಿಸುತ್ತಿದ್ದಾರೆ. ನೆಲ, ಜಲ, ಭಾಷೆ ಸಮಸ್ಯೆ ಜತೆಗೆ ಮೂಲ ಸೌಕರ್ಯ, ವಲಸೆ ಸೇರಿ ಸಾಕಷ್ಟು ಸಮಸ್ಯೆಗಳಿವೆ. ಅಲ್ಲಿನ ರಸ್ತೆ, ನೀರು, ಆರೋಗ್ಯ, ಶಿಕ್ಷಣದ ಬಗ್ಗೆ ಒತ್ತು ನೀಡಿ ವಲಸೆಯನ್ನು ತಡೆಯಬೇಕೆಂದು” ತಿಳಿಸಿದರು.
ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ. ಎಚ್.ಎಲ್.ಪುಷ್ಪ, ಐ.ಎ.ಎಸ್.ಅಧಿಕಾರಿ ಡಾ. ಶಾಲಿನಿ ರಜನೀಶ್, ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ್ ಮತ್ತಿಹಳ್ಳಿ ಉಪಸ್ಥಿತರಿದ್ದರು.
“ಗಡಿನಾಡ ಸಾಹಿತ್ಯ ಹಾಗೂ ಭಾಷಾ ಬಾಂಧವ್ಯ” ವಿಷಯದ ಬಗ್ಗೆ ವಿಚಾರ ಸಂಕಿರಣ ನಡೆಯಿತು. ಈ ಸಂಕಿರಣದ ಅಧ್ಯಕ್ಷತೆಯನ್ನು ಮಹಾರಾಣಿ ಕಾಲೇಜಿನ ಖ್ಯಾತ ವಿಮರ್ಶಕರು ಹಾಗೂ ಪ್ರಾಧ್ಯಾಪಕರು ಡಾ. ಎಂ.ಎಸ್. ಆಶಾದೇವಿ ಇವರು ವಹಿಸಿದ್ದರು. ಪ್ರಾಧ್ಯಾಪಕರು ಹಾಗೂ ಲೇಖಕರಾದ ಡಾ. ಮೈತ್ರೇಯಿಣಿ ಗದಿಗೆಪ್ಪಗೌಡರ ಇವರು – “ಶಿಕ್ಷಣ ಕ್ಷೇತ್ರದಲ್ಲಿ ಭಾಷಾ ಬೋಧನೆ”, ಲೇಖಕಿ ಮತ್ತು ಸಾಮಾಜಿಕ ಕಾರ್ಯಕರ್ತರಾದ ವೆಂಕಮ್ಮ ಎನ್.ಡಿ. ಇವರು – “ಭಾಷಾ ಬಾಂಧವ್ಯದ ಶಕ್ತಿ ಹಾಗೂ ಸವಾಲುಗಳು”, ಡಾ. ಸುಜಾತಾ ಜಂಗಮಶೆಟ್ಟಿ, ಪ್ರಾಧ್ಯಾಪಕರು ಮತ್ತು ರಂಗಕರ್ಮಿ ಇವರು – “ಗಡಿನಾಡಿನ ಸಾಹಿತ್ಯ ಮತ್ತು ರಂಗಭೂಮಿ”, ನಿವೃತ್ತ ಪ್ರಾಧ್ಯಾಪಕರು, ಗಮಕಿಗಳು ಮತ್ತು ಭಾಷಣಕಾರರಾದ ಜಯಲಕ್ಷ್ಮಿ ಕಾರಂತ ಇವರು – “ಗಡಿನಾಡಿನ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘಟನೆಗಳು” ಈ ವಿಷಯಗಳ ಬಗ್ಗೆ ವಿಚಾರ ಮಂಡಿಸಿದರು.
ನಂತರ ರಾಗಿಣಿ ಸಂಗೀತ ನೃತ್ಯಾಲಯ ಸದಸ್ಯರು ನೀಡಿದ “ಗೀತಗಾಯನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು” ಜನರನ್ನು ರಂಜಿಸಿದವು.
ಮುಂದೆ ನಡೆದ ಕವಿಗೋಷ್ಠಿಯಲ್ಲಿ 12 ಮಂದಿ ಕವಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದಾರೆ. ಶ್ರೀಮತಿ ನಿರ್ಮಲಾ ಯಲಿಗಾರ್ ಮುಖ್ಯಸ್ಥರು, ಬೆಂಗಳೂರು ದೂರದರ್ಶನ ಇವರು ಆಶಯ ನುಡಿಗಳನ್ನು ಆಡಿದರು. ಹಿರಿಯ ಕವಯತ್ರಿ ಡಾ. ಸುಕನ್ಯಾ ಮಾರುತಿ ಇವರು ಅಧ್ಯಕ್ಷತೆ ವಹಿಸಿದ್ದರು. ಜ್ಯೋತಿ ಬದಾಮಿ, ವಸುಂಧರ ಕದಲೂರು, ಮಧುಪಾಂಡೆ ಮಾನ್ವಿ, ಸುಮಾ ಆನಂದರಾವ್, ಗೀತಾ ಡಿ.ಸಿ., ಅಸೀಫಾ ಬೇಗಂ, ದೀಪದಮಲ್ಲಿ, ಅಂಜಲಿ ಬೆಳಗಲ್, ಸೌಮ್ಯ ಕೆ.ಆರ್., ಚೈತ್ರ ಶಿವಯೋಗಿಮಠ, ಮಂಜುಳ ಎನ್.ಸರ್ಜಾಪುರ ಮತ್ತು ಸೌಮ್ಯ ಪ್ರವೀಣ್ ಈ ಎಲ್ಲಾ ಕವಯತ್ರಿಯರು ತಮ್ಮ ಕವನಗಳನ್ನು ಸಭೆಯ ಮುಂದೆ ವಾಚಿಸಿದರು.
ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷರಾದ ಡಾ. ಎಚ್.ಎಲ್. ಪುಷ್ಪ ಇವರ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಖ್ಯಾತ ವಿಮರ್ಶಕರಾದ ಡಾ. ಗುರುದೇವಿ ಹುಲ್ಲೆಪ್ಪನವರಮಠ ಇವರು ಸಮಾರೋಪ ನುಡಿಗಳನ್ನಾಡಿದರು.