05 ಏಪ್ರಿಲ್ 2023, ಮಂಗಳೂರು: ಕೊರೊನಾ ಸಮಯದಲ್ಲಿ ಶ್ರೀ ಶುಭಕರ ಮತ್ತು ಅವರ ಸಹೋದ್ಯೋಗಿ ಕನ್ನಡ ಉಪನ್ಯಾಸಕರಾದ ಸುರೇಶ್ ರಾವ್ ಅತ್ತೂರು ಅವರಲ್ಲಿ ಗಮಕ ಅಭ್ಯಾಸ ಮಾಡಿ ಪ್ರಥಮ ಪರೀಕ್ಷೆ ಹಾಜರಾದರು. ಶ್ರೀ ಸುರೇಶ್ ರಾವ್ ಅವರಿಗೆ ಮಂಗಳೂರಿನಲ್ಲಿ ಗಮಕ ಪರಿಷತ್ ಆಗ ಬೇಕೆಂಬ ಇಚ್ಛೆ ಇತ್ತು. ಇದನ್ನರಿತ ಶ್ರೀ ಶುಭಕರ ಇವರು ಒಂದು ಸಂಸ್ಥೆಯ ಮೂಲಕ ಮುಂದುವರಿಯುವ ಅಭಿಪ್ರಾಯ ವ್ಯಕ್ತಪಡಿಸಿದರು. ಎಲ್ಲಾ ಕಡೆ ಗಮಕ ಪರಿಷತ್ತು ಇದ್ದರೂ ಮಂಗಳೂರಲ್ಲಿ ಗಮಕ ಪರಿಷತ್ತು ಇರಲಿಲ್ಲ ಎಂಬುದನ್ನು ಮನಗಂಡು ಸಮಾನ ಮನಸ್ಕರು ಜನವರಿ ತಿಂಗಳಲ್ಲಿ ಒಂದು ಕಡೆ ಸೇರಿ ವಿಚಾರ ವಿನಿಮಯ ನಡೆಸಿ, ಗೌರವಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಮತ್ತು ಪ್ರದೀಪ್ ಕುಮಾರ್ ಕಲ್ಕೂರ, ಗೌರವ ಸಲಹೆಗಾರರಾಗಿ ಪ್ರೊ. ಎಂ.ಬಿ. ಪುರಾಣಿಕ ಮತ್ತು ಎಂ.ಆರ್. ವಾಸುದೇವ, ಕಾರ್ಯಾಧ್ಯಕ್ಷರಾಗಿ ಸುರೇಶ್ ರಾವ್ ಅತ್ತೂರು, ಕಾರ್ಯದರ್ಶಿಯಾಗಿ ಶುಭಕರ ಕೆ. ಪುತ್ತೂರಾಯ ಜೊತೆ ಕಾರ್ಯದರ್ಶಿಗಳಾಗಿ ಯಶೋಧಾ ಕುಮಾರಿ ಮತ್ತು ರಮೇಶ್ ಆಚಾರ್ಯ, ಕೋಶಾಧಿಕಾರಿಯಾಗಿ ಚಂದ್ರಿಕಾ ಸುರೇಶ್ ರಾವ್, ಸಂಘಟನಾ ಕಾರ್ಯದರ್ಶಿಗಳಾಗಿ ಕರುಣಾಕರ ಬಳ್ಕೂರು ಮತ್ತು ಡಾ. ಶ್ರೀ ಕೃಷ್ಣ ಭಟ್ ಸುಣ್ಣಂಗುಳಿ ಇವರೆಲ್ಲರನ್ನೂ ಆಯಾ ಹುದ್ದೆಗೆ ನೇಮಕ ಮಾಡಿ, ಕರ್ನಾಟಕ ಗಮಕ ಕಲಾ ಪರಿಷತ್ತು ಮಂಗಳೂರು ಘಟಕವನ್ನು ಫೆಬ್ರವರಿ ತಿಂಗಳಲ್ಲಿ ಉದ್ಘಾಟಿಸುವುದೆಂದು ನಿರ್ಧರಿಸಲಾಯಿತು.
ಗಮಕ ಕಾರ್ಯಕ್ರಮ ಕೇವಲ ನಗರಕ್ಕೆ ಮಾತ್ರ ಸೀಮಿತವಾಗಿರದೆ ಪ್ರತೀ ತಿಂಗಳೂ ನಡೆಯುವ “ಮನೆ ಮನೆ ಗಮಕ” ಕಾರ್ಯಕ್ರಮದ ಮೂಲಕ ತಾಲೂಕಿನ ಮೂಲೆ ಮೂಲೆಗೂ ಗಮಕ ತಲುಪಬೇಕು. ಅದರ ಆನಂದ ಎಲ್ಲರಿಗೂ ಒದಗಬೇಕು ಎನ್ನುವುದು ಗಮಕ ಕಲಾ ಪರಿಷತ್ತಿನ ಧ್ಯೇಯವಾಗಿದೆ. ಪ್ರತೀ ತಿಂಗಳೂ ಒಂದು ಮನೆಯ ಯಜಮಾನರಾದವರು ಅವರ ಮನೆಯಲ್ಲಿ ಕಾರ್ಯಕ್ರಮ ಹಮ್ಮಿಕೊಂಡು ಗಮಕ ವಾಚನ ವ್ಯಾಖ್ಯಾನ ಕಾರ್ಯಕ್ರಮಕ್ಕೆ ಸಂಪೂರ್ಣ ಸಹಕಾರ ಪ್ರೋತ್ಸಾಹ ನೀಡುವುದು ಮತ್ತು ಯಜಮಾನ ಸ್ಥಾನದಲ್ಲಿ ನಿಂತು ಕಾರ್ಯಕ್ರಮ ನಡೆಸಿ ಕೊಡುವವರು ಕೆಳಗೆ ನಮೂದಿಸಿದ ಸಂಪರ್ಕ ಸಂಖ್ಯೆಗೆ ಕರೆಮಾಡಿ ಸಂಪರ್ಕಿಸುವಂತೆ ವಿನಂತಿಸಿಕೊಳ್ಳುವುದೆಂದು ನಿರ್ಧರಿಸಲಾಯಿತು. ಸಂಪರ್ಕ ಸಂಖ್ಯೆ 7019159613 / 9901617099
ಅದೇ ರೀತಿ ಫೆಬ್ರವರಿ 19ನೇ ತಾರೀಖಿನಂದು ಶಾರದಾ ವಿದ್ಯಾಲಯದ ಧ್ಯಾನ ಮಂದಿರದಲ್ಲಿ ಪದಗ್ರಹಣ ಸಮಾರಂಭ ನಡೆಯಿತು. ಈ ಸಮಾರಂಭವನ್ನು ಶಾರದಾ ಸಮೂಹ ಸಂಸ್ಥೆಯ ಅಧ್ಯಕ್ಷರಾದ ಪ್ರೊ. ಎಂ.ಬಿ. ಪುರಾಣಿಕ್ ದೀಪ ಬೆಳಗಿ ಉದ್ಘಾಟಿಸಿದರು ಮತ್ತು ವೇದಿಕೆಯಲ್ಲಿ ಉಪಸ್ಥಿತರಿದ್ದ ಇತರ ಗಣ್ಯರು ಸಂಸ್ಕೃತ, ಕನ್ನಡ ಮತ್ತು ತುಳು ಭಾಷೆಯ ಅದಿ ಕಾವ್ಯಗಳಿಗೆ ಪುಷ್ಪಾರ್ಚನೆ ಗೈದು ವಂದಿಸಿದರು. ಉದ್ಘಾಟಕರ ನುಡಿಯಲ್ಲಿ ಪ್ರೊಫೆಸರ್ ಎಂ.ಬಿ. ಪುರಾಣಿಕ್ ಇವರು “ಇಂತಹ ಕಲೆ, ಸಂಸ್ಕೃತಿ ಮತ್ತು ಸಂಸ್ಕಾರ ಬದ್ಧವಾದಂತಹ ಕಾರ್ಯಕ್ರಮಗಳಿಗೆ ಶಾರದಾ ಸಮೂಹ ಸಂಸ್ಥೆ ಸದಾ ಬೆಂಗಾವಲಾಗಿ ಪ್ರೋತ್ಸಾಹವನ್ನು ನೀಡುತ್ತಾ ಬಂದಿದೆ ಇನ್ನು ಮುಂದೆಯೂ ಸಹಕಾರವನ್ನು ನೀಡುತ್ತೇವೆ” ಎಂದರು.
ಗೌರವಾಧ್ಯಕ್ಷರಾದ ಶ್ರೀಯುತ ಧರ್ಮದರ್ಶಿ ಹರಿಕೃಷ್ಣ ಪುನರೂರು ತಾವು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದಾಗಿನಿಂದಲೂ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರತಿ ಕಾರ್ಯಕ್ರಮದಲ್ಲಿ ಗಮಕಕ್ಕೂ ಹೆಚ್ಚಿನ ಆದ್ಯತೆಯನ್ನು ನೀಡುತ್ತಾ ಬಂದಿದ್ದು, ಮುಂದೆಯೂ ನೀಡುವುದಾಗಿ ಭರವಸೆಯನ್ನಿತ್ತರು. ಹಾಗೆ ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀಯುತ ಪ್ರದೀಪ್ ಕುಮಾರ್ ಕಲ್ಕೂರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದಾಗ ಎರಡು ಮೂರು ಗಮಕ ಸಮ್ಮೇಳನಗಳನ್ನು ವಿಜೃಂಭಣೆಯಿಂದ ಜರುಗಿಸಿದ್ದನ್ನು ನೆನಪಿಸಿಕೊಳ್ಳುತ್ತಾ ಇನ್ನು ಮುಂದೆಯೂ ಗಮಕಿಗಳ ಆಶಯದಂತೆ ಉದಯಾಸ್ತಮಾನ ಗಮಕ, ಮನೆ ಮನೆ ಗಮಕ ಹಾಗೆ ಗಮಕ ಸಮ್ಮೇಳನಗಳನ್ನು ಹಮ್ಮಿಕೊಳ್ಳಲು ಅವಕಾಶ ಕಲ್ಪಿಸುವುದಾಗಿ ಪ್ರೋತ್ಸಾಹದ ಮಾತುಗಳನ್ನಾಡಿದರು.
ಕಾರ್ಯಾಧ್ಯಕ್ಷರಾದ ಶ್ರೀಯುತ ಸುರೇಶ್ ರಾವ್ ಅತ್ತೂರು ಗಮಕದ ಶಕ್ತಿ, ಮಹತ್ವ, ವೈಶಿಷ್ಟ್ಯ ಹಾಗೂ ಚಮತ್ಕಾರಗಳನ್ನು ತಿಳಿಯಬೇಕಾದರೆ ಗಮಕ ವಾಚನಕಾರರು ವ್ಯಾಖ್ಯಾನಕಾರರು ಸಮರ್ಥವಾಗಿ ಅದನ್ನು ನಿಭಾಯಿಸಬೇಕು. ಆಗ ಅದು ಪ್ರೇಕ್ಷಕರನ್ನ ಆಕರ್ಷಿಸುತ್ತದೆ ಎಂದು ಹೇಳಿದರು. ಅಲ್ಲದೆ ತಿಂಗಳಿಗೊಂದಾದರೂ ಗಮಕ ಕಾರ್ಯಕ್ರಮ ಮತ್ತು ಮನೆ ಮನೆ ಗಮಕದ ಮೂಲಕ ಗಮಕವನ್ನು ಜನರ ಮನೆ ಮನೆಗಳಿಗೆ ತಲುಪಿಸುವ ಯೋಜನೆಯನ್ನು ಹಾಕಿಕೊಂಡಿರುವ ಬಗ್ಗೆ ತಿಳಿಸಿದರು. ಎಲ್ಲರೂ ತಮ್ಮ ತಮ್ಮ ಅಧಿಕಾರದ ಜವಾಬ್ದಾರಿಯನ್ನು ಸ್ವೀಕರಿಸುವ ಮೂಲಕ ಪದಗ್ರಹಣ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.
ಜಿಲ್ಲಾಧ್ಯಕ್ಷ ಮಧೂರು ಮೋಹನ್ ಕಲ್ಲೂರಾಯ ಪರಿಷತ್ತಿನ ಮುಂದಿನ ಯೋಜನೆಗಳ ಬಗ್ಗೆ ವಿವರ ನೀಡಿದರು. “ವಿಶ್ವೇಶ್ವರ ಸಾಕ್ಷಾತ್ಕಾರ” ಕಥಾ ಭಾಗದ ವಾಚನ ಮತ್ತು ವ್ಯಾಖ್ಯಾನವನ್ನು ಉಪನ್ಯಾಸಕ ಶ್ರೀ ಕೃಷ್ಣ ಭಟ್ ಸುಣ್ಣಂಗುಳಿ ಮತ್ತು ಉಪನ್ಯಾಸಕ ಸುರೇಶ್ ರಾವ್ ಅತ್ತೂರು ನಡೆಸಿಕೊಟ್ಟರು. ಮಾಸ್ಟರ್ ಶ್ರೀಪಾಲ್ ಪುತ್ತೂರಾಯ, ಮಾಸ್ಟರ್ ಅಚಿಂತ್ಯ ರಾವ್, ಶುಭಕರ ಕೆ. ಪುತ್ತೂರಾಯ ಮತ್ತು ಎಂ.ಆರ್. ವಾಸುದೇವ ಅವರ ಗಮಕ ವಾಚನ ಕೇಳುಗರು ಮೆಚ್ಚುಗೆ ಪಡೆಯಿತು.