ವಿಜಯಪುರ : ವಿಜಯಪುರ ನಗರದ ಗುಜ್ಜರಗಲ್ಲಿಯ `ಗುರುವಿಟ್ಠಲ ಕೃಪಾ’ ಭವನದಲ್ಲಿ ಶ್ರೀ ಕುಮಾರವ್ಯಾಸ ಭಾರತ ವೇದಿಕೆಯಿಂದ ಶ್ರೀ ವ್ಯಾಸರಾಯರ ಸ್ಮರಣೆ ಕಾರ್ಯಕ್ರಮ ದಿನಾಂಕ 13 ಜುಲೈ 2025ರ ರವಿವಾರದಂದು ನಡೆಯಿತು.
ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಶ್ರೀ ರಾಘವೇಂದ್ರ ಭಜನಾ ಮಂಡಳಿ ಇದರ ಉಪಾಧ್ಯಕ್ಷರಾದ ಶ್ರೀಮತಿ ವಿದ್ಯಾ ದೇಶಪಾಂಡೆ ಮಾತನಾಡಿ “ಶ್ರೀ ವ್ಯಾಸರಾಯರು ಜ್ಞಾನಿಗಳು, ತ್ಯಾಗ ಜೀವಿಗಳು, ತಪೋಧನರು. ಪುರಂದರದಾಸರು, ವಾದಿರಾಜರು, ಕನಕದಾಸರಂತಹ ಮಹಾನ್ ದಾಸವರೇಣ್ಯರಿಗೆ ಗುರುಸ್ಥಾನದಲ್ಲಿದ್ದು, ಕನ್ನಡದಾಸ ಪರಂಪರೆಗೆ ನಾಂದಿ ಹಾಡಿದರು. ಒಂದು ಬಾರಿ ತಿರುಪತಿಯ ಬೆಟ್ಟವನ್ನು ಮೊಳಕಾಲಿನಿಂದ ಏರಿ ಶ್ರೀ ವೆಂಕಟೇಶ್ವರನ ಪೂಜೆ ಸಲ್ಲಿಸಿದರು. 732 ಹನುಮಂತ ದೇವರ ವಿಗ್ರಹ ಸ್ಥಾಪಿಸಿ ಕರ್ನಾಟಕದ ಭಕ್ತಿ ಪರಂಪರೆಗೆ ದೊಡ್ಡ ಕಾಣಿಕೆ ಸಲ್ಲಿಸಿದರು. ವಿಜಯನಗರದ ಅರಸು ಶ್ರೀಕೃಷ್ಣದೇವರಾಯನು ವ್ಯಾಸರಾಯರಿಗೆ ರತ್ನಾಭಿಷೇಕ ಮಾಡಿಸಿದನು. ಇಂತಹ ವ್ಯಾಸರಾಯರು ಪ್ರಾತಃಸ್ಮರಣೀಯರು” ಎಂದು ತಿಳಿಸಿದರು
ಅನಂತರ ನಡೆದ ಗಮಕ ಕಾರ್ಯಕ್ರಮವನ್ನು ಗಮಕ ವಿದುಷಿ ಶ್ರೀಮತಿ ಶಾಂತಾ ಕೌತಾಳ ಹಾಗೂ ಕಲ್ಯಾಣರಾವ್ ದೇಶಪಾಂಡೆಯವರು ನಡೆಸಿಕೊಟ್ಟರು. ಪ್ರಸ್ತುತಪಡಿಸಿದ ಗಮಕ ಪ್ರಸಂಗವೆಂದರೆ ಶ್ರೀ ಕುಮಾರವ್ಯಾಸ ವಿರಚಿತ ಗದುಗಿನ ಭಾರತದ ಆದಿಪರ್ವದ ದ್ರೌಪದಿ ಸ್ವಯಂವರ. ದ್ರೌಪದಿ ಸ್ವಯಂವರದಲ್ಲಿ ಕಾಣುವ ಅರ್ಜುನನ ಬಿಲ್ಲುಗಾರಿಕೆ, ಗುರುಭಕ್ತಿ, ದೈವಭಕ್ತಿ ಎಲ್ಲರ ಗಮನ ಸೆಳೆದವು. ಅದೇ ರೀತಿ ದ್ರೌಪದಿಯು ಬ್ರಾಹ್ಮಣನೊಡನೆ ಮದುವೆಯಾಗುವುದಾಗಿ ಪ್ರಕಟಿಸಿದ ಆಧುನಿಕ ಮನೋಭಾವ, ಯುವ ಕೇಳುಗರ ಮನ ಸೆಳೆಯಿತು. ಒಟ್ಟಿನಲ್ಲಿ ಮಹಾಭಾರತವು ಎಷ್ಟು ಕೇಳಿದರೂ ಆನಂದ ನೀಡುವ ಕಾವ್ಯ ಎಂಬುದು ಗಮಕ ಪ್ರಸಂಗದಿಂದ ಪ್ರಕಟಗೊಂಡಿತು. ಅರ್ಜುನನು ಬ್ರಾಹ್ಮಣರಿಗೆ ಹೇಳುವ `ನೀವು ಸೈರಿಸಿ, ನೀವು ರಚಿಸಿದಾಶೀರ್ವಾದ ಶಕ್ತಿಯಲಿ ನಾವು ವಿಜಯರು’ ಎಂಬ ಮಾತು ಅರ್ಜುನನು ಮತ್ಸ್ಯಯಂತ್ರ ಭೇದಿಸುವಲ್ಲಿ ನಿಜವಾಯಿತು. ನಾಚಿಕೊಂಡ ದ್ರೌಪತಿ ತನ್ನ ದೇಹದ ಸುವಾಸನೆಯಿಂದ ಕೂಡಿದ ಹೂಮಾಲೆಯನ್ನು ಅರ್ಜುನನ ಕೊರಳಲ್ಲಿ ಹಾಕುವ ಸನ್ನಿವೇಶ ಎಲ್ಲರಿಗೂ ರೋಮಾಂಚನ ಉಂಟು ಮಾಡಿತು. ಸ್ವರ್ಗದಿಂದ ದೇವತೆಗಳು ಹೂಮಳೆ ಸುರಿಸುವ ಸನ್ನಿವೇಶದೊಂದಿಗೆ ಗಮಕ ಕಾರ್ಯಕ್ರಮವು ಸಂಪನ್ನಗೊಂಡಿತು.
ಗಮಕ ಕಾರ್ಯಕ್ರಮದ ನಂತರ ಶ್ರೀಮತಿ ಶಾಂತಾ ಕೌತಾಳ್ ಹಾಗೂ ಅವರ ಶಿಷ್ಯರು ದಾಸರ ಕೀರ್ತನೆಗಳನ್ನು ಸುಶ್ರಾವ್ಯವಾಗಿ ಹಾಡಿದರು. ಮೊದಲು ವಿದುಷಿ ಗೀತಾ ಕುಲಕರ್ಣಿಯವರು `ಮೊದಲೊಂದಿಪೆ ನಿನಗೆ ಗಣನಾಥ’ ಎಂಬ ಶ್ರೀಪಾದರಾಜರ ಕೃತಿಯನ್ನು ಹಾಡಿ ಆರಂಭ ಮಾಡಿದರು. ಆ ಮೇಲೆ ‘ಸುವರ್ಣ ಕರ್ನಾಟಕ ಪ್ರಶಸ್ತಿ’ ವಿಜೇತ ವಿದುಷಿ ಶ್ರೀಮತಿ ಲತಾ ಜಹಾಗೀರದಾರರು ವ್ಯಾಸರಾಯರ ಕೃತಿ `ಕೃಷ್ಣ ಕೃಷ್ಣ ಕೃಷ್ಣ ಎಂದು ಮೂರು ಬಾರಿ ನೆನೆಯಿರೊ ಸಂತುಷ್ಟನಾಗಿ ಮುಕುತಿಕೊಟ್ಟು ಮಿಕ್ಕ ಭಾರ ಹೊರುವನೋ’ ಎಂಬ ಕೀರ್ತನೆ ಹಾಡಿದರು. ಕುಮಾರಿ ಮಾಳವಿಕಾ ಜೋಶಿಯವರು ವ್ಯಾಸರಾಯರ `ಕರೆತಾರಲೇ ರಂಗನ’, ಕುಮಾರ್ ವಿಶಾಲ್ ಕಟ್ಟಿ ಮಹಿಪತಿ ದಾಸರ `ಕಾಯೋ ಕರುಣಾ ನಿಧಿ’ ಹಾಗೂ ಪುರಂದರ ದಾಸರ `ಇನ್ನು ದಯಬಾರದೆ ದಾಸನ ಮೇಲೆ’, ವನಶ್ರೀ ಪಾಟೀಲ್ ಇವರು ವ್ಯಾಸರಾಯರು ರಚಿಸಿದ `ನಮಃ ಪಾರ್ವತಿಪತಿನುತ ಜನಪರ ನಮೋ ವಿರೂಪಾಕ್ಷ’ ಎಂಬ ದಾಸರ ಕೃತಿಗಳನ್ನು ಹಾಡಿದರು. ಕಾರ್ಯಕ್ರಮದ ಕೊನೆಗೆ ಗಮಕ ವಿದುಷಿ ಶಾಂತಾ ಕೌತಾಳ್‌ರು `ಸಾಂಕೇತಿಕವಾಗಲಿ, ಪರಿಹಾಸ್ಯವಾಗಲಿ, ಅಣಕದಿಂದಾಗಲಿ, ಡಂಭದಿಂದಾಗಲಿ, ಎದ್ದಾಗಲಿ, ಮತ್ತೆ ಬಿದ್ದಾಗಲಿ, ನಿನ್ನ ನಾಮಸ್ಮರಣೆ ಸಂತತದಲಿ ವಿಶೇಷವಾಗಲೋ ಕೃಷ್ಣ’ ಎಂಬ ವ್ಯಾಸರಾಯರು ರಚಿಸಿದ ಉಗಾಭೋಗವನ್ನು ಭೈರವಿ ರಾಗದಲ್ಲಿ ವಾಚಿಸಿದರು. ಓಂಕಾರ್ ಅಳ್ಳಗಿ ತಬಲಾ ಸಾಥ್ ನೀಡಿದರು.
ಕಾರ್ಯಕ್ರಮದ ಕೊನೆಗೆ ಅತಿಥಿಗಳಾಗಿ ಆಗಮಿಸಿದ್ದ ಶ್ರೀಮತಿ ವಿದ್ಯಾ ಹಾಗೂ ಶ್ರೀ ಸುಶಿಲೇಂದ್ರ ದೇಶಪಾಂಡೆ ದಂಪತಿಗಳಿಗೆ ಶಾಲು ಹೊದಿಸಿ, ಮಾಲಾರ್ಪಣೆ ಮಾಡಿ, ಫಲಪುಷ್ಪ ನೀಡಿ ಸನ್ಮಾನಿಸಲಾಯಿತು. ಕಾರ್ಯಕ್ರಮವನ್ನು ಸಂಘಟಿಸಿದ ಹಿರಿಯ ಗಮಕಿ ಶ್ರೀಮತಿ ಶಾಂತಾ ಕೌತಾಳ್‌ರನ್ನು ಸಭಿಕರು ಅಭಿನಂದಿಸಿದರು. ಸಮಾರಂಭದಲ್ಲಿ ಮೀನಾಕ್ಷಿ ಜೋಶಿ, ಪದ್ಮಾ ಕುಲಕರ್ಣಿ, ಪ್ರಮಿಲಾ ದೇಶಪಾಂಡೆ, ಮಂಜುಳಾ ಪಾಟೀಲ್, ವಿನಾಯಕ್ ಕಟ್ಟಿ, ಹೇಮಾ ಕಟ್ಟಿ, ವಿಜಯೀಂದ್ರ, ಗೋವಿಂದ್ ಡಂಬಳ್ ಮುಂತಾದವರು ಭಾಗವಹಿಸಿದ್ದರು.
Subscribe to Updates
Get the latest creative news from FooBar about art, design and business.
Previous Articleರಂಗಸ್ಥಳ ಯಕ್ಷ ಮಿತ್ರ ಕೂಟದ ‘ರಜತ ಪರ್ವ -2025’ | ಜುಲೈ 19