ಪೆರಿಂಜೆ : ಕರ್ನಾಟಕ ಗಮಕ ಕಲಾ ಪರಿಷತ್ತು ಬೆಳ್ತಂಗಡಿ ತಾಲೂಕು ಇದರ ವತಿಯಿಂದ ದಿನಾಂಕ 16 ಆಗಸ್ಟ್ 2025ರಂದು ಪೆರಿಂಜೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಪ್ರೌಢ ಶಾಲೆಯಲ್ಲಿ ಗಮಕ ಕಾರ್ಯಕ್ರಮದಲ್ಲಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಕರ್ನಾಟಕ ಗಮಕಲಾ ಪರಿಷತ್ ಜಿಲ್ಲಾಧ್ಯಕ್ಷ ಪ್ರೊ. ಮಧೂರು ಮೋಹನ ಕಲ್ಲೂರಾಯ “ಕಾವ್ಯಗಳು ಮಕ್ಕಳಿಗೆ ಅರ್ಥವಾಗಬೇಕು ಅಂತಾದರೆ ಗಮಕದಲ್ಲಿ ಅದನ್ನು ಹೇಳಬೇಕು. ಗಮಕದ ಪ್ರಾಥಮಿಕ ಜ್ಞಾನ ಇದ್ದಂತಹ ಅಧ್ಯಾಪಕರು ಉತ್ತಮ ಅಧ್ಯಾಪಕರಾಗಿ ರೂಪುಗೊಳ್ಳಲು ಗಮಕವು ತುಂಬಾ ಸಹಕಾರಿಯಾಗುತ್ತದೆ. ರಾಗಬಾರದ ವ್ಯಕ್ತಿ ಇಲ್ಲ. ಬರುವಂತಹ ರಾಗದಲ್ಲಿ ಸಾಹಿತ್ಯದ ಸ್ಪಷ್ಟತೆಯನ್ನು ಅರಿತುಕೊಂಡು ಗಟ್ಟಿಯಾಗಿ ಕಾವ್ಯವನ್ನು ಓದುವಂತಹುದು ವಿದ್ಯಾರ್ಥಿಗಳಿಗೆ ಪದ್ಯಗಳನ್ನು ಕಲಿಯಲು ತುಂಬಾ ಅನುಕೂಲವಾಗುತ್ತದೆ” ಎಂದು ಹೇಳಿದರು.
ಮುಖ್ಯೋಪಾಧ್ಯಾಯರಾದ ಶ್ರೀ ಮುಕುಂದ ಚಂದ್ರ ಇವರು ವಿದ್ಯಾರ್ಥಿಗಳು ಈ ಕಲೆಯಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕೆಂದು ಹೇಳಿದರು. ಕನ್ನಡ ಭಾಷಾ ಶಿಕ್ಷಕಿ ಶ್ರೀಮತಿ ಜಯಂತಿ ಅವರು ಸ್ವಾಗತಿಸಿ, ವಂದನಾರ್ಪಣೆಯನ್ನು ಮಾಡಿದರು. ಅಧ್ಯಾಪಕ ವೃಂದ ಮತ್ತು ವಿದ್ಯಾರ್ಥಿಗಳು ಗಮಕವನ್ನು ಆಸ್ವಾದಿಸಿದರು. ಪಠ್ಯ ಪುಸ್ತಕದಲ್ಲಿನ ಕುಮಾರವ್ಯಾಸ ಭಾರತದ ‘ಕೌರವೇಂದ್ರನ ಕೊಂದೆ ನೀ’ ಭಾಗದ ವಾಚನ ವ್ಯಾಖ್ಯಾನ ಮಾಡಿದರು. ಗಮಕಿ ಎ.ಡಿ. ಸುರೇಶ್ ಗಮಕ ವಾಚನ ಮಾಡಿದರೆ ಮಧೂರು ಇವರು ವ್ಯಾಖ್ಯಾನವನ್ನು ಮಾಡಿದರು.