ವಿಜಯಪುರ : ಕರ್ನಾಟಕ ರಾಜ್ಯ ಗಮಕ ಕಲಾ ಪರಿಷತ್ತು ಬೆಂಗಳೂರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು, ಕನ್ನಡ ಸಾಹಿತ್ಯ ಪರಿಷತ್ತು ವಿಜಯಪುರ ಹಾಗೂ ಜಿಲ್ಲಾ ಗಮಕ ಕಲಾ ಪರಿಷತ್ತು ವಿಜಯಪುರ ಇವರುಗಳ ಸಂಯುಕ್ತ ಆಶ್ರಯದಲ್ಲಿ ದಿನಾಂಕ 31 ಆಗಸ್ಟ್ 2025 ರವಿವಾರದಂದು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಕವಿ ಲಕ್ಷ್ಮೀಶನ ಜೈಮಿನಿ ಭಾರತದ ‘ಚಂದ್ರಹಾಸ-ವಿಷಯೆ’ ವಿವಾಹ ಪ್ರಸಂಗದ ಗಮಕ ವಾಚನ ವ್ಯಾಖ್ಯಾನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಗಮಕ ಕಾರ್ಯಕ್ರಮದ ಉದ್ಘಾಟನೆಯನ್ನು ಸಸಿಗೆ ನೀರು ಹಾಕುವುದರ ಮೂಲಕ ಉದ್ಘಾಟಿಸಿದ ಶಿಕ್ಷಕರಾದ ಡಾ. ಮಾಧವ್ ಗುಡಿಯವರು “ವಿದ್ಯಾರ್ಥಿಗಳಲ್ಲಿ ಗಮಕದ ಬೆಳವಣಿಗೆಗೆ ಕನ್ನಡ ವ್ಯಾಕರಣ ಹಾಗೂ ಕಾವ್ಯಗಳ ಓದುವಿಕೆ ಅತ್ಯವಶ್ಯ. ಕರೋನಾ ಯುಗದ ನಂತರ ಮಕ್ಕಳ ಕಲಿಯುವಿಕೆ ಕುಂಠಿತವಾಗಿದೆ. ವಿದ್ಯಾರ್ಥಿಗಳು ಮೊಬೈಲ್ ದಾಸರಾಗಿರುವುದು ಅಪಾಯಕಾರಿ ಬೆಳವಣಿಗೆಯಾಗಿದೆ. ಈ ಸಂದರ್ಭದಲ್ಲಿ ಕಾವ್ಯಗಳ ವಾಚನ-ವ್ಯಾಖ್ಯಾನ ಪ್ರಕ್ರಿಯೆ ಸತತವಾಗಿ ಮುಂದುವರೆಯಬೇತು ಎಂದು ಹೇಳಿದರು.
ನಂತರ ಜರುಗಿದ ಗಮಕ ಕಾರ್ಯಕ್ರಮದಲ್ಲಿ ಗಮಕ ವಿದುಷಿ ಶಾಂತಾ ಕೌತಾಳ್ ಇವರು ಲಕ್ಷ್ಮೀಶನ ಜೈಮಿನಿ ಭಾರತವನ್ನು ಓದಿದರು. ವ್ಯಾಖ್ಯಾನ ನೀಡಿದ ಕಲ್ಯಾಣರಾವ್ ದೇಶಪಾಂಡೆಯವರು ಚಂದ್ರಹಾಸನ ವಿಷ್ಣುಭಕ್ತಿ, ಸೌಂದರ್ಯ ಹಾಗೂ ವಿಷಯೆ, ಚಂಪಕ ಮಾಲಿನಿ, ಸಖಿಯರ ಸೌಂದರ್ಯ ಇವುಗಳ ಬಗ್ಗೆ ವಿವರಿಸಿದರು. ಈಜುಗೊಳದ ಆಕರ್ಷಕ ದೃಶ್ಯಗಳು, ಮಂತ್ರಿ ದುಷ್ಟಬುದ್ಧಿಯ ದ್ವಂದ್ವಾರ್ಥದ ಪತ್ರ, ಕೊನೆಗೆ ಲಕ್ಷ್ಮೀಕಾಂತನೊಲವಿಂದ ವಿಷವಮೃತವಾದ ಬಗೆ ಮುಂತಾದವು ಕೇಳುಗರಲ್ಲಿ ರೋಮಾಂಚನ ಉಂಟುಮಾಡಿದವು. ನಿಜವಾಗಿ ಕಾವ್ಯ ವಾಚನ ವ್ಯಾಖ್ಯಾನವು ಪುಣ್ಯಮಿದು ಕೃಷ್ಣ ಚರಿತಾಮೃತಮ್, ಶೃಂಗಾರ ಕುಸುಮ ತರು ತುರುಗಿದಾರಣ್ಯಮಿದು, ಶಾರದೆಯ ಸಮ್ಮೋಹನಾಂಗ ಲಾವಣ್ಯಮಿದು ಎಂಬ ಕವಿವಾಣಿಯನ್ನು ಚಿತ್ರವಾಗಿಸಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕ.ಸಾ.ಪ. ಗೌರವ ಕಾರ್ಯದರ್ಶಿ ಶ್ರೀಮತಿ ಶಿಲ್ಪಾ ಭಸ್ಮೆಯವರು ‘ಕನ್ನಡ ಕಾವ್ಯಗಳು ಕನ್ನಡಿಗರ ನಿಜವಾದ ಆಸ್ತಿ. ಇವುಗಳ ಓದುವಿಕೆಯಿಂದ ನೈತಿಕ ಮೌಲ್ಯಗಳು ಹೆಚ್ಚುವವು’ ಎಂದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವಿಜಯಪುರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಜಂಬುನಾಥ್ ಕಂಚ್ಯಾಣಿಯವರು ‘ವಿಜಯಪುರ ಜಿಲ್ಲೆ ಹಾಗೂ ಸುತ್ತಮುತ್ತ ಅನೇಕ ಮಹಾನ್ ಕವಿಗಳು ಜನಿಸಿ ತೊರವೆ ರಾಮಾಯಣ, ಪಂಪ ರಾಮಾಯಣ, ಗದಾಯುದ್ಧದಂತಹ ಸತ್ಕಾವ್ಯಗಳನ್ನು ರಚಿಸಿದ್ದಾರೆ. ಈಗ ವಿಜಯಪುರ ಜಿಲ್ಲಾ ಗಮಕ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಬಿ.ಎಂ. ಪಾಟೀಲರ ನೇತೃತ್ವದಲ್ಲಿ ಗಮಕ ಕಾರ್ಯಕ್ರಮಗಳು ಅವ್ಯಾಹತವಾಗಿ ನಡೆಯುತ್ತಿರುವದು ಪ್ರಶಂಶನೀಯ. ಗಮಕ ರಥ ಮುನ್ನಡೆಯಲಿ’ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ವಿಜಯಪುರ ಜಿಲ್ಲಾ ಗಮಕ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಬಿ.ಎಂ. ಪಾಟೀಲ್, ಶ್ರೀ ಎಸ್.ಎಮ್. ಜೇವರಗಿ, ಶ್ರೀ ಬಿ.ಕೆ. ಗೋಟ್ಯಾಳ್ ಮುಂತಾದವರು ಭಾಗವಹಿಸಿದ್ದರು.