ಮಂಗಳೂರು : ಕುಳಾಯಿ ಹೊಸಬೆಟ್ಟು ಇಲ್ಲಿರುವ ಶ್ರೀ ಶಾರದಾ ನಾಟ್ಯಾಲಯ (ರಿ.) ಮತ್ತು ಸುರತ್ಕಲ್ ಗೋವಿಂದ ದಾಸ ಕಾಲೇಜಿನ ಲಲಿತ ಕಲಾ ಸಂಘ ಇವರ ಸಹಯೋಗದೊಂದಿಗೆ ವಿದುಷಿ ಶೀಲಾ ದಿವಾಕರ್ ಇವರಿಗೆ ‘ಗಾನ ಶಾರದೆಗೆ ನಮನ’ ಗುರುವಿಗೊಂದು ನಾಟ್ಯ ನಮನ ಕಾರ್ಯಕ್ರಮವನ್ನು ದಿನಾಂಕ 26 ಜನವರಿ 2026ರಂದು ಸಂಜೆ 5-30 ಗಂಟೆಗೆ ಸುರತ್ಕಲ್ಲಿನ ಗೋವಿಂದ ದಾಸ ಕಾಲೇಜಿನ ರಂಗ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.
ಗೋವಿಂದ ದಾಸ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಹರೀಶ ಆಚಾರ್ಯ ಪಿ. ಇವರು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ನಾದನೃತ್ಯ ಸ್ಕೂಲ್ ಆಫ್ ಡಾನ್ಸ್ ಎಂಡ್ ಕಲ್ಚರಲ್ ಟ್ರಸ್ಟ್ (ರಿ.) ಇವರ ನಿರ್ದೇಶಕರಾದ ಡಾ. ಭ್ರಮರಿ ಶಿವಪ್ರಕಾಶ್ ಮತ್ತು ಕಲಾಪೋಷಕರಾದ ಎಲ್. ದಿವಾಕರ್ ಇವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಡಾ. ಭ್ರಮರಿ ಶಿವಪ್ರಕಾಶ್ ಇವರಿಂದ ನುಡಿ ನಮನ, ಸಂಪತ್ ಎಸ್.ಬಿ. ಹೊಸಬೆಟ್ಟು ಮತ್ತು ಆದರ್ಶ್ ಎಸ್.ಜೆ. ಮುಲ್ಕಿ ಇವರ ಗೀತ ನಮನಕ್ಕೆ ವಿಜಯ್ ಆಚಾರ್ಯ ಕುಳಾಯಿ ಕೀ ಬೋರ್ಡ್ ಮತ್ತು ಪ್ರಥಮ್ ಆಚಾರ್ಯ ಚೇಳ್ಯಾರು ತಬಲಾ ಸಾಥ್ ನೀಡಲಿದ್ದಾರೆ. ವಿದುಷಿ ಭಾರತಿ ಸುರೇಶ್, ವಿದುಷಿ ಪ್ರಣತಿ ಸತೀಶ್, ವಿದುಷಿ ಚಿನ್ಮಯೀ ಸುರೇಶ್ ಮತ್ತು ಮಾಸ್ಟರ್ ತನ್ಮಯ್ ಸುರೇಶ್ ಇವರ ನೃತ್ಯ ನಮನಕ್ಕೆ ಹಾಡುಗಾರಿಕೆಯಲ್ಲಿ ಶ್ರೀಮತಿ ಅಕ್ಷತಾ ವಿಶು ರಾವ್ ಹವಾಂಜೆ, ಕೊಳಲಿನಲ್ಲಿ ವಿದ್ವಾನ್ ಕೆ. ಮುರಳೀಧರ್ ಉಡುಪಿ, ಮೃದಂಗದಲ್ಲಿ ವಿದ್ವಾನ್ ನಾರಾಯಣ ಬಳ್ಳಕ್ಕುರಾಯ ಮತ್ತು ಪಿಟೀಲಿನಲ್ಲಿ ವಿದ್ವಾನ್ ಪಿ. ಶ್ರೀಧರ್ ಆಚಾರ್ ಉಡುಪಿ ಇವರುಗಳು ಸಹಕರಿಸಲಿದ್ದಾರೆ.

