ಧಾರವಾಡ : ಮಹಾನಗರದ ಹಿರಿಯ ರಂಗ ಸಂಸ್ಥೆ ಅಭಿನಯ ಭಾರತಿಯು ಈ ವರ್ಷದಿಂದ ರಂಗ ದಿಗ್ಗಜರ ಸವಿ ನೆನಪಿನಲ್ಲಿ ಪ್ರತಿ ತಿಂಗಳು ಮಾಸಿಕ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಏರ್ಪಡಿಸುತ್ತಿದೆ. ಈ ಸರಣಿಯ ಏಳನೆಯ ಕಾರ್ಯಕ್ರಮವನ್ನು ಜಿ.ಬಿ. ಜೋಶಿ ಮೆಮೋರಿಯಲ್ ಟ್ರಸ್ಟ್ ಸಹಯೋಗದೊಂದಿಗೆ ದಿನಾಂಕ 29 ಜುಲೈ 2024ರಂದು ಸಂಜೆ 6-00 ಗಂಟೆಗೆ ಧಾರವಾಡದ ಮನೋಹರ ಗ್ರಂಥ ಮಾಲಾದ ಅಟ್ಟದಲ್ಲಿ ಏರ್ಪಡಿಸಿದೆ.
ಕನ್ನಡ ಸಾಹಿತ್ಯ ಪ್ರಪಂಚಕ್ಕೆ ಮನೋಹರ ಗ್ರಂಥ ಮಾಲೆಯ ಅನನ್ಯ ಕೊಡುಗೆ ಹಾಗೂ ಶತಮಾನದತ್ತ ಹೆಜ್ಜೆ ಇಡುತ್ತಿರುವ ಈ ಸಂಸ್ಥೆಯನ್ನು ಕಟ್ಟಿ ಬೆಳೆಸಿದ ‘ಶ್ರಮಸಾಫಲ್ಯ’ ಜಿ.ಬಿ. ಜೋಶಿ ಹಾಗೂ ಕೀರ್ತಿನಾಥ ಕುರ್ತಕೋಟಿ ಅವರಿಗೆ ಸಲ್ಲುತ್ತದೆ.
ಜುಲೈ 29 ಜಿ.ಬಿ. ಜೋಶಿಯವರ 120ನೇ ಹುಟ್ಟುಹಬ್ಬ ಹಾಗೂ ಜುಲೈ 31 ಶ್ರೀ ಕೀರ್ತಿನಾಥ ಕುರ್ತುಕೋಟಿಯವರ 21ನೇ ಪುಣ್ಯತಿಥಿ. ತಮಗೆಲ್ಲ ಗೊತ್ತಿರುವಂತೆ ಜಿ.ಬಿ. ಜೋಶಿಯವರ ಶತಮಾನೋತ್ಸವ ಸಂದರ್ಭದಲ್ಲಿ ಆ ಕಾರ್ಯಕ್ರಮದ ಜವಾಬ್ದಾರಿಗಳನ್ನು ನಿರ್ವಹಿಸಿ ಮಾರನೇ ದಿನವೇ ಅವರೀರ್ವರ ಅವಿನಾಭಾವ ಸಂಬಂಧದ ಸಂಕೇತವೆಂಬಂತೆ ಕೀರ್ತಿಯವರು ನಮ್ಮನ್ನು ಅಗಲಿದ್ದರು. ಇವರಿಬ್ಬರ ಪ್ರೇರಣಾದಾಯಕ ವ್ಯಕ್ತಿತ್ವದ ವಿವಿಧ ಮಗ್ಗಲುಗಳನ್ನು ಅರಿಯಲು ವಿಶೇಷ ಕಾರ್ಯಕ್ರಮವಾಗಿ ‘ಜಿಬಿ-ಕೀರ್ತಿ ನೆನಪು’ ಒಂದನ್ನು ಆಯೋಜಿಸಲಾಗಿದೆ.
ಈ ಕಾರ್ಯಕ್ರಮದಲ್ಲಿ ಜಿಬಿ-ಕೀರ್ತಿ ಆತ್ಮೀಯ ವಲಯದ ಶ್ರೀ ಆನಂದ ಝುಂಜರವಾಡ, ಹರ್ಷ ಡಂಬಳ, ಡಾ. ವಿ.ಟಿ. ನಾಯಕ, ವಿ.ಎಂ. ಕೋಳಿವಾಡ, ಶ್ರೀನಿವಾಸ ವಾಡಪ್ಪಿ, ಡಾ. ಕೃಷ್ಣ ಕಟ್ಟಿ, ಡಾ. ಪ್ರಕಾಶ ಗರುಡ, ಡಾ. ಶಶಿಧರ ನರೇಂದ್ರ ಮುಂತಾದವರು ಇಬ್ಬರೂ ದಿಗ್ಗಜರ ಸಾಧನೆಯ ನೆನಪುಗಳನ್ನು ಹಂಚಿಕೊಳ್ಳಲಿದ್ದಾರೆ. ಅಟ್ಟದ ಅಭಿಮಾನಿ ಬಳಗದ ಮಿತ್ರ ಶ್ರೀ ಜಯತೀರ್ಥ ಜಹಗೀರದಾರ ಇವರು ಈ ತಿಂಗಳ ಕಾರ್ಯಕ್ರಮದ ದತ್ತಿ ನೀಡಿದವರು. ಧಾರವಾಡದ ಸಾಹಿತ್ಯ ಪ್ರಿಯರು ಹಾಗೂ ರಂಗಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸಂಚಾಲಕ ಶ್ರೀ ಸಮೀರ್ ಜೋಶಿ ವಿನಂತಿಸುತ್ತಾರೆ.