ಬಜಪೆ : ‘ಪಾಡ್ಡನ ಕೋಗಿಲೆ’ ಎಂದೇ ಪ್ರಸಿದ್ಧಿ ಪಡೆದ ಹಿರಿಯ ಜಾನಪದ ಕಲಾವಿದೆ, ಕರ್ನಾಟಕ ರಾಜ್ಯ ಸರಕಾರದಿಂದ 2015ರಲ್ಲಿ ರಾಜ್ಯಮಟ್ಟದ ರಾಜ್ಯೋತ್ಸವ ಪ್ರಶಸ್ತಿಗೆ ಪಾತ್ರರಾಗಿದ್ದ ಶತಾಯುಷಿ ಗಿಡಿಗೆರೆ ರಾಮಕ್ಕ ಮುಗೇರ್ತಿ(102) ಅವರು ಅನಾರೋಗ್ಯದಿಂದ ಕಟೀಲು ಗಿಡಿಗೆರೆಯ ತನ್ನ ನಿವಾಸದಲ್ಲಿ ದಿನಾಂಕ 15-04-2024ರಂದು ನಿಧನರಾದರು. ಮಂಗಳೂರು ತಾಲೂಕಿನ ವಾಮಂಜೂರಿನ ಕೂಕ್ರ ಮುಗ್ಗೇರ ಮತ್ತು ದುಗ್ಗಮ್ಮ ದಂಪತಿಯ ಸುಪುತ್ರಿಯಾಗಿದ್ದ ರಾಮಕ್ಕ 17ನೇ ವಯಸ್ಸಿನಲ್ಲಿ ಕಟೀಲು ಸಮೀಪದ ಗಿಡಿಗೆರೆಯ ಕಾಪೀರ ಮುಗ್ಗೇರ ಅವರನ್ನು ಮದುವೆಯಾದರು.
ಸತ್ಯದ ಸಿರಿ ಪಾಡ್ಡನ ಗಾಯನದಿಂದ ಖ್ಯಾತರಾಗಿದ್ದ ಅವರು ಓ ಬೇಲೆ, ನಲ್ಲೊರಿ ಮಾಮ, ಮಂಜೊಟ್ಟಿ ಗೋಣ, ಗೋವಿಂದ ಬದನೆ ಕಾನಡ, ಮಾಲ್ಂಡ್ ಮರ, ಕುಮಾರ, ಸಿರಿ, ಅಬ್ಬಗ-ದಾರಗ, ಬಂಟರು ಹಾಗೂ ಅನೇಕ ದೈವ ಪಾಡ್ಡನಗಳಲ್ಲದೆ ಬೇಸಾಯದ ಸಂದರ್ಭ ಹಾಡುವ ಹತ್ತಾರು ಕೃಷಿ ಗೀತೆಗಳನ್ನು ನಿರರ್ಗಳವಾಗಿ ತನ್ನ ನೆನಪಿನಾಳದಿಂದ ಸುಶ್ರಾವ್ಯವಾಗಿ ಹಾಡಬಲ್ಲವರಾಗಿದ್ದರು. ಅಕ್ಷರಾಭ್ಯಾಸ ಇಲ್ಲದಿದ್ದರೂ ಕವಿತೆಗಳನ್ನು ರಚಿಸಿದ್ದರು. ಜಾನಪದ, ದೈವಿಕ ಆಚರಣೆ, ಶ್ರಮಿಕ ಸಂಸ್ಕೃತಿಯ ಸಂಧಿ, ಸಂಧಿ-ಪಾಡ್ಡನಗಳು ಕಂಠಪಾಠವಾಗಿತ್ತು.
ಹಂಪಿ ಕನ್ನಡ ವಿಶ್ವವಿದ್ಯಾಲಯವು ರಾಮಕ್ಕ ಮುಗೇರ್ತಿ ಅವರು ಕಟ್ಟಿದ, ಸುದೀರ್ಘವಾಗಿ ಹಾಡಿದ ಸಿರಿಪಾಡ್ದನವನ್ನು ಎ.ವಿ. ನಾವಡ ಅವರ ಸಂಪಾದಕತ್ವದಲ್ಲಿ ದಾಖಲೀಕರಣ ಮಾಡಿ ‘ರಾಮಕ್ಕ ಮುಗೇರ್ತಿ ಕಟ್ಟಿದ ಸಿರಿಪಾಡ್ಡನ’ ಎಂಬ ಗ್ರಂಥ ರೂಪದಲ್ಲಿ ಪ್ರಕಟಿಸಿತ್ತು. ಅರ್ಧ ಶತಮಾನಕ್ಕೂ ಹೆಚ್ಚು ಕಾಲದಿಂದ ಅಪರೂಪದ ಕೃಷಿ ಗೀತೆಗಳು, ಸಂಧಿ-ಪಾಡ್ಡನ, ತುಳು ಕವಿತೆ, ಕಟ್ಟಿ ಹಾಡುತ್ತಾ ಕೃಷಿ ಸಂಸ್ಕೃತಿಗೆ ಜೀವ ತುಂಬಿದ್ದರು.
ಹಿರಿಯ ಜನಪದ ಕಲಾವಿದೆಗೆ 2000ದಲ್ಲಿ ವೀರರಾಣಿ ಅಬ್ಬಕ್ಕ ಪ್ರಶಸ್ತಿ, ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಪ್ರಶಸ್ತಿ, ಕಟೀಲು ದೇವಳದಿಂದ ‘ಪಾಡ್ದನ ಕೋಗಿಲೆ’ ಬಿರುದು ಪ್ರದಾನ, 2001ರಲ್ಲಿ ಜಿಲ್ಲಾಮಟ್ಟ ಹಾಗೂ 2015ರಲ್ಲಿ ರಾಜ್ಯಮಟ್ಟದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಹಲವೆಡೆ ಗೌರವ ಸನ್ಮಾನಗಳಿಗೆ ಪಾತ್ರರಾಗಿದ್ದರು. 2004-05ನೇ ಸಾಲಿನಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯತ್ವದ ಗೌರವ ನೀಡಲಾಗಿತ್ತು. ಅಕ್ಷರ ತಿಳಿಯದ ಗಿಡಿಗೆರೆ ರಾಮಕ್ಕ ನಾಡಿನ ಹಲವು ವಿದ್ವಾಂಸರಿಗೆ ಪ್ರಮುಖ ಅಧ್ಯಯನ, ಡಾಕ್ಟರೇಟ್‌ನ ಹಿಂದಿನ ಆಕರ ಗ್ರಂಥವೆಂಬಷ್ಟು ಜ್ಞಾನದ ಭಂಡಾರವೇ ಅವರಲ್ಲಿತ್ತು.