ಬೆಳ್ತಂಗಡಿ : ರಾಜ್ಯಕ್ಕೆ ಕರ್ನಾಟಕವೆಂದು ನಾಮಕರಣಗೊಂಡ 50ನೇ ವರ್ಷದ ಪ್ರಯುಕ್ತ ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಿದ್ಧಪಡಿಸಿ ರಾಜ್ಯಾದ್ಯಂತ ಸಂಚರಿಸಲಿರುವ ‘ಸುವರ್ಣ ಸಂಭ್ರಮ ರಥಯಾತ್ರೆ’ ದಿನಾಂಕ 28 ಸೆಪ್ಟೆಂಬರ್ 2024ರಂದು ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರವೇಶಿಸುವ ಸಂದರ್ಭದಲ್ಲಿ ಉಜಿರೆಯ ಮುಖ್ಯ ವೃತ್ತದಲ್ಲಿ ಭವ್ಯ ಸ್ವಾಗತ ಕೋರಲಾಯಿತು.
ತಹಶೀಲ್ದಾರ್ ಪೃಥ್ವಿ ಸಾನಿಕಮ್, ಬೆಳ್ತಂಗಡಿ ತಾಲೂಕು ಪಂಚಾಯತ್ ಇ.ಒ. ಭವಾನಿಶಂಕರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ಜಿ., ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರೀಷತ್ತಿನ ಅಧ್ಯಕ್ಷ ಡಾ. ಶ್ರೀನಾಥ್ ಎಂ.ಪಿ., ಬೆಳ್ತಂಗಡಿ ತಾಲೂಕು ಕ.ಸಾ.ಪ. ಅಧ್ಯಕ್ಷ ಯದುಪತಿ ಗೌಡ ಇವರು ಭುವನೇಶ್ವರಿ ಪ್ರತಿಮೆಗೆ ಗೌರವ ಸಲ್ಲಿಸಿದರು.
ತಾಲೂಕು ಕಂದಾಯ ನಿರೀಕ್ಷಕ ಪ್ರತೀಶ್ ಎಚ್.ಆರ್., ವೇಣೂರು ಕಂದಾಯ ನಿರೀಕ್ಷಕ ಕುಮಾರಸ್ವಾಮಿ, ಮಿತ್ತಬಾಗಿಲು ಪಿ.ಡಿ.ಒ. ಮೋಹನ ಬಂಗೇರ, ಉಜಿರೆಯ ಕೈಗಾರಿಕೋದ್ಯಮ ಮತ್ತು ವರ್ತಕರ ಸಂಘದ ಅಧ್ಯಕ್ಷ ಅರವಿಂದ ಕಾರಂತ್ ಮತ್ತಿತರರು ಉಪಸ್ಥಿತರಿದ್ದರು. ರಥಯಾತ್ರೆಯಲ್ಲಿ ರಾಜ್ಯದ ಕಲೆ, ಜಾನಪದ ಸಂಸ್ಕೃತಿಯನ್ನು ಬಿಂಬಿಸುವ ಪ್ರತಿಕೃತಿಗಳನ್ನು ಅಳವಡಿಸಲಾಗಿತ್ತು.