ಬೆಂಗಳೂರು: ಕರ್ನಾಟಕ ಪ್ರಕಾಶಕರ ಸಂಘ ದಿನಾಂಕ 23-04-2023 ಭಾನುವಾರ ನಗರದ ಸುಚಿತ್ರ ಫಿಲ್ಮ್ ಸೊಸೈಟಿಯಲ್ಲಿ ಹಮ್ಮಿಕೊಂಡಿದ್ದ ‘ವಿಶ್ವ ಪುಸ್ತಕ ಮತ್ತು ಕೃತಿಸ್ವಾಮ್ಯ ದಿನಾಚರಣೆ ಹಾಗೂ ಪುಸ್ತಕ ಪರಿಚಾರಕ ಪ್ರಶಸ್ತಿ ಪ್ರದಾನ’ ಕಾರ್ಯಕ್ರಮದಲ್ಲಿ ಹಿರಿಯ ಚಲನಚಿತ್ರ ನಿರ್ದೇಶಕ ಟಿ.ಎಸ್. ನಾಗಾಭರಣ “ಆಂಗ್ಲ ಭಾಷೆ ಕಲಿತರಷ್ಟೇ ಮಕ್ಕಳು ಉದ್ಧಾರ ಆಗುತ್ತಾರೆಂಬ ಮನಸ್ಥಿತಿಯಿಂದ ಪಾಲಕರು ಹೊರಬರದಿದ್ದರೆ ಕನ್ನಡ ಸೇರಿ ಪ್ರಾದೇಶಿಕ ಭಾಷೆಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಯಾವುದೇ ಸಮಾಜ ತನ್ನ ಸಾಂಸ್ಕೃತಿಕ ನೆಲೆಗಟ್ಟಿನ ಮುಖಾಂತರ ವಿಕಸನ ಕಾಣುತ್ತದೆಯೇ ಹೊರತು ತಾನೇ ತಾನಾಗಿ ಅಭಿವೃದ್ಧಿಯಾಗುವುದಿಲ್ಲ. ಸಾಹಿತ್ಯ, ಪುಸ್ತಕ, ರಂಗಭೂಮಿಗೆ ಎಲ್ಲಿ ಜಾಗವಿಲ್ಲವೋ ಅಲ್ಲಿ ಸಂಸ್ಕೃತಿಯ ಒಟ್ಟು ರೂಪ ನಗಣ್ಯವಾಗಲಿದೆ. ಓದುಗ ಹಾಗೂ ಪ್ರಕಾಶಕರಿಂದ ಮಾತ್ರ ಅಕ್ಷರ ಸಂಸ್ಕೃತಿ ಬೆಳೆಸಲು ಸಾಧ್ಯವಿಲ್ಲ. ಇನ್ನುಳಿದ ವ್ಯವಸ್ಥೆಗಳ ಮೇಲೂ ಜವಾಬ್ದಾರಿ ಇದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಸರ್ಕಾರವೇ ಸಹಾಯ ಮಾಡಬಹುದಾದ ಹಲವು ಆಯಾಮಗಳಿದ್ದರೂ ಸಮರ್ಪಕ ರೀತಿಯಲ್ಲಿ ಅನುಷ್ಠಾನವಾಗುತ್ತಿಲ್ಲ” ಎಂದರು.
ಸಾಗರದ ‘ರವೀಂದ್ರ ಪುಸ್ತಕಾಲಯ’ದ ಪ್ರಕಾಶಕ ವೈ.ಎ. ದಂತಿ ಅವರಿಗೆ ‘ಎಂ.ಗೋಪಾಲಕೃಷ್ಣ ಅಡಿಗ ಪುಸ್ತಕ ಪರಿಚಾರಕ ಪ್ರಶಸ್ತಿ’ ಹಾಗೂ ಬೆಂಗಳೂರಿನ ‘ಭೂಮಿ ಬುಕ್ಸ್’ನ ವಿಶಾಲಾಕ್ಷಿ ಶರ್ಮಾಗೆ ‘ನಂಜನಗೂಡು ತಿರುಮಲಾಂಬ ಪ್ರಕಾಶನ ಪ್ರಶಸ್ತಿ’ಗಳನ್ನು ಸರ್ವೋಚ್ಛ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿಗಳಾದ ನ್ಯಾ. ಎನ್. ಸಂತೋಷ್ ಹೆಗ್ಡೆ ಪ್ರದಾನ ಮಾಡಿದರು. ಸಾಹಿತಿ ಡಾ.ವಸುಂಧರಾ ಭೂಪತಿ, ಕರ್ನಾಟಕ ಪ್ರಕಾಶಕರ ಸಂಘದ ಅಧ್ಯಕ್ಷ ಶ್ರೀ ಪ್ರಕಾಶ್ ಕಂಬತ್ತಳ್ಳಿ, ಪ್ರಧಾನ ಕಾರ್ಯದರ್ಶಿಗಳಾದ ನ.ರವಿಕುಮಾರ್, ಜಂಟಿ ಕಾರ್ಯದರ್ಶಿ ಸೃಷ್ಟಿ ನಾಗೇಶ್, ಖಜಾಂಚಿ ಬಿ.ಎಸ್. ವಿದ್ಯಾರಣ್ಯ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಪ್ರಶಸ್ತಿ ಪುರಸ್ಕೃತ ವೈ.ಎ. ದಂತಿಯವರು ಮೂಲತಃ ಬೆಳಗಾವಿ ಜಿಲ್ಲೆಯ ಅಥಣಿಯುವರಾಗಿದ್ದು, 1958ರಲ್ಲಿ ಸಾಗರದ ಕಾರ್ಗಲ್‌ಗೆ ಆಗಮಿಸಿ, 1965ರಲ್ಲಿ ಸಾಗರದಲ್ಲಿ ‘ರವೀಂದ್ರ ಪುಸ್ತಕಾಲಯ’ವನ್ನು ಆರಂಭಿಸಿದರು. ಸದಭಿರುಚಿಯ ಪುಸ್ತಕ ಪ್ರಕಟಣೆ, ವಿತರಣೆ, ಮಾರಾಟ, ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವುದರ ಮೂಲಕ ಕನ್ನಡದ ಸಾಂಸ್ಕೃತಿಕ ಚಹರೆಗಳನ್ನು ವಿಸ್ತರಿಸಿದರು. ಶಿವರಾಮ ಕಾರಂತ, ಎಂ.ಕೆ. ಇಂದಿರಾ, ಹೊಸ್ತೋಟ ಮಂಜುನಾಥ ಭಾಗವತ ಸೇರಿದಂತೆ ಹಲವು ಹಿರಿ ಕಿರಿಯ ಲೇಖಕರ ಕೃತಿಗಳನ್ನು ಪ್ರಕಟಿಸಿದ ಹೆಮ್ಮೆ ರವೀಂದ್ರ ಪುಸ್ತಕಾಲಯದ್ದಾಗಿದೆ. ಇವರ ಸೇವೆಯನ್ನು ಕನ್ನಡ ಸಾಹಿತ್ಯ ಪರಿಷತ್ತು ಸೇರಿದಂತೆ ಹಲವು ಸಂಘ ಸಂಸ್ಥೆಗಳು ಗುರುತಿಸಿ ಗೌರವಿಸಿವೆ. ಇದೀಗ ಈ ವರ್ಷದ ‘ಎಂ. ಗೋಪಾಲಕೃಷ್ಣ ಅಡಿಗ ಪುಸ್ತಕ ಪರಿಚಾರಕ ಪ್ರಶಸ್ತಿ’ಯನ್ನು ನೀಡಿ ಇವರನ್ನು ಗೌರವಿಸುತ್ತಿದೆ.
ಶ್ರೀಮತಿ ವಿಶಾಲಾಕ್ಷೀ ಶರ್ಮರವರು ಹುಟ್ಟಿದ್ದು 1953ರ ಅ.26ರಂದು ಉತ್ತರ ಕನ್ನಡ ಜಿಲ್ಲೆಯ ಬಕ್ಕೆಮನೆಯಲ್ಲಿ ಇವರ ಎಸ್.ಎಸ್.ಎಲ್.ಸಿ. ವಿದ್ಯಾಭ್ಯಾಸವಾಗಿದ್ದು, ‘ಭೂಮಿ ಬುಕ್ಸ್’ ಎಂಬ ಪ್ರಕಾಶನ ಸಂಸ್ಥೆಯನ್ನು ಸ್ಥಾಪಿಸಿ, ವಿಜ್ಞಾನ, ಸಮಾಜಶಾಸ್ತ್ರ, ಕೃಷಿ, ಅಭಿವೃದ್ಧಿ ಮೀಮಾಂಸೆ ಮುಂತಾದ ವಿಷಯಗಳಿಗೆ ಸಂಬಂಧಿಸಿದಂತೆ 40ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಪ್ರತಿಯೊಂದು ಪುಸ್ತಕ ಪ್ರಕಟವಾದಾಗಲೂ ಒಂದೊಂದು ಮರ ನೆಟ್ಟು ಪರಿಸರ ಸಂರಕ್ಷಣೆಯ ಪ್ರತಿಜ್ಞೆಯನ್ನು ಕ್ರಿಯಾಶೀಲವಾಗಿ ಪಾಲಿಸುತ್ತಾ ಬಂದಿದ್ದಾರೆ. ನಾಗೇಶ್ ಹೆಗಡೆ, ಕೊಳ್ಳೆಗಾಲ ಶರ್ಮ, ಅನಿತಾ ಪೈಲೂರ್, ಮಲ್ಲಿಕಾರ್ಜುನ ಹೊಸಪಾಳ್ಯ, ಆನಂದತೀರ್ಥ ಪ್ಯಾಟಿ, ಗುರುರಾಜ್ ದಾವಣಗೆರೆ, ಅಖಿಲೇಷ್ ಚಿಪ್ಪಳಿ, ಶರಣ ಬಸವೇಶವರ ಅಂಗಡಿ ಮುಂತಾದವರ ಕೃತಿಗಳನ್ನು ಪ್ರಕಟಿಸಿದ್ದಾರೆ. ಈ ವರ್ಷದ ಕರ್ನಾಟಕ ಪ್ರಕಾಶಕರ ಸಂಘ-2023ನೇ ಸಾಲಿನ ‘ನಂಜನಗೂಡು ತಿರುಮಲಾಂಬ ಪ್ರಕಾಶನ ಪ್ರಶಸ್ತಿ’ಯನ್ನು ಇವರಿಗೆ ನೀಡಿ ಗೌರವಿಸುತ್ತಿದೆ. ಇಬ್ಬರೂ ಪುರಸ್ಕೃತರಿಗೆ ನೀಡಿದ ಈ ಪ್ರಶಸ್ತಿಯು 15,000 ನಗದು ಮತ್ತು ಫಲಕವನ್ನು ಒಳಗೊಂಡಿರುತ್ತದೆ.