ಉಡುಪಿ : ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ ಉಡುಪಿ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ (ಮಾಹೆ) ಮಣಿಪಾಲ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕರ್ನಾಟಕ ಸರಕಾರ ಬೆಂಗಳೂರು ಇದರ ಸಹಯೋಗದಲ್ಲಿ ‘ಗೋವಿಂದ ಪೈ ಸಂಶೋಧನ ಸಂಪುಟ 1’ ಅನಾವರಣ ಸಮಾರಂಭವನ್ನು ದಿನಾಂಕ 16 ನವೆಂಬರ್ 2024ರಂದು ಬೆಳಿಗ್ಗೆ 10-00 ಗಂಟೆಗೆ ಉಡುಪಿ ಕುಂಜಿಬೆಟ್ಟು ಎಂ.ಜಿ.ಎಂ. ಕಾಲೇಜು ಆವರಣ ನೂತನ ರವೀಂದ್ರ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ.
ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಸಲಹಾ ಸಮಿತಿಯ ಪ್ರಧಾನ ಸಂಪಾದಕರು ಹಾಗೂ ಅಧ್ಯಕ್ಷರಾದ ಡಾ. ಬಿ.ಎ. ವಿವೇಕ ರೈ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಸಮಾರಂಭದಲ್ಲಿ ಮಾಹೆ ಸಹ ಕುಲಾಧಿಪತಿಗಳಾದ ಡಾ. ಎಚ್.ಎಸ್. ಬಲ್ಲಾಳ್ ಇವರು ಗ್ರಂಥ ಅನಾವರಣ ಮಾಡಲಿರುವರು. ವಿಶ್ರಾಂತ ಪ್ರಾಧ್ಯಾಪಕರಾದ ಡಾ. ಎನ್.ಎಸ್. ತಾರಾನಾಥ ಇವರು ಸಂಪುಟದ ಕುರಿತು ಮಾತನಾಡಲಿದ್ದಾರೆ.
ಕಾವ್ಯ, ನಾಟಕ ರಚನೆ, ವಿಮರ್ಶೆ ಹೀಗೆ ಸಾಹಿತ್ಯದ ಹತ್ತು ಹಲವು ಪ್ರಕಾರಗಳಲ್ಲಿ ತೊಡಗಿಸಿಕೊಂಡಿದ್ದ ಕರ್ನಾಟಕದ ಮೊದಲ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈಗಳು ಈ ನಾಡು ಕಂಡ ಅತ್ಯಂತ ಶ್ರೇಷ್ಠ ಸಂಶೋಧಕರು. ಶಬ್ದ, ಭಾಷೆ, ಸಾಹಿತ್ಯ, ಕಲೆ, ಇತಿಹಾಸ, ಸಂಸ್ಕೃತಿಯ ಮೇಲೆ ಅವರು ಹೇರಳವಾಗಿ ಅಧ್ಯಯನ ನಡೆಸಿ ಲೇಖನಗಳನ್ನು ಪ್ರಕಟಿಸಿದ್ದಾರೆ. ಹಲವು ಭಾಷೆಗಳನ್ನು ಬಲ್ಲವರಾಗಿದ್ದ ಗೋವಿಂದ ಪೈಗಳು ಸಂಶೋಧನೆಗೆ ಅಂತರ್‌ಶಿಸ್ತೀಯ ಆಯಾಮವನ್ನು ಕೊಟ್ಟವರಾಗಿದ್ದರು. ಅಂದು ದೊರಕಿದ ಸುಮಾರು ಸಾವಿರಕ್ಕೂ ಮಿಕ್ಕಿದ ಅವರ ಸಂಶೋಧನ ಲೇಖನಗಳನ್ನು ಸಂಗ್ರಹಿಸಿ 1995ರಲ್ಲಿ ಪ್ರೊ. ಹೆರಂಜೆ ಕೃಷ್ಣ ಭಟ್ ಹಾಗೂ ಪ್ರೊ. ಮುರಳೀಧರ ಉಪಾಧ್ಯ ಅವರ ಸಂಪಾದಕತ್ವದಲ್ಲಿ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ 1400 ಪಟಗಳ ಸಮಗ್ರ ಗೋವಿಂದ ಪೈ ಸಂಶೋಧನ ಸಂಪುಟವನ್ನು ಪ್ರಕಟಿಸಿತ್ತು. ಇಂದಿಗೂ ಹಾಗೂ ಮುಂದಿನ ಸಂಶೋಧನೆಗಳಿಗೂ ದಾರಿದೀಪದಂತಿರುವ ಈ ಕೃತಿಯಲ್ಲಿ ಹಳಗನ್ನಡ, ನಡುಗನ್ನಡ, ಹೊಸಗನ್ನಡ ಮಾತ್ರವಲ್ಲ ಕರ್ನಾಟಕ ಹಾಗೂ ಭಾರತದ ಚರಿತ್ರೆ ಹಾಗೂ ತುಳುನಾಡಿನ ಇತಿಹಾಸದ ಮೇಲೆ ಬೆಳಕು ಚೆಲ್ಲುವಂತಹ ಹಲವಾರು ಲೇಖನಗಳಿವೆ. ಬಹುಬೇಡಿಕೆಯ ಈ ಕೃತಿ ಇಂದು ಮತ್ತೆ ಮರುಮುದ್ರಣವನ್ನು ಕಾಣುತ್ತಿದೆ. ಮತ್ತೆ ಸಿಕ್ಕಿದ ಒಂದಷ್ಟು ಲೇಖನಗಳು ಮರುಮುದ್ರಿತ ಕೃತಿಯಲ್ಲಿ ಜಾಗ ಪಡೆದಿವೆ. ಅಂದಿನ ಸಮಗ್ರ ಸಂಪುಟವನ್ನು ಇದೀಗ ಎರಡು ಸಂಪುಟಗಳಾಗಿ ಮಾಡಿಕೊಳ್ಳಲಾಗಿದ್ದು, ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆರ್ಥಿಕ ಸಹಾಯದಿಂದ ಮರುಮುದ್ರಿತ ಸಂಪುಟಗಳ ಪ್ರಕಟನ ಸಲಹಾ ಮಂಡಳಿಯ ಅಧ್ಯಕ್ಷ ಹಾಗೂ ಗೌರವ ಸಂಪಾದಕ ಪ್ರೊ. ಬಿ.ಎ. ವಿವೇಕ ರೈಯವರಾಗಿದ್ದು, ಪ್ರೊ. ಮುರಳೀಧರ ಉಪಾಧ್ಯ ಹಾಗೂ ಡಾ. ಪಾದೇಕಲ್ಲು ವಿಷ್ಣು ಭಟ್ಟ ಅವರ ಸಂಪಾದಕತ್ವದಲ್ಲಿ ದ್ವಿತೀಯ ಆವೃತ್ತಿಯ ಮೊದಲ ಸಂಪುಟ ಬಿಡುಗಡೆಗೆ ಇದೀಗ ಸಿದ್ಧವಾಗಿದೆ.