ಮಹಾಭಾರತ ಕತೆ ಮನುಷ್ಯ ಲೋಕದ ಎಂದೂ ಮುಗಿಯದ ಅಹಂಕಾರದ, ಮನುಷ್ಯ ಛಲದ ಹಾಗೂ ಅಧಿಕಾರ ರಾಜಕಾರಣದ ಕತೆಯಾಗಿದೆ. ಈ ಕತೆಯು ಇಂದೂ ಆಧುನಿಕ ರೂಪದಲ್ಲಿ ಹತ್ತು ಹಲವು ವರಸೆಗಳ ಮೂಲಕ ಮುಂದುವರಿಯುವುದನ್ನು ಕಾಣಬಹುದು. ಹಾಗಾಗಿ ಕುರುಕ್ಷೇತ್ರ ಯುದ್ಧ ಇನ್ನೂ ಮುಗಿದಿಲ್ಲ, ಅದು ಅವ್ಯಾಹತವಾಗಿ ಮುಂದುವರಿದಿದೆ. ಪುರುಷ ಮನೆಯ ಹೊರಗೆ ಪ್ರತಿಷ್ಠೆಯನ್ನು ಮೆರೆಯುವವನು. ಆದರೆ ಹೆಣ್ಣಿಗೆ ಮನೆ ಮುಖ್ಯ. ಆಕೆಗದು ಬೆಚ್ಚನೆ ಸುಖದ ತಾಣ. ಆಕೆಗೆ ಮನೆ ಎಂದರೆ ಕೇವಲ ನಾಲ್ಕು ಗೋಡೆಗಳ, ಕಲ್ಲು-ಇಟ್ಟಿಗೆಗಳ ಕಟ್ಟಡ ಅಲ್ಲ. ಹೆಣ್ಣಿಗೆ ಮನೆ ಎಂದರೆ ಆಕೆಯ ಗಂಡ, ಮಕ್ಕಳು ಸಂಬಂಧ, ಪ್ರೀತಿ – ಎಲ್ಲದರ ಗಾಢ ಬೆಸುಗೆ. ಅವಳಿಗೆ ಮನೆ ಎಂದರೆ ಅವಳ ಅಸ್ತಿತ್ವ, ಅವಳ ಭಾವನೆ-ಭಾವೈಕ್ಯದ ಗೂಡು. ಹಾಗಾಗಿ ಅವಳು ಮನೆಯ ರಕ್ಷಣೆಯನ್ನು ಹೊತ್ತವಳು. ಅದಕ್ಕಾಗಿ ಅವಳು ಮನೆಯನ್ನು ಸದಾ ರಕ್ಷಿಸಿಕೊಳ್ಳಲು ಪ್ರಯತ್ನಿಸುತ್ತಲೇ ಇರುತ್ತಾಳೆ. ಆದರೆ ಪ್ರತಿಷ್ಠೆಗಾಗಿ, ಅಧಿಕಾರಕ್ಕಾಗಿ ಯುದ್ಧದ ಹಿಂದೆ ಬಿದ್ದ ಪುರುಷ ಹೆಣ್ಣಿನ ಈ ಕಾಳಜಿಯನ್ನು ಯಾವತ್ತೂ ಅರ್ಥ ಮಾಡಿಕೊಂಡಿಲ್ಲ. ಪುರುಷನಿಗೆ ಮನೆ ಕೇಂದ್ರವಲ್ಲ. ಅವನಿಗೆ ಮನೆಯ ಕಡೆಗೆ ಗಮನವೇ ಇರುವುದಿಲ್ಲ. ಹಾಗಾಗಿ ಯುದ್ಧದ ಅಂತಿಮ ಪರಿಣಾಮವೆಂದರೆ ಮನೆ ಮುರಿಯುವುದು, ಮನಸ್ಸು ಹಾಳು ಮಾಡುವುದೇ ಆಗಿದೆ. ಆದ್ದರಿಂದ ಮನೆಯ ತಾಯಂದಿರಿಗೆ, ಹೆಂಗಸರಿಗೆ ಬೇಡ, ಮಕ್ಕಳಿಗೆ ಯುದ್ಧ ಬೇಡ. ಅದು ಬೇಕಾದುದು ಅಧಿಕಾರ ನಡೆಸುವ ಪ್ರಭುತ್ವಕ್ಕೆ ಮಾತ್ರ. ವಾಸ್ತವದಲ್ಲಿ ಹಿಂಸೆಯಿಂದ ಶಾಂತಿ ಸಾಧ್ಯವಾಗದು. ದ್ವೇಷವೇ ಹೆಚ್ಚುವುದು. ಹಾಗಾಗಿ ಪ್ರೀತಿಯೊಂದೇ ಜಗತ್ತನ್ನು ಗೆಲ್ಲಬಲ್ಲದು. ಈ ಆಶಯದೊಂದಿಗೆ ಸಂತ ಅಲೋಶಿಯಸ್ ಕಾಲೇಜಿನ ರಂಗ ಅಧ್ಯಯನ ಕೇಂದ್ರವು ಕನ್ನಡ ವಿಭಾಗದ ಸಹಯೋಗದೊಂದಿಗೆ ಜನವರಿ 23, ಮಂಗಳವಾರದಂದು ಕಾಲೇಜಿನ ಸಹೋದಯ ಸಭಾಂಗಣದಲ್ಲಿ ಮಧ್ಯಾಹ್ನ 2:30ಕ್ಕೆ ಸರಿಯಾಗಿ ‘ಗೃಹಭಂಗ’ ಯಕ್ಷ ರೂಪಕದ ಪ್ರದರ್ಶನ ನಡೆಯಿತು.
ಕುರುಕ್ಷೇತ್ರ ಯುದ್ಧದ ಹದಿಮೂರನೆಯ ದಿನ ಕೌರವ ಸೇನೆಯ ಎಲ್ಲ ಅತಿರಥ, ಮಹಾರಥರು ಸೇರಿ ಯುದ್ಧನೀತಿಯನ್ನು ಮರೆತು ಅರ್ಜುನನ ಮಗನಾದ ಅಭಿಮನ್ಯುವನ್ನು ಹತ್ಯೆಗೈಯುವ ಮೂಲಕ ಮನುಷ್ಯ ಕ್ರೌರ್ಯದ ಪರಾಕಾಷ್ಠೆಯನ್ನು ಮೆರೆಯುತ್ತಾರೆ. ಯಕ್ಷಗಾನದಲ್ಲಿ ಅತ್ಯಂತ ಜನಪ್ರಿಯ ಪ್ರಸಂಗವಾಗಿರುವ ‘ಅಭಿಮನ್ಯು ಕಾಳಗ’ ಪಠ್ಯವನ್ನು ಮರು ಹೆಣೆದು ‘ಗೃಹಭಂಗ’ ಪರಿಕಲ್ಪನೆಯಲ್ಲಿ ಹಿಂಸೆಯನ್ನು ತ್ಯಜಿಸಿ ಪ್ರೀತಿಯನ್ನು ಎಲ್ಲೆಡೆ ಸಾರುವ ನೆಲೆಯಲ್ಲಿ ಸೃಜನಶೀಲವಾಗಿ ಮರುಕಟ್ಟಲಾಗಿದೆ. ವೃತ್ತಿಪರ ಮೇಳಗಳಲ್ಲಿ ಚಾಲ್ತಿಯಲ್ಲಿರುವ ಪ್ರಾತಃಸ್ಮರಣೀಯ ಯಕ್ಷಗಾನ ಕವಿ ದೇವೀದಾಸನ ‘ಅಭಿಮನ್ಯು ಕಾಳಗ’ ದ ಪ್ರಸಂಗದ ಬಹುತೇಕ ಪದ್ಯಗಳನ್ನು ಕೈ ಬಿಟ್ಟು 17ನೇ ಶತಮಾನದ ಪರಮದೇವ ಕವಿಯ ‘ತುರಂಗ ಭಾರತ’ದ ವಾರ್ಧಕ ಷಟ್ಪದಿಯಲ್ಲಿರುವ ಪದ್ಯಗಳನ್ನು ಇಲ್ಲಿ ಹೆಚ್ಚು ಬಳಸಲಾಗಿದೆ. ಜೊತೆಗೆ ಗಿರೀಶ್ ಕಾರ್ನಾಡರ ‘ಹಯವದನ’ ನಾಟಕದಲ್ಲಿ ಬರುವ ಗಣಪತಿ ಸ್ತುತಿ ಮತ್ತು ನಂದಿಕೇಶ್ವರನ ‘ಅಭಿನಯ ದರ್ಪಣ’ದಲ್ಲಿ ಬರುವ ಶಿವಸ್ತುತಿ ಶ್ಲೋಕವನ್ನೂ ಸೇರಿಸಲಾಗಿದೆ. ಮಾತ್ರವಲ್ಲದೇ ಪ್ರಸಂಗಕ್ಕೆ ಪೂರಕವಾಗಿ ಕೆಲವೊಂದು ಪದ್ಯಗಳನ್ನು ಹೊಸದಾಗಿ ರಚಿಸಿ ಈ ಪ್ರದರ್ಶನವನ್ನು ನೀಡಲಾಗಿತ್ತು.
ಸುಮಾರು ಒಂದೂವರೆ ಗಂಟೆ ಅವಧಿಯ ಈ ರಂಗಪ್ರಸ್ತುತಿಯಲ್ಲಿ ಶ್ರೀ ಹನುಮಗಿರಿ ಮೇಳದ ಹಿಮ್ಮೇಳ ಕಲಾವಿದರು ಭಾಗವಹಿಸಿದ್ದರು. ಚಿನ್ಮಯ ಭಟ್ ಮತ್ತು ರವಿಚಂದ್ರ ಕನ್ನಡಿಕಟ್ಟೆಯವರ ದ್ವಂದ್ವ ಭಾಗವತಿಕೆಯ ಜೊತೆಗೆ ವಿಶ್ವಾಸ್ ಕೃಷ್ಣ ಅವರ ವಯೊಲಿನ್ ವಾದನ, ಮುಮ್ಮೇಳದಲ್ಲಿ ಹನುಮಗಿರಿ ಮೇಳದ ಪೆರ್ಮುದೆ ಜಯಪ್ರಕಾಶ ಶೆಟ್ಟಿಯವರು ದ್ರೋಣನಾಗಿ ಮತ್ತು ರಕ್ಷಿತ್ ಶೆಟ್ಟಿ ಪಡ್ರೆಯವರು ಸುಭದ್ರೆಯಾಗಿ ಹವ್ಯಾಸಿ ಕಲಾವಿದರ ಜೊತೆಯಾದದ್ದು ವಿಶೇಷ. ಅಲೋಶಿಯಸ್ ಕಾಲೇಜಿನ ಮೂವತ್ತು ಮಂದಿ ವಿದ್ಯಾರ್ಥಿಗಳು ಮುಖಕ್ಕೆ ಬಣ್ಣಹಚ್ಚಿದ್ದು, ಜೊತೆಗೆ ಏಳು ಮಂದಿ ಪ್ರಾಧ್ಯಾಪಕರು ವಿದ್ಯಾರ್ಥಿಗಳಿಗೆ ಸಾಥ್ ನೀಡಿದ್ದರು. ಈ ಪ್ರದರ್ಶನಕ್ಕೆ ರಕ್ಷಿತ್ ಶೆಟ್ಟಿ ಪಡ್ರೆಯವರ ನಾಟ್ಯ ಸಂಯೋಜನೆಯ ಜವಾಬ್ದಾರಿ ಗಮನ ಸೆಳೆಯಿತು. ಕ್ರಿಸ್ಟೋಫರ್ ನೀನಾಸಂ ಅವರು ಬೆಳಕಿನ ವಿನ್ಯಾಸವನ್ನು ಮಾಡಿದರು. ಕನ್ನಡ ವಿಭಾಗದ ಡಾ ದಿನೇಶ್ ನಾಯಕ್ ಅವರ ಕಲ್ಪನೆ ಮತ್ತು ವಿನ್ಯಾಸದಲ್ಲಿ ‘ಗೃಹಭಂಗ’ ರಂಗಪಠ್ಯವು ವೇದಿಕೆಯ ಮೇಲೆ ವಿಶೇಷವಾಗಿ ಮೂಡಿ ಬಂದು ಜನಮನ್ನಣೆಗೆ ಪಾತ್ರವಾಯಿತು.
ಪ್ರಸ್ತುತ ಕಾಲಘಟ್ಟದಲ್ಲಿ ಪ್ರದರ್ಶನಗೊಳ್ಳುತ್ತಿರುವ ಸಾಮಾನ್ಯ ಯಕ್ಷಗಾನ ಪ್ರದರ್ಶನದಂತೆ ಈ ಯಕ್ಷರೂಪಕ ಇರಬಹುದು ಎನ್ನುವ ಕಲ್ಪನೆಯಿದ್ದ ನನಗೆ ಈ ರೂಪಕ ತೀರಾ ವಿಭಿನ್ನ ಅನುಭವ ನೀಡಿತು. ಪ್ರಥಮ ದೃಶ್ಯದಲ್ಲಿ ಸಂಜಯ ಮಹಾಭಾರತ ಯುದ್ದದ ಸನ್ನಿವೇಶದ ವಿವರಣೆ ನೀಡುತ್ತಿರುವಾಗ “ಇದುವರೆಗೆ ಸತ್ತಿರುವ ಲೆಕ್ಕವಿಲ್ಲದಷ್ಟು ಸೈನಿಕರ ಹೆಂಡತಿಯರು ಮಿತ್ರರಾಜರ ಹೆಂಡತಿಯರು ವಿಧವೆಯರಾಗಿದ್ದಾರಲ್ಲವೇ” ಎನ್ನುವ ಗಾಂಧಾರಿಯ ದುಃಖದ ಮಾತುಗಳು ಈ ರೂಪಕ ವಿಭಿನ್ನವಾಗಿದೆ ಎನ್ನುವ ಭಾವನೆಯನ್ನು ಮೂಡಿಸುತ್ತದೆ. ಸುಯೋಧನನ ಮಾತು, ಸಮಸಪ್ತಕರ ಪ್ರವೇಶ ಮತ್ತು ಲಯಬದ್ಧವಾದ ನೃತ್ಯ, ಸುಭದ್ರೆ ಮತ್ತು ಅಭಿಮನ್ಯುವಿನ ಸಂಭಾಷಣೆ, ಚಕ್ರವ್ಯೂಹವನ್ನು ಅಭಿಮನ್ಯು ಭೇಧಿಸುವಾಗ ವೇದಿಕೆಯ ಮೇಲೆ ಇಪ್ಪತ್ತಕ್ಕೂ ಹೆಚ್ಚು ಕಲಾವಿದರನ್ನು ಒಂದೇ ದೃಶ್ಯದಲ್ಲಿ ಸಂಯೋಜಿಸಿದ ರೀತಿ ಅದ್ಭುತವಾಗಿತ್ತು. ಭಾಗವತಿಕೆ ಮತ್ತು ಹಿಮ್ಮೇಳ ಮುದವಾದ ಅನುಭವವನ್ನು ನೀಡುತ್ತದೆ. ವಯೋಲಿನ್ ನಮ್ಮ ಪಕ್ಕದಲ್ಲೇ ಕುಳಿತು ನುಡಿಸುತ್ತಿರುವಂತೆ ಭಾಸವಾಗುತ್ತದೆ. ಬೆಳಕಿನ ಸಂಯೋಜನೆ ಅದ್ಭುತ. ರೂಪಕದ ಯಶಸ್ಸಿನ ಪ್ರಮುಖ ಪಾಲು ಬೆಳಕಿನ ಸಂಯೋಜನೆ ಮತ್ತು ದ್ವನಿ. ಎಲ್ಲಾ ಕಲಾವಿದರು ತಮ್ಮ ಪಾತ್ರವನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. “ಸ್ವಪ್ರತಿಷ್ಠೆ, ಅಹಂಕಾರ, ತಾನು ಎನ್ನುವ ಗರ್ವ ಪುರುಷ ಸಮಾಜದ್ದು. ಹೆಣ್ಣಿಗೂ ಒಂದು ಭಾವನೆ ಇದೆ, ಮನಸ್ಸು ಇದೆ” ಎನ್ನುವ ಸುಭದ್ರೆಯ ದುಃಖದ ನುಡಿಗಳು, “ತಮ್ಮ ಭಾವನೆಗಳು ಪ್ರಕಟವಾಗುವುದು ನಾಲ್ಕು ಗೋಡೆಗಳ ಮಧ್ಯೆ” ಎನ್ನುವ ಮಾತುಗಳು ವೀಕ್ಷಕರನ್ನು ಬಹಳಷ್ಟು ಕಾಡುತ್ತದೆ. “ಸಮರವು ಜೀವನವಲ್ಲವೊ, ನಿರ್ಮಲ ಪ್ರೀತಿ ಎಲ್ಲದರ ಮೂಲವು” ಎನ್ನುವ ಕೊನೆಯ ಸಂದೇಶ, ನಮಗೆ ಹಿತವೆನಿಸುತ್ತದೆ. ರಂಗ ಅಧ್ಯಯನ ಕೇಂದ್ರದ ಪ್ರಯತ್ನ ಪ್ರಥಮ ಪ್ರದರ್ಶನದಲ್ಲಿ ಯಶಸ್ಸು ಗಳಿಸಿದೆ. ಈ ಯಕ್ಷರೂಪದ ಪರಿಕಲ್ಪನೆ ಮತ್ತು ವಿನ್ಯಾಸ ಮಾಡಿದ ಡಾ.ದಿನೇಶ್ ನಾಯಕ್, ಬೆಳಕಿನ ಸಂಯೋಜನೆ ಮಾಡಿದ ಕ್ರಿಸ್ಟೋಫರ್ ನಿನಾಸಂ ಮತ್ತು ಕಾಲೇಜಿನ ಪ್ರಾಂಶುಪಾಲರು, ಅಧ್ಯಾಪಕ ವೃಂದ, ವಿದ್ಯಾರ್ಥಿ ಬಳಗಕ್ಕೆ ಅಭಿನಂದನೆಗಳು. ಮುಂದಿನ ಪ್ರದರ್ಶನ ಸಂದರ್ಭದಲ್ಲಿ ನಾನು ಮುಂದಿನ ಸಾಲಿನಲ್ಲಿ,
ವಂದನೆಗಳು.
ಶ್ರೀಮತಿ ಸೌಮ್ಯ ಪ್ರಕಾಶ್
ಮಂಗಳೂರಿನ ಹೊಸಬೆಟ್ಟು ನಿವಾಸಿಯಾಗಿರುವ ಇವರು ಎಂ. ಕಾಮ್ ಮತ್ತು ಎಂ. ಫಿಲ್ ಪದವೀಧರೆಯಾಗಿದ್ದಾರೆ.