ಸುರತ್ಕಲ್ : ಪ್ರೊ. ಪಿ. ಕೆ. ಮೊಯ್ಲಿ ಅಭಿನಂದನಾ ಸಮಿತಿ ಸುರತ್ಕಲ್ ಮತ್ತು ಗೋವಿಂದ ದಾಸ ಕಾಲೇಜಿನ ಡಾ. ಸೀ. ಹೊಸಬೆಟ್ಟು ಅಧ್ಯಯನ ಕೇಂದ್ರ ಮತ್ತು ಮಾನವಿಕ ಸಂಘದ ಸಹಭಾಗಿತ್ವದಲ್ಲಿ ಗೋವಿಂದ ದಾಸ ಕಾಲೇಜಿನ ನಿವೃತ್ತ ಪ್ರಾಂಶುಪಾಲ, ಹಿರಿಯ ಲೇಖಕ, ಶಿಕ್ಷಣ ತಜ್ಞ ಹಾಗೂ ಪತ್ರಕರ್ತರಾಗಿ ಜನಪ್ರಿಯರಾಗಿರುವ ಪ್ರೊ. ಪಿ.ಕೆ. ಮೊಯ್ಲಿ ಅವರ ಅಭಿನಂದನಾ ಸಮಾರಂಭವು ದಿನಾಂಕ 06-04-2024ರಂದು ಗೋವಿಂದ ದಾಸ ಕಾಲೇಜಿನ ದೃಶ್ಯಶ್ರಾವ್ಯ ಮಂದಿರದಲ್ಲಿ ಸಂಜೆ3.30ರಿಂದ ನಡೆಯಲಿದೆ. ಈ ಸಂದರ್ಭದಲ್ಲಿ ಪ್ರೊ. ಪಿ. ಕೆ. . ಮೊಯ್ಲಿಯವರ ಅಭಿನಂದನಾ ಕೃತಿ ‘ಗುರುಭ್ಯೋ ನಮಃ’ ಲೋಕಾರ್ಪಣೆಗೊಳ್ಳಲಿದೆ.
ಸಮಾರಂಭದ ಅಧ್ಯಕ್ಷತೆಯನ್ನು ಹಿಂದೂ ವಿದ್ಯಾದಾಯಿನೀ ಸಂಘದ ಅಧ್ಯಕ್ಷ ಹೆಚ್. ಜಯಚಂದ್ರ ಹತ್ವಾರ್ ವಹಿಸಲಿದ್ದು ಕೃತಿ ಬಿಡುಗಡೆಯನ್ನು ಹಿರಿಯ ವಿದ್ವಾಂಸ ಡಾ. ಪ್ರಭಾಕರ ಜೋಷಿ ನಡೆಸಿಕೊಡಲಿದ್ದಾರೆ.
ಪ್ರೊ. ಪಿ. ಕೆ. ಮೊಯ್ಲಿಯವರು ದಕ್ಷಿಣ ಕನ್ನಡ ಜಿಲ್ಲಾ ಬೋರ್ಡಿನ ಆಡಳಿತಕ್ಕೊಳಪಟ್ಟ ವಿವಿಧ ಪ್ರೌಢಶಾಲೆಗಳಲ್ಲಿ ಪದವೀಧರ ಶಿಕ್ಷಕರಾಗಿ, ಹಿಂದಿ ಪಂಡಿತರಾಗಿ ಬೈಂದೂರಿನಿಂದ ತೊಡಗಿ ಪಂಜ, ಬೆಳ್ಳಾರೆ, ಹಿರಿಯಡ್ಕ, ಕಾರ್ಕಳದವರೆಗೆ ವಿವಿಧ ಕಡೆ ಸೇವೆ ಸಲ್ಲಿಸಿದ್ದಾರೆ.
ಗೋವಿಂದ ದಾಸ ಕಾಲೇಜಿನಲ್ಲಿ ಅಧ್ಯಾಪಕರಾಗಿ ಸೇವೆಗೆ ಸೇರ್ಪಡೆಗೊಂಡು ಇತಿಹಾಸ ವಿಭಾಗದ ಮುಖ್ಯಸ್ಥರಾಗಿ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಯಾಗಿ ಹಾಗೂ ಕಾಲೇಜಿನ ಪ್ರಾಚಾರ್ಯರಾಗಿ ದುಡಿದಿದ್ದಾರೆ. ನಿವೃತ್ತಿ ನಂತರ ಸುರತ್ಕಲ್ ಶ್ರೀ ಮಹಾಲಿಂಗೇಶ್ವರ ಆಂಗ್ಲಮಾಧ್ಯಮ ಶಾಲೆ, ಕಾಟಿಪಳ್ಳ ಶ್ರೀ ನಾರಾಯಣಗುರು ಶಿಕ್ಷಣ ಸಂಸ್ಥೆ ಹಾಗೂ ಕಾರ್ಕಳದ ಶ್ರೀ ವೆಂಕಟರಮಣ ಮಹಿಳಾ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದಾರೆ. ಕಲಾವಿದರಾಗಿ, ಭಾಗವತರಾಗಿ, ಕಲಾಪ್ರೇಮಿಯಾಗಿ, ಕಲಾ ವಿಮರ್ಶಕರಾಗಿ ವಿವಿಧ ಶೈಕ್ಷಣಿಕ ಹಾಗೂ ಸಾಮಾಜಿಕ ಸಂಸ್ಥೆಗಳ ಮಾರ್ಗದರ್ಶಕರಾಗಿ ತಮ್ಮ ಅನುಭವವನ್ನು ಧಾರೆ ಎರೆದಿದ್ದಾರೆ.