ಮಂಗಳೂರು : ಉಳ್ಳಾಲದ ಮಂತ್ರ ನಾಟ್ಯಕಲಾ ಗುರುಕುಲ (ರಿ.) ಇವರ ವತಿಯಿಂದ ‘ಗುರುಕುಲ ಉತ್ಸವ 2026’ ತ್ರಯೋದಶ ನಾಟ್ಯ ಸಂಭ್ರಮವು ದಿನಾಂಕ 17 ಜನವರಿ 2026ರಂದು ಕುತ್ತಾರು ಶ್ರೀ ರಾಜರಾಜೇಶ್ವರಿ ಸಿದ್ದಿ ವಿನಾಯಕ ಸಭಾ ವೇದಿಕೆಯಲ್ಲಿ ನಡೆಯಿತು.
ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜೆ.ಸಿ ಇಂಟರ್ನ್ಯಾಷನಲ್ ಸ್ಕೂಲ್ ಕಾರ್ಕಳ ಇದರ ಉಪಾಧ್ಯಕ್ಷರಾದ ಪದ್ಮ ಪ್ರಸಾದ್ ಜೈನ್ “ಮಕ್ಕಳಿಗೆ ಸಂಸ್ಕೃತಿಯ ಪರಿಚಯ ಮಾಡಿಕೊಡುವುದರಿಂದ ಸಂಸ್ಕಾರಯುತ ಸಮಾಜವನ್ನು ಸೃಷ್ಟಿಸಲು ಸಾಧ್ಯ. ಮಂತ್ರ ನಾಟ್ಯಕಲಾ ಗುರುಕುಲವು ಮಕ್ಕಳಲ್ಲಿ ಸಂಸ್ಕಾರವನ್ನು ಮೂಡಿಸುವ ಕೆಲಸವನ್ನು ಮಾಡುತ್ತಿದೆ” ಎಂಬುದಾಗಿ ಅಭಿಪ್ರಾಯಪಟ್ಟರು.
ಸಭಾಧ್ಯಕ್ಷತೆಯನ್ನು ಶ್ರೀ ರಾಜೇಶ್ ಅತ್ತಾವರ ಇವರು ವಹಿಸಿದ್ದು, ಹರೀಶ್ ಮಾಸ್ಟರ್, ಆನಂದ ಕೆ. ಅಸೈಗೋಳಿ, ನರೇಶ್ ಪಂಡಿತ್ ಹೌಸ್, ಗುರುಕುಲದ ಗೌರವಾಧ್ಯಕ್ಷೆ ಶ್ರೀಮತಿ ಶಕೀಲಾ ಜನಾರ್ದನ, ಟ್ರಸ್ಟಿಗಳು ಶ್ರೀಮತಿ ಶೈನಾ ಶ್ರಾವಣ್, ಬಬಿತಾ ಕಿರಣ್ ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದಿಂದ ನಡೆದ ಈ ಕಾರ್ಯಕ್ರಮದಲ್ಲಿ ಏಕಾದಶ ತಂಡಗಳ ಭರತನಾಟ್ಯ ಹಾಗೂ ಜಾನಪದ ನೃತ್ಯ ಕಾರ್ಯಕ್ರಮ ನೆರವೇರಿತು. ಗುರುಕುಲದ ಅಧ್ಯಕ್ಷರು ಶ್ರಾವಣ್ ಉಳ್ಳಾಲ್ ಸ್ವಾಗತಿಸಿ, ಕಿರಣ್ ಉಳ್ಳಾಲ್ ವಂದಿಸಿದರು.
