ಮಂದಾರ್ತಿ : ಬ್ರಹ್ಮಾವರ ಹಂದಾಡಿಯ ಶ್ರೀ ಗಜಾನನ ಯಕ್ಷಗಾನ ವೇಷಭೂಷಣ ಸಂಸ್ಥೆಯ ಸಂಸ್ಥಾಪಕ, ಬಡಗುತಿಟ್ಟಿನ ಹಿರಿಯ ಪ್ರಸಾದನ ತಜ್ಞ ಹಂದಾಡಿ ಬಾಲಕೃಷ್ಣ ನಾಯಕ್ (76 ವರ್ಷ) ದಿನಾಂಕ 04-07-2024ರಂದು ಮಣಿಪಾಲದ ಕೆ.ಎಂ.ಸಿ. ಆಸ್ಪತ್ರೆಯಲ್ಲಿ ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು. ಎಚ್. ಸುಬ್ಬಣ್ಣ ಭಟ್ ಮತ್ತು ಇಂದು ನಾಯಕ್ ಇವರ ಜೊತೆಯಲ್ಲಿ ಬಡಗುತಿಟ್ಟಿನ ವೇಷಭೂಷಣಗಳನ್ನು ವಿವಿಧ ಸಂಘ ಸಂಸ್ಥೆಗಳಿಗೆ ಒದಗಿಸುತ್ತಾ, ಬಳಿಕ ಸ್ವಂತ ಸಂಸ್ಥೆಯನ್ನು ಸ್ಥಾಪಿಸಿದರು. ತಮ್ಮ ಅಪೂರ್ವ ಕಲಾಪ್ರತಿಭೆ ಹಾಗೂ ಸರಳ ಸಜ್ಜನಿಕೆಯಿಂದ ಎಲ್ಲಾ ಸಂಘ ಸಂಸ್ಥೆಗಳಿಗೂ ಅನಿವಾರ್ಯ ಎಂಬಂತೆ ಬಾಳಿದ ಧೀಮಂತರು. ಬಡಗುತಿಟ್ಟಿನ ಕಿರೀಟ ಹಾಗೂ ವೇಷಭೂಷಣಗಳ ತಯಾರಿಕೆಯಲ್ಲಿ ಸಿದ್ಧಹಸ್ತರಾಗಿದ್ದರು. ದೇಶವಿದೇಶಗಳಲ್ಲಿ ನೂರಾರು ಮಂದಿಗೆ ಬಡಗುತಿಟ್ಟಿನ ಪಾರಂಪರಿಕ ವೇಷಭೂಷಣ ಸಿದ್ಧಪಡಿಸಿಕೊಟ್ಟ ಕೀರ್ತಿ ಬಾಲಕೃಷ್ಣ ನಾಯಕರದ್ದು. ತನ್ನ ಮೂವರು ಪುತ್ರರೂ ಈ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವುದು ಈ ಕುಟುಂಬದ ವಿಶೇಷತೆಯಾಗಿದೆ. ಇವರ ಕಲಾ ಪ್ರತಿಭೆಯನ್ನು ಗುರುತಿಸಿ ಕರ್ನಾಟಕ ಯಕ್ಷಗಾನ ಅಕಾಡೆಮಿ, ಯಕ್ಷಗಾನ ಕಲಾರಂಗ ಹಾಗೂ ಕಳೆದ ವರ್ಷ ಉಡುಪಿಯಲ್ಲಿ ಜರಗಿದ ಪ್ರಥಮ ಯಕ್ಷಗಾನ ಸಮ್ಮೇಳನದಲ್ಲಿ ಇವರನ್ನು ಗೌರವಿಸಲಾಗಿತ್ತು. ಉಡುಪಿಯ ಯಕ್ಷಶಿಕ್ಷಣ ಅಭಿಯಾನ ಯಶಸ್ವಿಯಾಗುವಲ್ಲಿ ಬಾಲಕೃಷ್ಣ ನಾಯಕರ ಕೊಡುಗೆ ಮಹತ್ತರವಾದುದು. ಮೃತರು ಪತ್ನಿ, ಮೂವರು ಪುತ್ರರು ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.