ಮಂಗಳೂರು : ಹರಿಕಥಾ ಪರಿಷತ್ (ರಿ.) ಮಂಗಳೂರು ಹಾಗೂ ರಾಮಕೃಷ್ಣ ಮಿಷನ್ ಮಂಗಳೂರು ಇವರ ಜಂಟಿ ಆಶ್ರಯದಲ್ಲಿ ಕರಾವಳಿಯಲ್ಲಿ ಮೊದಲ ಬಾರಿಗೆ ಕರ್ನಾಟಕ ರಾಜ್ಯ ಹಾಗೂ ಕಾಸರಗೋಡು ಜಿಲ್ಲೆಗಳ ವಿದ್ಯಾರ್ಥಿಗಳಿಗೆ ದಿನಾಂಕ 27 ಡಿಸೆಂಬರ್ 2025ರಂದು ‘ಹರಿಕಥಾ ಸ್ಪರ್ಧೆ-2025’ ಮಂಗಳೂರಿನ ರಾಮಕೃಷ್ಣ ಮಠದ ಅಮೃತ ಭವನ ಸಭಾಂಗಣದಲ್ಲಿ ಬೆಳಗ್ಗೆ 8-30ರಿಂದ ಸಂಜೆ 7-00ರವರೆಗೆ ನಡೆಯಲಿದೆ.
ದಕ್ಷಿಣ ಕನ್ನಡ, ಕಾಸರಗೋಡು, ಬೆಂಗಳೂರು, ಶಿವಮೊಗ್ಗ, ಬಾಗಲಕೋಟೆ ಸೇರಿದಂತೆ ನಾನಾ ಜಿಲ್ಲೆಗಳಿಂದ ಆಯ್ದ 23 ಯುವ ಕಥಾಕೀರ್ತನ ಪ್ರತಿಭೆಗಳಿಗೆ ಅವಕಾಶ ನೀಡಲಾಗಿದೆ. ಎರಡು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದ್ದು, 5ರಿಂದ 10ನೇ ತರಗತಿ ವರೆಗಿನವರನ್ನು ಕಿರಿಯ ವಿಭಾಗವಾಗಿ ಹಾಗೂ 10ನೇ ತರಗತಿ ಮೇಲ್ಪಟ್ಟ ವಿದ್ಯಾರ್ಥಿಗಳನ್ನು ಹಿರಿಯ ವಿಭಾಗ ಎಂದು ಗುರುತಿಸಲಾಗಿದೆ. ಕಿರಿಯ ವಿಭಾಗದಲ್ಲಿ ಮೊದಲನೇ ಬಹುಮಾನ ರೂ.5,000/-, ದ್ವಿತೀಯ ಬಹುಮಾನ ರೂ.3,000/- ಹಾಗೂ ತೃತೀಯ ಬಹುಮಾನ ರೂ.2,000/- ನೀಡಲಾಗುವುದು. ಹಿರಿಯರ ವಿಭಾಗದಲ್ಲಿ ಪ್ರಥಮ ಬಹುಮಾನ ರೂ.7,000/-, ದ್ವಿತೀಯ ಬಹುಮಾನ ರೂ.5,000/- ಹಾಗೂ ತೃತೀಯ ಬಹುಮಾನ ರೂ.3,000/- ಮತ್ತು ಪ್ರಮಾಣ ಪತ್ರ, ಟ್ರೋಫಿಯನ್ನು ನೀಡಲಾಗುವುದು.
ಸ್ಪರ್ಧೆಯು ಬೆಳಗ್ಗೆ 9-00 ಗಂಟೆಗೆ ರಾಮಕೃಷ್ಣ ಮಠದ ಅಧ್ಯಕ್ಷರಾದ ಸ್ವಾಮಿ ಜಿತಕಾಮಾನಂದ ಜೀ ಇವರು ಕಾರ್ಯಕ್ರಮ ಉದ್ಘಾಟಿಸಲಿದ್ದು, ಪ್ರಸಿದ್ದ ಲೆಕ್ಕ ಪರಿಶೋಧಕ ಸಿಎ ಎಸ್.ಎಸ್. ನಾಯಕ್ ಶುಭಾಸಂಸನೆ ನೆರವೇರಿಸಲಿದ್ದಾರೆ. ಪರಿಷತ್ ಅಧ್ಯಕ್ಷ ಕೆ. ಮಹಾಬಲ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಜೆ 6-00 ಗಂಟೆಗೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಕಡಪ ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಅನುಪಮಾ ನಂದಜೀ ಆಶೀರ್ವಚನ ನೀಡಲಿದ್ದು, ಪರಿಷತ್ತಿನ ಗೌರವಾಧ್ಯಕ್ಷ ಹರಿಕೃಷ್ಣ ಪುನರೂರು ಸಮಾರೋಪ ನುಡಿಗಳನ್ನಾಡಲಿದ್ದಾರೆ.

