ಹಾಸನ : ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ(ರಿ.), ಬೆಂಗಳೂರು, ತಾಲ್ಲೂಕು ಘಟಕ ಅರಸೀಕೆರೆ ವತಿಯಿಂದ ಹೋಬಳಿ ಘಟಕ ಉದ್ಘಾಟನೆ, ಜಿಲ್ಲಾ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಹಾಗೂ ಪ್ರಶಸ್ತಿ ಪ್ರದಾನ ಮತ್ತು ಜಿಲ್ಲಾ ಮಟ್ಟದ ಕವಿಗೋಷ್ಠಿ ಕಾರ್ಯಕ್ರಮವು ದಿನಾಂಕ 25 ನವೆಂಬರ್ 2024ರಂದು ಜಾವಗಲ್ ಪಟ್ಟಣದ ಹಳೇಬೀಡು ರಸ್ತೆಯಲ್ಲಿರುವ ಖಾದ್ರಿಯಾ ಕಾಂಪ್ಲೆಕ್ಸ್ ಹೊರಾಂಗಣ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕುವೆಂಪು ವಿ. ವಿ. ಇದರ ಪ್ರಾಧ್ಯಾಪಕಿಯಾದ ಡಾ. ಹಸೀನಾ ಎಚ್. ಕೆ. ಮಾತನಾಡಿ ರಾಜ್ಯೋತ್ಸವ ಎಂಬುದು ಕನ್ನಡ ನಾಡುನುಡಿಗೆ ಸಂಬಂಧಿಸಿದ ಆಚರಣೆ, ಇದು ಕನ್ನಡಿಗರ ಭಾವನಾತ್ಮಕ ಅನುಸಂಧಾನ. ಜಾತಿ, ಮತ, ಧರ್ಮ, ಲಿಂಗದೆಲ್ಲೆಗಳ ಮೀರಿದ ನಿರಂತರ ನಿತ್ಯೋತ್ಸವ. ಈಗಾಗಲೇ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ರಾಜ್ಯ ಹಾಗೂ ಹೊರರಾಜ್ಯಗಳಲ್ಲಿ ನಿರಂತರವಾಗಿ ವರ್ಷದುದ್ದಕ್ಕೂ ಕನ್ನಡದ ಕೈಂಕರ್ಯವನ್ನು ಮಾಡುತ್ತಾ ಬಂದಿದೆ. ನಾಡುನುಡಿಯ ಬಗೆಗಿನ ಪ್ರೀತಿ ಪ್ರತಿಯೊಬ್ಬ ಕನ್ನಡಿಗನಲ್ಲಿಯೂ ಅಂತರ್ಗತವಾದ ಅಂಶ. ಕೆಲವು ಸಂಸ್ಥೆಗಳು ಪ್ರತಿವರ್ಷ ನವೆಂಬರ್ ಬಂದಾಗ ಮಾತ್ರ ಕನ್ನಡ ಧ್ವಜಹಾರಿಸಿ, ಆಚರಣೆ ಮಾಡಿ ಮತ್ತೆ ಮಾರನೇ ವರ್ಷದ ನವೆಂಬರ್ ವರೆಗೆ ಸುಮ್ಮನಾಗಿಬಿಡುತ್ತಾರೆ. ಉತ್ಸವ ಎಂದರೆ ಸೀಮಿತವಲ್ಲ. ಅದು ನಮ್ಮೊಳಗಿನ ನಿರಂತರತೆಯಾಗಬೇಕು.” ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಸಂಸ್ಥಾಪಕ ಅಧ್ಯಕ್ಷರಾದ ಕೊಟ್ರೇಶ್ ಎಸ್. ಉಪ್ಪಾರ್ ಮಾತನಾಡಿ “ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ನಾನು, ನಾಗರಾಜ್ ದೊಡ್ಡಮನಿ, ಎಚ್. ಎಸ್. ಬಸವರಾಜ್, ವಾಸು ಸಮುದ್ರವಳ್ಳಿ ನಾಲ್ಕು ಜನ ಹಾಸನದ ಸುಧಾ ಹೋಟೆಲ್ನಲ್ಲಿ ಕೂತು ಚಹಾ ಕುಡಿಯುವಾಗ ಹೊಳೆದು ಸಂಸ್ಥಾಪಿಸಿದ ಸಂಘಟನೆ. ಇಂದು ಚಳವಳಿಯಂತೆ ರಾಜ್ಯದ ಅಷ್ಟೂ ಜಿಲ್ಲೆಗಳಲ್ಲದೆ ಆಂದ್ರಪ್ರದೇಶ, ಮಹಾರಾಷ್ಟ್ರ, ಕೇರಳ ರಾಜ್ಯಗಳಲ್ಲಿ ನೂರಾರು ಘಟಕಗಳನ್ನು ಹೊಂದಿದ್ದು ಸಹಸ್ರಾರು ಸದಸ್ಯರು ಇಂದು ನಮ್ಮ ಸಂಘಟನೆಯಲ್ಲಿ ಕಾಯ, ವಾಚಾ, ಮನಸಾ ಕನ್ನಡ ನಾಡು ನುಡಿಗಾಗಿ ನಿರಂತರವಾಗಿ ಕಾರ್ಯೋನ್ಮುಖರಾಗಿದ್ದಾರೆ. ಈಗಾಗಲೇ ತಾಲ್ಲೂಕು ಸಮ್ಮೇಳನ, ಜಿಲ್ಲಾ ಸಮ್ಮೇಳನ ಹಾಗೂ ಸಕಲೇಶಪುರ, ಬೀದರ್ ಹಾಗೂ ಬಸವನ ಬಾಗೇವಾಡಿಯಲ್ಲಿ ಮೂರು ಅಖಿಲ ಕರ್ನಾಟಕ ಕವಿಕಾವ್ಯ ಸಮ್ಮೇಳನಗಳನ್ನು ಯಶಸ್ವೀಯಾಗಿ ಮಾಡಿದ್ದೇವೆ. 12 ಜನವರಿ 2025ರಂದು ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ನಾಲ್ಕನೇ ಸಮ್ಮೇಳನ ನಡೆಯಲಿದ್ದು, ಬರುವ ಏಪ್ರಿಲ್ ನಲ್ಲಿ ಮಾಹೆ ಹಾಗೂ ಮುಂಬಯಿಯಲ್ಲಿ ಅಖಿಲ ಭಾರತ ಪ್ರಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ. ನಾವುಗಳಿಲ್ಲಿ ನಿಮಿತ್ತ ಮಾತ್ರ. ನಮ್ಮ ವೇದಿಕೆಯ ಹೋಬಳಿ, ತಾಲ್ಲೂಕು ಹಾಗೂ ಜಿಲ್ಲಾ ಹಂತದ ಸದಸ್ಯರುಗಳು ನಿಸ್ವಾರ್ಥವಾಗಿ ನಾಡುನುಡಿಯ ಕೆಲಸ ಮಾಡುವುದರಿಂದ ನಮ್ಮ ಈ ವೇದಿಕೆ ರಾಜ್ಯ ಹಾಗೂ ಹೊರರಾಜ್ಯಗಳಲ್ಲಿ ಗಟ್ಟಿಯಾಗಿ ಬೆಳೆಯುತ್ತಿದೆ.” ಎಂದರು.
2024ನೇ ಸಾಲಿನ ಹಾಸನ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಿದ ಸಾಹಿತಿ ಹಾಗೂ ಪತ್ರಕರ್ತ ನಾಗರಾಜ್ ಹೆತ್ತೂರು ಮಾತನಾಡಿ “ನಾನೂ ಒಬ್ಬ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಭಾಗವಾಗಿದ್ದು, ಮೊದಲಿನಿಂದಲೂ ಎಲೆಮರೆ ಕಾಯಿಯಂತಹ ಸಾಧಕರನ್ನು ಗುರುತಿಸಿ ಸನ್ಮಾನಿಸಿ, ಗೌರವಿಸುವ ಕಾರ್ಯವನ್ನು ವೇದಿಕೆ ನಿರಂತರವಾಗಿ ಮಾಡುತ್ತಾ ಬರುತ್ತಿದೆ. ಅರ್ಜಿ, ಜಾತಿ, ಧರ್ಮ, ರಾಜಕಾರಣ ಹೀಗೆ ಅನೇಕ ಕಾರಣಗಳಿಂದ ಅರ್ಹರಿಗೆ ಸಲ್ಲುವ ರಾಜ್ಯೋತ್ಸವ ಪ್ರಶಸ್ತಿಗಳಿಂದು ಲಾಬಿ ಮಾಡಿದವರ ಪಾಲಾಗುತ್ತಿರುವ ದುರಂತ ಸಂದರ್ಭದಲ್ಲಿ ನಿಷ್ಪಕ್ಷಪಾತವಾಗಿ ನೈಜ ಸಾಧಕರನ್ನು ಯಾವುದೇ ಅರ್ಜಿಗಳನ್ನು ನಿರೀಕ್ಷಿಸಿದೇ ಗುರುತಿಸಿ ಗೌರವಿಸುವುದು ಸಾಧಕರಿಗೆ ಉತ್ತೇಜನ ನೀಡುವುದರ ಜೊತೆಗೆ ಅವರ ವೈಯಕ್ತಿಕ ಆಸಕ್ತಿಗಳನ್ನು ದ್ವಿಗುಣಗೊಳಿಸುತ್ತವೆ.” ಎಂದರು. 2024ನೇ ಸಾಲಿನ ಹಾಸನ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಚನ್ನರಾಯಪಟ್ಟಣದ ಎ. ಎಂ. ಜಯರಾಂ, ಹೊಳೆನರಸೀಪುರದ ಕೃಷ್ಣ ಎಚ್. ಎನ್, ಹಾಸನದ ರೇಖಾ ಪ್ರಕಾಶ್, ಬೇಲೂರಿನ ಹೆಬ್ಬಾಳು ಹಾಲಪ್ಪ, ಆಲೂರಿನ ಎಂ. ಬಾಲಕೃಷ್ಣ, ಸಕಲೇಶಪುರದ ಮಲ್ನಾಡ್ ಮೆಹಬೂಬ್ ಹಾಗೂ ಅರಕಲಗೂಡಿನ ರಾಜೇಶ್ ಪಿ. ಸಿ. ಇವರುಗಳಿಗೆ ನೀಡಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಜಾವಗಲ್ ಹೋಬಳಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಮಹಮ್ಮದ್ ಫೈರೋಜ್ ಗಾಂಧಿ ಇವರಿಗೆ ರಾಜ್ಯ ಸಂಘಟನಾ ಕಾರ್ಯದರ್ಶಿ ನಾಗರಾಜ್ ದೊಡ್ಡಮನಿ ಪದಗ್ರಹಣ ಮಾಡಿದರು.
ವೇದಿಕೆಯಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ನಾಗರಾಜ್ ದೊಡ್ಡಮನಿ, ಅರಸೀಕೆರೆ ತಾಲ್ಲೂಕು ಘಟಕದ ಅಧ್ಯಕ್ಷರಾದ ಕೆ. ಎಸ್. ಮಂಜುನಾಥ್, ಬಾಣಾವರ ಗುರುಕುಲ ಇಂಟರ್ ನ್ಯಾಷನಲ್ ಶಾಲೆಯ ಉಪಾಧ್ಯಕ್ಷರಾದ ದೇಶಾಣಿ ಆನಂದ್, ಕೇ. ಕಾ. ಸವೇ. ಹೊಳೆನರಸೀಪುರ ತಾಲ್ಲೂಕು ಅಧ್ಯಕ್ಷೆಯಾದ ಕಾವ್ಯಶ್ರೀ ಕೃಷ್ಣ, ಪಾರಂಪರಿಕ ವೈದ್ಯರಾದ ಮುಹಿಬುಲ್ಲಾ ಖಾದ್ರಿ, ಸಮಾಜ ಸೇವಕರಾದ ಅಬ್ದುಲ್ ಸಮದ್ ಸೇರಿದಂತೆ ಹಲವಾರು ಗಣ್ಯರು ಮಾತನಾಡಿದರು.
ಸಭಾ ಕಾರ್ಯಕ್ರಮದ ಬಳಿಕ ನಡೆದ ಜಿಲ್ಲಾ ಮಟ್ಟದ ಕವಿಗೋಷ್ಠಿಯಲ್ಲಿ ಅರಸೀಕೆರೆಯ ಸಾವಿತ್ರಮ್ಮ ಓಂಕಾರ್, , ಅರಸೀಕೆರೆಯ ಕೆ. ಸಿ. ನಟರಾಜು, ದೊಡ್ಡಕೋಡಿಹಳ್ಳಿಯ ಮಾರುತಿ ಕೆ. ಬಿ, ಆಲೂರಿನ ಪಾರ್ವತಿ ಜಿನಗರವಳ್ಳಿ, ಸಕಲೇಶಪುರದ ವಿಶ್ವಾಸ್ ಡಿ. ಗೌಡ, ಹಾಸನದ ರೇಷ್ಮಾಶೆಟ್ಟಿ ಗೊರೂರು, ಹಾಸನದ ನೀಲಾವತಿ ಸಿ. ಎನ್. ಹಾಸನದ ಎಚ್. ಬಿ. ಚೂಡಾಮಣಿ, ಬೇಲೂರಿನ ಪರಮೇಶ್ವರಪ್ಪ ಎಚ್, ಪದ್ಮಾವತಿ ವೆಂಕಟೇಶ್ ಹಾಗೂ ಅಮೃತ್ ಅರಸೀಕೆರೆ ಕಾವ್ಯ ವಾಚನ ಮಾಡಿ ಗಮನ ಸೆಳೆದರು.
ರಾಜ್ಯ ಕೋಶಾಧ್ಯಕ್ಷರಾದ ಎಚ್. ಎಸ್. ಬಸವರಾಜ್, ಅರಸೀಕೆರೆ ತಾಲ್ಲೂಕು ಕಾರ್ಯದರ್ಶಿ ಸೈಫುಲ್ಲ ಡಿ. ಎಂ. ಕಾರ್ಯಕ್ರಮ ನಿರ್ವಹಣೆ ಮಾಡಿದರು.