ಮುಂಬೈ : ಕಲಾಸೇವೆಯಲ್ಲಿರುವಾಗಲೇ ಹವ್ಯಾಸಿ ಭಾಗವತ ಹೃದಯಘಾತಕ್ಕೊಳಗಾಗಿ ಕಲಾಲೀನವಾದ ಘಟನೆ ಮುಂಬಯಿಯಲ್ಲಿ ದಿನಾಂಕ 23 ನವೆಂಬರ್ 2024 ರಂದು ಸಂಭವಿಸಿದೆ. ಅವರಿಗೆ 65 ವರ್ಷ ವಯಸ್ಸಾಗಿತ್ತು.
ಬ್ರಹ್ಮಾವರ ಸಮೀಪದ ಕುಕ್ಕೆಹಳ್ಳಿ ಮುಂಗ್ರಿಬೈಲು ನಿವಾಸಿ ವಿಟ್ಠಲ ಪ್ರಭು ಅವರು ಭಾಗವತಿಕೆ ಮಂಚದಲ್ಲೇ ಹೃದಯಾಘಾತಕ್ಕೆ ಒಳಗಾದ ಹವ್ಯಾಸಿ ಭಾಗವತ. ಮುಂಬಯಿಯಲ್ಲಿ ಉದ್ಯಮ ನಡೆಸುತ್ತಿದ್ದ ಅವರು ಹವ್ಯಾಸಿ ಕಲಾವಿದರಾಗಿ ಯಕ್ಷಗಾನದಲ್ಲಿ ಭಾಗವಹಿಸುತ್ತಿದ್ದರು. ತನ್ನ ತಂಡದ ಮೂಲಕ ಹಲವಾರು ವಿದ್ಯಾರ್ಥಿಗಳಿಗೆ ಯಕ್ಷಗಾನ ತರಬೇತಿಯನ್ನೂ ನೀಡಿದ್ದರು. ಯಕ್ಷಗಾನ ತಾಳಮದ್ದಳೆ, ವೇಷಧಾರಿಕೆ ಮಾತ್ರವಲ್ಲದೆ ಯಕ್ಷಗಾನ ನಿರ್ದೇಶನ, ಮರಾಠಿ ಹಾಗೂ ಕೊಂಕಣಿ ಭಾಷೆಯಲ್ಲಿ ಯಕ್ಷಗಾನ ಪರಿಚಯಿಸಿದ್ದರು.
ನವೆಂಬರ್ 23ರ ರಾತ್ರಿ ಮುಂಬಯಿಯ ದಹಿಸರ್‌ನ ಕಾಶಿಮಠದಲ್ಲಿ ಇವರದೇ ನಿರ್ದೆಶನದಲ್ಲಿ ‘ಶ್ರೀಕೃಷ್ಣ ಪಾರಿಜಾತ’ ಯಕ್ಷಗಾನದ ಪ್ರದರ್ಶನ ನಡೆಯುತ್ತಿದ್ದಾಗ ಭಾಗವತಿಕೆಯನ್ನು ಮಾಡುತ್ತಿರುವಾಗ ಎದೆನೋವು ಕಾಣಿಸಿಕೊಂಡಿದ್ದು, ತತ್‌ಕ್ಷಣ ಬೇರೊಬ್ಬರು ಭಾಗವತರನ್ನು ನೇಮಿಸಿ ಪ್ರಭು ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ಆಸ್ಪತ್ರೆ ಸಾಗಿಸುವಾಗ ದಾರಿ ಮಧ್ಯೆ ಅವರು ಕೊನೆಯುಸಿರೆಳೆದರು.

