ತೆಕ್ಕಟ್ಟೆ: ಯಶಸ್ವೀ ಕಲಾವೃಂದ ಕೊಮೆ ತೆಕ್ಕಟ್ಟೆಯ ಬೆಳ್ಳಿ ಹಬ್ಬದ ಸಂಭ್ರಮದ ನಿಮಿತ್ತ ಬೆಂಗಳೂರಿನ ಆಯ್ದ ಉದ್ಯಮ ಹಾಗೂ ಮನೆಗಳಲ್ಲಿ ಆಯೋಜಿಸಿದ ಹೂವಿನಕೋಲು ಅಭಿಯಾನದ ಉದ್ಘಾಟನಾ ಸಮಾರಂಭವು ದಿನಾಂಕ 22 ಜನವರಿ 2025ರಂದು ಬೆಂಗಳೂರಿನ ಕತ್ರಿಗುಪ್ಪೆಯ ‘ತಾಜಾ ತಿಂಡಿ’ಯಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ‘ತಾಜಾ ತಿಂಡಿ’ ಇದರ ಬ್ರಾಂಡ್ ಸರದಾರ ಗೋಪಾಡಿ ಶ್ರೀನಿವಾಸ ರಾವ್ ಮಾತನಾಡಿ “ಕರಾವಳಿಯ ಸಾಂಪ್ರದಾಯಿಕ ಕಲೆ ಹೂವಿನಕೋಲನ್ನು ಬೆಂಗಳೂರಲ್ಲಿ ಬಿತ್ತಿರಿಸುವುದು ಸುಲಭದ ಮಾತಲ್ಲ. 25 ವರ್ಷಗಳಿಂದ ನಿರಂತರವಾಗಿ ಚಟುವಟಿಕೆಯಿಂದ ಮನೆಮಾತಾಗಿ ಇದೀಗ ರಾಜಧಾನಿಯಲ್ಲಿ ಕರಾವಳಿಯ ಸೊಗಡನ್ನು ಮೆರೆಸುತ್ತಿರುವುದು ಬೆಂಗಳೂರಿನ ಉದ್ಯಮಿಗಳಿಗೆ ಅತ್ಯಂತ ಸಂತಸ ತಂದಿದೆ. ಕಲೆಯನ್ನು ಉಸಿರಾಗಿಸಿಕೊಂಡ ಸಂಸ್ಥೆಯ ಸಾಧನೆ ನಿಜಕ್ಕೂ ಶ್ಲಾಘನೀಯ” ಎಂದರು.
ಪ್ರಸಿದ್ಧ ಉದ್ಯಮಿ ನೇರಂಬಳ್ಳಿ ರಾಘವೇಂದ್ರ ರಾವ್ ಮಾತನಾಡಿ ಜನನಿಬಿಡದಿಂದೊಡಗೂಡಿದ ಬೆಂಗಳೂರಿನಲ್ಲಿ ಮನೆ ಮನೆಗಳಿಗೆ ಹೋಗಿ ಮಾತೃ ಸ್ಥಳವಾದ ಕರಾವಳಿಯ ಸೊಗಡಿನ ಕಾರ್ಯಕ್ರಮ ನೀಡುವುದೆಂದರೆ ದುಸ್ಸಾಹಸವೇ ಸರಿ. ಇಂತಹ ಸಂಸ್ಥೆಗಳಿದ್ದರೆ ಸಮಾಜದ ಏಳ್ಗೆ ಖಂಡಿತಾ ಸಾಧ್ಯ” ಎಂದು ಅಭಿಪ್ರಾಯ ಪಟ್ಟರು.
ರಾಮ ಲಕ್ಷ್ಮಣ ಕ್ಯಾಟರರ್ಸ್ ಇದರ ಮಾಲಕರಾದ ಲಕ್ಷ್ಮಣ್, ಮಂಜುನಾಥ ಹೆಬ್ಬಾರ್, ಚಂದ್ರಶೇಖರ ಹತ್ವಾರ್, ರಾಘವೇಂದ್ರ ಹತ್ವಾರ್, ಹೀಗೆ ಅನೇಕ ಗಣ್ಯರ ಮನೆ ಹಾಗೂ ಸಂಸ್ಥೆಗಳಲ್ಲಿ ಕಾರ್ಯಕ್ರಮ ನಡೆಯಿತು. ತಂಡದಲ್ಲಿ ಗಣಪತಿ ಭಟ್ ಹಾಗೂ ಕಾರ್ಯದರ್ಶಿ ವೆಂಕಟೇಶ ವೈದ್ಯ ಉಪಸ್ಥಿತರಿದ್ದರು.