ಬೆಂಗಳೂರು: ಜುಲೈ 17 ಸಂಚಾರಿ ವಿಜಯ್ ಅವರು ಹುಟ್ಟಿದ ದಿನದ ಸವಿನೆನಪಿಗೆ ಸಂಚಾರಿ ಥಿಯೇಟರ್ ಪ್ರಸ್ತುತ ಪಡಿಸುವ ‘ಹುತ್ತವ ಬಡಿದರೆ’ ನಾಟಕದ ಪ್ರದರ್ಶನವು ದಿನಾಂಕ 16-07-2023 ರಂದು ಬೆಂಗಳೂರಿನ ಎಂಪ್ಟಿ ಸ್ಪೇಸ್ ನಲ್ಲಿ ಪ್ರದರ್ಶನ ಗೊಳ್ಳಲಿದೆ.
ವಾರಾಂತ್ಯದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ವಾರದ ಐದೂ ದಿನ ಪೂರ್ತಿ ಕೆಲಸ ಮಾಡಿ ವಾರಾಂತ್ಯದಲ್ಲಿ ಬಿಡುವಾಗುವ ಯುವ ರಂಗಾಸಕ್ತರಿಗಾಗಿ ಹಮ್ಮಿಕೊಂಡಿರುವಂತಹ ಅಭಿನಯ ಕಾರ್ಯಾಗಾರ ‘ಆದಿರಂಗ’. ಸಂಪೂರ್ಣವಾಗಿ ರಂಗಭೂಮಿಗೆ ಹೊಸಬರಾಗಿರುವವರಿಗೆ ರಂಗಭೂಮಿಯ ಪರಿಚಯ ಮಾಡಿಕೊಡುವ ಒಂದು ಅವಕಾಶ ಈ ಕಾರ್ಯಾಗಾರದಲ್ಲಿ ಇರುತ್ತದೆ. ಸುಮಾರು ಐದು ತಿಂಗಳ ಕಾಲ ನಡೆಯುವ ಈ ಶಿಬಿರದ ವಾರಾಂತ್ಯದಲ್ಲಿ ಇವರು ರಂಗಚಟುವಟಿಕೆಗಳಲ್ಲಿ ಭಾಗವಹಿಸುತ್ತಾ, ಅಭಿನಯಕ್ಕೆ ಸಂಬಂಧಿಸಿದ ವಿಷಯಗಳನ್ನು ಅರ್ಥಮಾಡಿಕೊಳ್ಳುತ್ತಾ, ಅಭ್ಯಾಸಗಳಲ್ಲಿ ತೊಡಗಿಕೊಂಡು ನಾಟಕ ಪ್ರದರ್ಶನದ ಮೂಲಕ ಅನುಭವವನ್ನು ಪಡೆದುಕೊಳ್ಳುತ್ತಾರೆ. ಈ ಕಾರಣಕ್ಕಾಗಿಯೇ ಇವರಿಗೆ ಈ ವರ್ಷ ‘ಹುತ್ತವ ಬಡಿದರೆ’ ನಾಟಕವನ್ನು ಅಭ್ಯಾಸಕ್ಕೆ ಆರಿಸಿಕೊಳ್ಳಲಾಗಿದೆ.
ಕೆ.ವಿ.ನಾರಾಯಣರವರು ರಚಿಸಿರುವ ಈ ನಾಟಕವನ್ನು ಮಂಗಳಾ.ಎನ್ ನಿರ್ದೇಶಿಸಿದ್ದು, ಸಿ.ವೀರಣ್ಣ ನಾಟಕಕ್ಕೆ ಹಾಡುಗಳನ್ನು ರಚಿಸಿದ್ದಾರೆ. ಬಿ.ವಿ.ಕಾರಂತ ಸಂಗೀತ ನೀಡಿದ್ದು, ಹರಿಪ್ರಸಾದ್ ಸಂಗೀತದಲ್ಲಿ ಸಹಕರಿಸಿದ್ದಾರೆ ಹಾಗೂ ಸಂಗೀತ ನಿರ್ವಹಣೆಯನ್ನು ಗಜಾನನ ಟಿ.ನಾಯ್ಕ ಮಾಡಿದ್ದಾರೆ. ರಾಮಕೃಷ್ಣ ಕನ್ನರ್ಪಾಡಿ ಮತ್ತು ವಿಜಯ ಕುಮಾರ ಬೆಣಚ ಕಲಾವಿದರಿಗೆ ಪ್ರಸಾಧನ ಮಾಡಲಿದ್ದು, ಪವನಪುತ್ರ ನಾಟಕಕ್ಕೆ ಕುಸ್ತಿ ಸಂಯೋಜಿಸಿದ್ದಾರೆ. ಚುಕ್ಕಿರಮ ನೃತ್ಯ ಸಂಯೋಜಿಸಿರುವ ಈ ನಾಟಕದ ಬೆಳಕಿನ ಸಂಯೋಜನೆ ಅರುಣ್.ಡಿ.ಟಿ ಅವರದ್ದು. ಧನುಷ್.ಎಂ ಮತ್ತು ಮಧು ಇವರು ರಂಗಸಜ್ಜಿಕೆ ನಿರ್ವವಹಿಸಲಿದ್ದು, ಪ್ರಚಾರ ಸಾಮಗ್ರಿ ವಿನ್ಯಾಸ ಕಿರಣ್.ಟಿ.ಸಿ ಅವರದ್ದು.
ಈ ನಾಟಕದಲ್ಲಿ ಕಲಾವಿದರಾಗಿ ರತನ್, ಅಕ್ಷಯ್ ಕುಮಾರ್ ಎನ್.ಪಿ, ಅಭಿಷೇಕ್ ನಾಯ್ಕ, ವೃಷಾಂಕ್ ನೀಲ್, ರಕ್ಷಾ ಪಿ.ರಾಜು, ಕೆ.ಆರ್.ಸುಹಾಸ್ ಗೌಡ, ಚೇತನ್, ಸೂರಜ್ ಎಸ್. ನಾಯ್ಕ, ಸ್ವರೂಪ್ ಸ್ವಾಸನ್, ಯೋಗೇಶ್ ಹೆಚ್.ಆರ್, ನಿಖಿಲ್ ಕೃಷ್ಣಾಜಿ, ಮನೋಜ್ ಎಸ್.ನಾಡಿಗ್ ಹಾಗೂ ಆದ್ಯ ಇವರೊಂದಿಗೆ ಸಂಚಾರಿ ಥಿಯೇಟರ್ ನ ಕಲಾವಿದರಾದ ಸತ್ಯಶ್ರೀ ಕೆ.ಎಸ್, ಚುಕ್ಕಿರಮ, ವಿದ್ಯಾ ಹೆಗಡೆ, ಆಭಾ ಶಿಗ್ಗಾಂವ್, ನೀಹಾರಿಕಾ ಮತ್ತು ಆರ್ಯಕ್ ನಟಿಸಲಿದ್ದಾರೆ.