ಐಮುಡಿಯಂಡ ರಾಣಿ ಮಾಚಯ್ಯ ಇವರು ಮೂಲತಃ ಅರಮೇರಿ ಗ್ರಾಮದ ಕಂಡ್ರತಂಡ ಕುಟುಂಬದ ಮೇದಪ್ಪ ಮತ್ತು ಸೀತಮ್ಮ ದಂಪತಿಯ ಪುತ್ರಿ. ಮೇದಪ್ಪನವರ ಕುಟುಂಬವು ಕಾರಣಾಂತರದಿಂದ ಕೊಡಗಿನ ಸಿದ್ದಾಪುರದ ಬಳಿಯ ಮಾಲ್ದಾರೆಗೆ ವಲಸೆ ಹೋಗಿದ್ದರು. ರಾಣಿಯವರ ಜನನದ ಬಳಿಕ ಕಾಫಿ ತೋಟವನ್ನು ಖರೀದಿಸಿ ತೋಟದ ನಿರ್ವಹಣೆಗೆಂದು ಕಾಕೋಟುಪರಂಬುವಿಗೆ ಮರಳಿದರು. ಆದ ಕಾರಣ ರಾಣಿಯವರು ತಮ್ಮ ಪ್ರಾಥಮಿಕ ಶಾಲಾ ಶಿಕ್ಷಣವನ್ನು ಕಾಕೋಟುಪರಂಬುವಿನಲ್ಲಿ ಪೂರೈಸಿದರು. ತರುವಾಯ ಪ್ರೌಢ ಶಿಕ್ಷಣವನ್ನು ವಿರಾಜಪೇಟೆಯ ಸರ್ಕಾರಿ ಪ್ರೌಢಶಾಲೆಯಲ್ಲಿ ಪಡೆದರು. ಮುಂದೆ ಮಡಿಕೇರಿಯ ಆಗಿನ ಸರ್ಕಾರಿ ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣವನ್ನು ಮುಗಿಸಿದ್ದಾರೆ. ಶಾಲಾ ಶಿಕ್ಷಕಿಯಾಗಿದ್ದ ಇವರ ತಾಯಿಯವರ ಪ್ರೋತ್ಸಾಹದಿಂದ ಎಳವೆಯಲ್ಲಿಯೇ ಪಠ್ಯೇತರ ಚಟುವಟಿಕೆಗಳನ್ನು ಮೈಗೂಡಿಸಿಕೊಂಡಿದ್ದರು. ಶಾಲಾಕಾಲೇಜುಗಳ ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಪ್ರಾರಂಭಿಸಿದ ನೃತ್ಯದ ಕಲಿಕೆಯು ಉಮ್ಮತ್ತಾಟ್ ಮಾತ್ರವಲ್ಲದೇ ಇತರ ನೃತ್ಯಗಳೆಡೆಗೂ ಹರಿದಿತ್ತು. ಆದರೆ ಕೊಡಗಿನ ವಿಶಿಷ್ಟ ಭಾಷೆ, ಪದ್ಧತಿ, ಪರಂಪರೆಯ ಪ್ರತೀಕ ಹಾಗೂ ಕೊಡಗಿನ ಕಾವೇರಿ ಮಾತೆಯ ಚರಿತೆಯನ್ನು ಹಾಡಿ ಹೊಗಳುತ್ತಾ ಕುಣಿಯುವ ಭಕ್ತಿಭರಿತ ಗಾಯನ ಮಿಶ್ರಿತ ಜಾನಪದ ನೃತ್ಯ ಪ್ರಕಾರ ‘ಉಮ್ಮತ್ತಾಟ್’ ಇವರನ್ನು ಹೆಚ್ಚು ಆಕರ್ಷಿಸಿತ್ತು.
1957ರಲ್ಲಿ ತಾನು ಕಲಿತ ಉಮ್ಮತಾಟ್ ಅನ್ನು ಕಾಲೇಜು ಯುವತಿಯರಿಗೆ ಕಲಿಸಲು ಪ್ರಾರಂಭಿಸಿದ್ದಾರೆ. ಆದರೆ 1986ನೆಯ ಇಸವಿಯಲ್ಲಿ ಮೊದಲ ಬಾರಿಗೆ ಗೋವಾ ಉತ್ಸವದಲ್ಲಿ ಉಮ್ಮತ್ತಾಟ್ ಪ್ರದರ್ಶನ ನೀಡಿದರು. ಬಳಿಕ ನವದೆಹಲಿಯಲ್ಲಿ ಉಮ್ಮತ್ತಾಟ್ ನೃತ್ಯ ಪ್ರದರ್ಶನವನ್ನು ನೀಡಲು ತಂಡ ಕಟ್ಟಿಕೊಂಡು ಹೊರಡುವ ವೇಳೆಗಾಗಲೇ ಕೊಡಗು ಜಿಲ್ಲೆಯ ಹಲವು ಭಾಗಗಳಲ್ಲಿ ಉಮ್ಮತ್ತಾಟ್ ನೃತ್ಯ ಕಲಾವಿದೆ ಹಾಗೂ ಸಂಘಟಕಿಯಾಗಿ ಹೆಸರು ಗಳಿಸಿದ್ದರು. ಮುಂದೆ ಕರ್ನಾಟಕ ರಾಜ್ಯದ ಮೈಸೂರು ದಸರಾ ಉತ್ಸವಗಳು, ಬಾದಾಮಿ ಉತ್ಸವ, ಚಿತ್ರದುರ್ಗ ಉತ್ಸವ, ಜನಪದ ಜಾತ್ರೆ, ಕರಾವಳಿ ಉತ್ಸವ, ನೆಹರು ಯುವ ಕೇಂದ್ರದ ಉತ್ಸವಗಳು (2 ವರ್ಷ), ಉತ್ತರ ಕನ್ನಡ ಜಿಲ್ಲೆ, ಯಲ್ಲಾಪುರ, ಧಾರವಾಡ, ಕೋಲಾರ, ಬೆಂಗಳೂರು, ಮೈಸೂರು, ಬೆಳಗಾವಿ, ಹಂಪಿ, ಸಾಗರ, ಮಂಗಳೂರು, ಸುಳ್ಯ, ದಾವಣಗೆರೆ, ಬಳ್ಳಾರಿ ಮುಂತಾದ ಸ್ಥಳಗಳಲ್ಲಿ ನೃತ್ಯ ಪ್ರದರ್ಶನಗಳನ್ನು ನೀಡಿದ್ದರು. ಜೊತೆಗೆ ನವದೆಹಲಿಯಿಂದ ಪ್ರಾರಂಭಿಸಿ ಕಲ್ಕತ್ತಾ, ಉತ್ತರ ಪ್ರದೇಶ, ಹಿಮಾಚಲ ಪ್ರದೇಶ, ಮಿಜೋರಾಂ, ಮುಂಬೈ ಕರ್ನಾಟಕ ಸಂಘ, ಚತ್ತೀಸ್ ಘಡ್, ಒಡಿಸ್ಸಾ, ಪಾಂಡಿಚೇರಿ, ತಮಿಳುನಾಡು, ಕೇರಳ, ಜಮ್ಮು-ಕಾಶ್ಮೀರ, ಅಂಡಮಾನ್-ನಿಕೋಬರ್ ರಾಜ್ಯಗಳ ಹಲವು ನಗರಗಳಲ್ಲಿ ಉಮ್ಮತ್ತಾಟ್, ಕೋಲಾಟ್ ಮತ್ತು ಕನ್ನಡದ ಕಂಪನ್ನು ಪಸರಿಸುವ ಹಚ್ಚೇವು ಕನ್ನಡದ ದೀಪ ಗೀತನೃತ್ಯವನ್ನು ಪ್ರದರ್ಶನ ಮಾಡಿದ್ದಾರೆ. 1994ರಂದು ದೆಹಲಿಯಲ್ಲಿ ನಡೆದಿರುವ ‘ಪೂಲ್‌ವಾಲನ್ ಶೋರ್ ಹೈ’ ಕಾರ್ಯಕ್ರಮದಲ್ಲಿ ಇವರ ತಂಡವು ನೀಡಿದ ಪ್ರದರ್ಶನಕ್ಕೆ ಪ್ರಥಮ ಬಹುಮಾನವು ಭಾಜನವಾಗಿದೆ. 1997ರಲ್ಲಿ ‘ಕಾವೇರಿ ಕಲಾ ವೃಂದ’ ಎಂಬ ತಂಡವನ್ನು ರಚಿಸಿಕೊಂಡರು. ಸುಮಾರು ಐವತ್ತು ವರ್ಷಗಳ ಉಮ್ಮತ್ತಾಟ್ ಕಲಿಸುವಿಕೆಯ ಪಯಣದಲ್ಲಿ ಇವರು ಉಮ್ಮತ್ತಾಟ್ ಕಲಿಸಿದ ವಿದ್ಯಾರ್ಥಿಗಳ ಸಂಖ್ಯೆ ಹತ್ತು ಸಾವಿರದಷ್ಟು ಆಗಿದೆ ಎನ್ನುತ್ತಾರೆ.
“1957ರಲ್ಲಿ ಉಮ್ಮತ್ತಾಟ್ ಕಲಿಯುತ್ತಿದ್ದಾಗ ನೃತ್ಯವು ಅತ್ಯಂತ ನಿಧಾನಗತಿಯಲ್ಲಿ ಇದ್ದು ಭಕ್ತಿ ಪ್ರಧಾನವಾಗಿತ್ತು. ಮುಂದೆ ಕಾಲೇಜು ಕನ್ಯೆಯರಿಗೆ ಕಲಿಸ ತೊಡಗಿದ ನಂತರ ನೃತ್ಯವು ಬಹು ನಿಧಾನ ಗತಿಯಲ್ಲಿದೆ ಎನಿಸತೊಡಗಿತು. ಆದ ಕಾರಣ ಸಂಪ್ರದಾಯಿಕ ಶೈಲಿಗೆ ಯಾವುದೇ ರೀತಿಯ ಧಕ್ಕೆ ಬಾರದಂತೆ ಕುಣಿತ ಮತ್ತು ಹಾಡಿನ ವೇಗವನ್ನು ಹೆಚ್ಚಿಸಿಕೊಳ್ಳುವ ಕಾಯಕಲ್ಪವನ್ನು ಮಾಡಿದೆನು. ಅದರಿಂದ ಯುವತಿಯರು ಹೆಚ್ಚು ಹೆಚ್ಚು ಆಕರ್ಷಿತರಾಗಿ ನಮ್ಮ ಬಳಗಕ್ಕೆ ಸೇರ್ಪಡೆಗೊಂಡರು. ನಮ್ಮ ಕಾಲದಲ್ಲಿ ಮಡಿಕೇರಿಯಿಂದ ಹೊರಗಡೆ ನೃತ್ಯ ಪ್ರದರ್ಶನ ನೀಡುವ ಸಲುವಾಗಿ ತಮ್ಮ ಮಕ್ಕಳನ್ನು ಕಳುಹಿಸಲು ಫೋಷಕರು ಹಿಂದೇಟು ಹಾಕುತ್ತಿದ್ದರು. ಕ್ರಮೇಣ ನಮ್ಮ ತಂಡದ ಪ್ರದರ್ಶನಗಳು ಯಶಸ್ವಿಯಾಗುತ್ತಿದ್ದಂತೆ ಯಾವುದೇ ರೀತಿಯ ಹಿಂಜರಿಕೆ ಇಲ್ಲದೇ ಫೋಷಕರು ಮಕ್ಕಳನ್ನು ಕಳುಹಿಸುತ್ತಿದ್ದರು. ಮುಂದೆ ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಉಮ್ಮತ್ತಾಟ್ ನೃತ್ಯದ ಪ್ರದರ್ಶನಕ್ಕೆ ಆಹ್ವಾನ ಹೆಚ್ಚಾಯಿತು” ಎಂದು ಹೆಮ್ಮೆಯಿಂದ ಹೇಳುತ್ತಾರೆ.
ಕೊಡವ ಸಾಹಿತ್ಯ ಅಕಾಡೆಮಿಯ ಸಂಸ್ಥಾಪಕರಲ್ಲಿ ಒಬ್ಬರಾಗಿ ಎರಡು ಅವಧಿಗೆ ನಿರ್ದೇಶಕರಾಗಿ ದುಡಿದಿದ್ದಾರೆ. ಮೂರನೆಯ ಅವಧಿಯಲ್ಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಕೊಡಗಿನ ನಾನಾ ಜನಾಂಗಗಳ ಜಾನಪದ ನೃತ್ಯಗಳ ಉಳಿವಿಗಾಗಿ ಹಾಗೂ ಸಾಹಿತ್ಯದ ಚಟುವಟಿಕೆಗಳಿಗಾಗಿ ಸಾಕಷ್ಟು ಶ್ರಮ ವಹಿಸಿದ್ದಾರೆ. ಹಿರಿಯ ಕಲಾವಿದರಿಗೆ ಪ್ರೋತ್ಸಾಹ, ಧನಸಹಾಯವನ್ನೂ ನೀಡಿರುತ್ತಾರೆ. ಸಾಮಾಜಿಕ ಶೈಕ್ಷಣಿಕ ಕ್ಷೇತ್ರದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತು, ಕೊಡವ ಸಮಾಜ, ಮಹಿಳಾ ಸಮಾಜ ಅಲ್ಲದೇ ನಾನಾ ಸಂಘ ಸಂಸ್ಥೆಗಳಲ್ಲಿ ಸಾಕಷ್ಟು ಪದಗಳನ್ನು ಅಲಂಕರಿಸಿ ಸೇವೆ ಸಲ್ಲಿಸಿದ್ದಾರೆ. ಆರ್ಥಿಕವಾಗಿ ಹಿಂದುಳಿದ ಹೆಣ್ಣಮಕ್ಕಳ ವಿದ್ಯಾಭ್ಯಾಸಕ್ಕೆ ತಮ್ಮ ಮನೆಯಲ್ಲಿಯೇ ಆಶ್ರಯ ನೀಡಿ ಸಹಾಯ ಹಸ್ತ ಚಾಚಿರುತ್ತಾರೆ. 2017ರಲ್ಲಿ ಕನ್ನಡ ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ಇವರ ಕುರಿತು ಸಾಕ್ಷ್ಯಚಿತ್ರದ ವಿಡಿಯೋ ಸಿ.ಡಿ.ಯನ್ನು ಹೊರತರಲಾಗಿದೆ.

ಇವರ ಹೆಸರಷ್ಟೇ ರಾಣಿ ಎಂಬುದಲ್ಲ ಇವರಿಗೆ ‘ಉಮ್ಮತ್ತಾಟ್ ರಾಣಿ’ ಎಂಬ ಬಿರುದು ಕೂಡ ದೊರೆತಿದೆ. 2005ರಲ್ಲಿ ‘ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ’ ಹಾಗೂ 2006-07ರಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಸುವರ್ಣ ಕರ್ನಾಟಕದ ಅಂಗವಾಗಿ ಪ್ರಶಸ್ತಿಗಳೊಂದಿಗೆ ಗೌರವವು ದೊರೆತಿದೆ. ಸಾಕಷ್ಟು ಸರಕಾರಿ ಮತ್ತು ಖಾಸಗಿ ಸಂಘ ಸಂಸ್ಥೆಗಳು ಇವರನ್ನು ಸನ್ಮಾನಿಸಿ ಗೌರವಿಸಿವೆ. 05 ಏಪ್ರಿಲ್ 2023ರಂದು ಇವರ 80ನೆಯ ವಯಸ್ಸಿನಲ್ಲಿ ಭಾರತದ ಪ್ರಮುಖ ಪ್ರಶಸ್ಥಿಗಳಲ್ಲಿ ನಾಲ್ಕನೆಯ ಸ್ಥಾನಮಾನದ ‘ಪದ್ಮಶ್ರೀ ಪ್ರಶಸ್ತಿ’ಯನ್ನು ಇವರಿಗೆ ನವದೆಹಲಿಯಲ್ಲಿ ಪ್ರದಾನ ಮಾಡಲಾಯಿತು. ಆ ಬಳಿಕ ಇವರಿಗೆ ಕನ್ನಡ ಜಾನಪದ ಪರಿಷತ್ತಿನ ‘ಡಾ. ಎಚ್.ಎಲ್. ನಾಗೇಗೌಡ ಪ್ರಶಸ್ತಿ 2025’ ಅನ್ನು ಪ್ರದಾನ ಮಾಡಲಾಯಿತು. ಜೊತೆಗೆ ರಾಷ್ಟ್ರದ ಹಲವು ರಾಜ್ಯಗಳಲ್ಲಿ ವಿವಿಧ ಪ್ರಶಸ್ತಿಗಳ, ಸನ್ಮಾನಗಳ ಸುರಿಮಳೆಯೇ ಹರಿಯಿತು. ಅದರಲ್ಲಿ ಅಂತರರಾಷ್ಟ್ರೀಯ ಪ್ರಶಸ್ತಿಯಾಗಿ ದುಬೈನ ‘ಧ್ವನಿ ಪ್ರತಿಷ್ಟಾನ’ ಬಳಗದ ಅನಿವಾಸಿ ಕನ್ನಡಿಗರು ಆಹ್ವಾನಿಸಿ ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಿರುವುದು ವಿಶೇಷ ಎನಿಸುತ್ತದೆ.
ವಕೀಲರಾಗಿದ್ದ ಇವರ ಪತಿ ಐಮುಡಿಯಂಡ ಮಾಚಯ್ಯನವರು ಸಾಂಸ್ಕೃತಿಕ ಏಳಿಗೆಗೆ ಸಾಕಷ್ಟು ಪ್ರೋತ್ಸಾಹ ಬೆಂಬಲ ನೀಡುತ್ತಾ ಬಂದಿದ್ದು, ತಮ್ಮ 70ನೆಯ ವಯೋಮಾನದಲ್ಲಿ ನಿಧನ ಹೊಂದಿರುತ್ತಾರೆ. ಈ ದಂಪತಿಯ ವಿವಾಹಿತ ಮಗಳು ಸರಿತಾ ಗೋಣಿಕೊಪ್ಪಲಿನಲ್ಲಿ ಮತ್ತು ವಿವಾಹಿತ ಮಗ ಸತೀಶ್ ಬೆಂಗಳೂರಿನಲ್ಲಿ ತಮ್ಮ ಕುಟುಂಬ ಮಕ್ಕಳೊಡನೆ ವಾಸವಾಗಿದ್ದಾರೆ. ಅತ್ಯಂತ ಸೌಮ್ಯ ಸ್ವಭಾವದ ನಿರ್ಗವಿ, ಸರಳ ಜೀವಿ ರಾಣಿ ಮಾಚಯ್ಯನವರ ಮುಂದಿನ ಬದುಕು ಇನ್ನಷ್ಟು ಏಳ್ಗೆಯನ್ನು ಕಾಣಲಿ ಎಂದು ಹಾರೈಸೋಣ.
ವೈಲೇಶ ಪಿ.ಎಸ್. ಕೊಡಗು
8861405738
