ಮಂಗಳೂರು : ಮಂಗಳೂರಿನ ಮಾಂಡ್ ಸೊಭಾಣ್ ಸಂಸ್ಥೆ ಆಯೋಜಿಸಿದ ದಶದಿನಗಳ ‘ಕಾಜಳ್’ (ಕಣ್ಣ ಕಾಡಿಗೆ) ಮಕ್ಕಳ ರಜಾ ಶಿಬಿರದ ಉದ್ಘಾಟನಾ ಸಮಾರಂಭವು ದಿನಾಂಕ 25 ಏಪ್ರಿಲ್ 2025 ರಂದು ನಡೆಯಿತು.
ಶಿಬಿರವನ್ನು ಓರ್ವ ಶಿಬಿರಾರ್ಥಿಯ ಕಣ್ಣಿಗೆ ಕಾಡಿಗೆ ಹಚ್ಚುವ ಮುಖಾಂತರ ಉದ್ಘಾಟಿಸಿದ ಕುಲಶೇಖರ ಚರ್ಚಿನ ಉಪಾಧ್ಯಕ್ಷೆ ಹಾಗೂ ದೈಹಿಕ ಶಿಕ್ಷಣ ಶಿಕ್ಷಕಿ ಸಿಲ್ವಿಯಾ ರೂತ್ ಕ್ಯಾಸ್ತೆಲಿನೊ ಮಾತನಾಡಿ “ಮಕ್ಕಳ ಪ್ರತಿಭೆಗಳನ್ನು ಬೆಳಕಿಗೆ ತರಲು ಮಾಂಡ್ ಸೊಭಾಣ್ ಸಂಸ್ಥೆ ನಿರಂತರ ಪ್ರಯತ್ನ ಮಾಡುತ್ತಿದೆ. ಅವರ ಪ್ರಯತ್ನಗಳ ಫಲವಾಗಿ ಕೊಂಕಣಿ ಸಂಸ್ಕೃತಿ ಕ್ಷೇತ್ರದಲ್ಲಿ ಹಲವಾರು ಯುವ ಪ್ರತಿಭೆಗಳು ಬೆಳಕಿಗೆ ಬಂದಿವೆ. ನೀವೂ ಶ್ರಮಪಟ್ಟರೆ ಯಶಸ್ಸು ಸಾಧ್ಯ’’ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಮಕ್ಕಳಿಗಾಗಿ ತಯಾರಿಸಿದ ಪ್ರಾಥಮಿಕ ಹಂತದ ಪಠ್ಯ ಪುಸ್ತಕ `ಆಮಿ ಕೊಂಕ್ಣಿ ಶಿಕುಂಯಾ’ ಅನ್ನು ಲೋಕಾರ್ಪಣೆಗೊಳಿಸಿದರು. ಗೌರವ ಅತಿಥಿ ಎರಿಕ್ ಡಿ’ಸೋಜ ಪಠ್ಯ ಪುಸ್ತಕ ಸಮಿತಿ ಸದಸ್ಯರಿಗೆ ಗೌರವ ಪ್ರತಿ ನೀಡಿದರು.
ಶಿಬಿರದಲ್ಲಿ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಹಾಗೂ ಬೆಂಗಳೂರಿನ 61 ಮಕ್ಕಳು ಗಾಯನ, ನೃತ್ಯ ಹಾಗೂ ನಾಟಕದ ತಮ್ಮ ಆಯ್ಕೆಯ ವಿಭಾಗದಲ್ಲಿ ವಿಶೇಷ ತರಬೇತಿ ಪಡೆಯುವರು. ಎಲ್ಲಾ ಮಕ್ಕಳಿಗೆ ಕೊಂಕಣಿ ಭಾಷೆ, ಭಾಷಣ, ಕಾರ್ಯಕ್ರಮ ನಿರೂಪಣೆಯ ತರಬೇತಿಯು ದೊರೆಯಲಿದೆ. 04 ಮೇ 2025ರಂದು ನಡೆಯುವ 281ನೇ ತಿಂಗಳ ವೇದಿಕೆ ಕಾರ್ಯಕ್ರಮದಲ್ಲಿ ಈ ಶಿಬಿರಾರ್ಥಿಗಳು ಪ್ರದರ್ಶನ ನೀಡುವರು.
ವೇದಿಕೆಯಲ್ಲಿ ಮಾಂಡ್ ಸೊಭಾಣ್ ಪದಾಧಿಕಾರಿಗಳಾದ ಎರಿಕ್ ಒಝೇರಿಯೊ, ಲುವಿ ಪಿಂಟೊ ಹಾಗೂ ಕೇರನ್ ಮಾಡ್ತಾ ಉಪಸ್ಥಿತರಿದ್ದರು. ಶಿಬಿರದ ಸಂಪನ್ಮೂಲ ವ್ಯಕ್ತಿಗಳನ್ನು ಪರಿಚಯಿಸಲಾಯಿತು. ಅರುಣ್ ರಾಜ್ ರೊಡ್ರಿಗಸ್ ಕಾರ್ಯಕ್ರಮ ನಿರೂಪಿಸಿದರು.