ಮಂಗಳೂರು: 7ನೇ ವರ್ಷದ ಮಂಗಳೂರು ಸಾಹಿತ್ಯ ಉತ್ಸವದ ಉದ್ಘಾಟನಾ ಕಾರ್ಯಕ್ರಮವನ್ನು ಮಂಗಳೂರಿನ ಟಿ.ಎಂ.ಎ. ಪೈ ಸಭಾಂಗಣದಲ್ಲಿ ದಿನಾಂಕ 11 ಜನವರಿ 2024ರಂದು ವಿಜೃಂಭಣೆಯಿದ ನಡೆಸಲಾಯಿತು.
ಈ ಕಾರ್ಯಕ್ರಮದಲ್ಲಿ ಖ್ಯಾತ ಲೇಖಕ ಎಸ್.ಎಲ್. ಭೈರಪ್ಪ ಮತ್ತು ಮಿಥಿಕ್ ಸೊಸೈಟಿಯ ಗೌರವ ಕಾರ್ಯದರ್ಶಿ ಡಾ. ರವಿ ಮುಖ್ಯ ಅತಿಥಿಗಳಾಗಿ ವೇದಿಕೆಯನ್ನು ಅಲಂಕರಿಸಿದರು. ಭಾರತ್ ಫೌಂಡೇಶನ್ ಟ್ರಸ್ಟ್ ಇದರ ಪ್ರತಿನಿಧಿ ಸುನಿಲ್ ಕುಲ್ಕರ್ಣಿ ಸ್ವಾಗತ ಭಾಷಣ ನೆರವೇರಿಸಿದರು. ದೀಪ ಬೆಳಗುವ ಮೂಲಕ ಉತ್ಸವವನ್ನು ಪ್ರಾರಂಭಿಸಲಾಯಿತು.
ಕಾರ್ಯಕ್ರಮದ ಅಂಗವಾಗಿ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿದ್ದ ದಿವಂಗತ ನಾರ್ಬರ್ಟ್ ಡಿ’ಸೋಜ ಅವರಿಗೆ ನುಡಿನಮನ ಸಲ್ಲಿಸಲಾಯಿತು.
ಎಸ್.ಎಲ್. ಭೈರಪ್ಪ ಅವರು 2007ರಲ್ಲಿ ಮೊದಲ ಬಾರಿಗೆ ಈ ಉತ್ಸವದಲ್ಲಿ ಭಾಗಿಯಾಗಿದ್ದ ನೆನಪಿನ ಕುರಿತಾಗಿ ಮಾತನಾಡುತ್ತಾ “ದಕ್ಷಿಣ ಕನ್ನಡ ಜಿಲ್ಲೆಯು ಎಲ್ಲಾ ಕ್ಷೇತ್ರಗಳಲ್ಲಿ ದೇಶಕ್ಕೆ ಮಾದರಿಯಾಗಿದೆ. ಉತ್ಸವದಲ್ಲಿ ದೇಶದಾದ್ಯಂತದ ಸಾಧಕರನ್ನು ಆಹ್ವಾನಿಸಿ, ವಿವಿಧ ವೇದಿಕೆಗಳ ಮೂಲಕ ಚರ್ಚೆಗಳನ್ನು ಏರ್ಪಡಿಸುತ್ತಿರುವುದು ಪ್ರಶಂಸನೀಯ. ಉತ್ಸವದಲ್ಲಿ ಚರ್ಚಿಸಲ್ಪಟ್ಟ ವಿಷಯಗಳು ಬೇಕಾದವರಿಗೆ ತಲುಪುತ್ತಿವೆಯೆ? ನೀವು ನಿರೀಕ್ಷಿಸಿರುವ ಪರಿಣಾಮ ಸಾಧಿಸುತ್ತಿದೆಯೆ?” ಎಂದು ಪ್ರಶಿಸಿದ ಇವರು. ಈ ಪ್ರಶ್ನೆಗಳಿಗೆ ಸಮರ್ಥ ಉತ್ತರ ನೀಡುವ ಆತ್ಮವಿಶ್ವಾಸ ಅತ್ಯಗತ್ಯ. ಆದರೆ ಮಂಗಳೂರು ಸಾಹಿತ್ಯ ಉತ್ಸವವು ಯಾಂತ್ರಿಕತೆಯೊಳಗೆ ಸಿಲುಕದೆ, ವರ್ಷದಿಂದ ವರ್ಷಕ್ಕೆ ಹೊಸತನವನ್ನು ಉಳಿಸಿಕೊಂಡು ತನ್ನ ಗುರಿಯನ್ನು ಸಾಧಿಸುತ್ತಿರುವುದು ಉತ್ತಮ ಬೆಳವಣಿಗೆ.” ಎಂದರು.ಡಾ. ರವಿ ಸಭಿಕರೊಂದಿಗೆ ತಮ್ಮ ಅನಿಸಿಕೆ ಹಂಚಿಕೊಂಡು ಮಂಗಳೂರು ಸಾಹಿತ್ಯ ಉತ್ಸವವನ್ನು ದೇಶದ ಇತರ ಸಾಹಿತ್ಯ ಉತ್ಸವಗಳಿಗಿಂತ ವಿಭಿನ್ನವಾಗಿ ಮಾಡಿರುವ ವಿಶೇಷತೆಯನ್ನು ಹೇಳಿದರು. ಈ ಉತ್ಸವದಲ್ಲಿ ಚರ್ಚೆಯಾಗುವ ವಿಚಾರಗಳು ಮುಂದಿನ ಪೀಳಿಗೆಯನ್ನು ಪ್ರಭಾವಿತಗೊಳಿಸಲು ಶಕ್ತವಾಗಿರುವಂತಹವು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.