ತೆಕ್ಕಟ್ಟೆ: ಯಶಸ್ವೀ ಕಲಾವೃಂದ ಕೊಮೆ ತೆಕ್ಕಟ್ಟೆ, ರಂಗ ಸಂಪದ ಕೋಟ, ಧಮನಿ ಟ್ರಸ್ಟ್ ಇದರ ಸಂಯುಕ್ತ ಆಶ್ರಯದಲ್ಲಿ ‘ಸಿನ್ಸ್ 1999 ಶ್ವೇತಯಾನ-89’ ಕಾರ್ಯಕ್ರಮದಡಿಯಲ್ಲಿ “ನಾಟಕಾಷ್ಟಕ” ಇದರ ಉದ್ಘಾಟನಾ ಸಮಾರಂಭವು ದಿನಾಂಕ 26 ಡಿಸೆಂಬರ್ 2024ರಂದು ತೆಕ್ಕಟ್ಟೆಯ ಹಯಗ್ರೀವದಲ್ಲಿ ನಡೆಯಿತು.
ಸಂಸ್ಥೆಯ ಅಧ್ಯಕ್ಷ ಮಲ್ಯಾಡಿ ಸೀತಾರಾಮ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಗೀತಾನಂದ ಫೌಂಡೇಶನ್ ಇದರ ಪ್ರವರ್ತಕರಾದ ಆನಂದ ಸಿ. ಕುಂದರ್ ಮಾತನಾಡಿ “ಸಮಾಜದ ಕುಂದು ಕೊರತೆಗಳನ್ನು ಜನರಿಗೆ ಮನ ಮುಟ್ಟುವಂತೆ ರಂಗರೂಪಕ್ಕಿಳಿಸಿ ಅಭಿನಯಿಸುವ ಕಲೆಯೇ ರಂಗಭೂಮಿ ನಾಟಕ. ಹಲವಾರು ಕಲಾ ಪ್ರಕಾರಗಳನ್ನು ಮೈಗೂಡಿಸಿಕೊಂಡು ಯಶಸ್ವೀ ಕಲಾವೃಂದದ ವೇದಿಕೆಯಲ್ಲಿ ಅನಾವರಣಗೊಳಿಸುತ್ತಿರುವುದು ಈ ಭಾಗದ ಜನಕ್ಕೆ ಬಹಳ ಉಪಯುಕ್ತವಾಗಿದೆ. ಕಲಾಸಕ್ತ ಮನಸ್ಸುಗಳಿಗೆ ಹತ್ತಿರವಾಗಿ ಬೆಳಗುತ್ತಿರುವ ಸಂಸ್ಥೆ ನೂರು ವರ್ಷ ಬದುಕಿ ಬಾಳಲಿ.” ಎಂದು ಹಾರೈಸಿದರು.
ಇದೇ ಸಂದರ್ಭದಲ್ಲಿ ಇತ್ತೀಚೆಗೆ ನಿಧನರಾದ ವೀರಯೋಧ ಅನೂಪ್ ಪೂಜಾರಿ ಇವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಗಣಪತಿ ಟಿ. ಶ್ರೀಯಾನ್ “ಕರಾವಳಿಯ ಉದ್ದಗಲಕ್ಕೆ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ನೆರೆದು ಪುಷ್ಪನಮನ ಸಲ್ಲಿಸಿ, ಅಶ್ರು ತರ್ಪಣ ನೀಡುವ ಮುಖೇನ ತಮ್ಮ ಮನೆಯ ಮಗನಂತೆ ಸಾರ್ವಜನಿಕರು ಭಾಗವಹಿಸಿರುವುದು ಮರೆಯಲಾರದ ಸಂಗತಿ. ವೀರಯೋಧ ಅನೂಪ್ ಪೂಜಾರಿಯ ಸಾವು ಕರಾವಳಿಗೆ ಕರಾಳದಿನ.” ಎಂದರು.
“ಸಮಾಜದ ಸಮಸ್ಯೆಯನ್ನು ನಾಟಕದ ಮೂಲಕ ಮನ ಮುಟ್ಟುವಂತೆ ಅಭಿನಯಿಸಿ ಗೆಲ್ಲುವುದು ನಾಟಕದ ಉದ್ದೇಶ.” ಎಂದು ಡಾ. ಆದರ್ಶ ಹೆಬ್ಬಾರ್, “ರಂಗದ ಎಲ್ಲಾ ಆಯಾಮಗಳನ್ನು ರಂಗದ ಮೂಲಕ ಸಮಾಜಕ್ಕೆ ನೀಡುವ ಸಂಸ್ಥೆ ಯಶಸ್ವೀ ಕಲಾವೃಂದ.” ಎಂದು ಪತ್ರಕರ್ತ ಯು. ಎಸ್. ಶಣೈ, “ಜೀವನದ ಸತ್ಯಾಸತ್ಯತೆಗಳನ್ನು ರಂಗದಲ್ಲಿ ಅನಾವರಣ ಮಾಡುವ ಕಲೆ ನಾಟಕ.” ಎಂದು ಜನಾರ್ದನ ಹಂದೆ ಅಭಿಪ್ರಾಯಪಟ್ಟರು.
ಉಪನ್ಯಾಸಕ ಸುಜಯೀಂದ್ರ ಹಂದೆ ಉಪಸ್ಥಿತರಿದ್ದ ಈ ಕಾರ್ಯಕ್ರಮವನ್ನು ಹೆರಿಯ ಮಾಸ್ಟರ್ ನಿರೂಪಿಸಿದರು. ಬಳಿಕ ನೀನಾಸಂ ಹೆಗ್ಗೋಡು ತಂಡದವರಿಂದ ಭವಭೂತಿ ರಚನೆಯ ಹಾಗೂ ಅಕ್ಷರ ಕೆ. ವಿ. ನಿರ್ದೇಶನದ ನಾಟಕ ‘ಮಾಲತಿ ಮಾಧವ’ ಪ್ರದರ್ಶನಗೊಂಡಿತು.