ಕಡಬ: ಕೊಯಿಲ ಹಾಗೂ ಹಿರೆಬಂಡಾಡಿ ಗ್ರಾಮಗಳ ಗಡಿ ಭಾಗವಾದ ಕೆಮ್ಮಾರದಲ್ಲಿ ನೂತನವಾಗಿ ಪ್ರಾರಂಭವಾದ ಮನೆ ಮನೆ ತಿರುಗಾಟದ ಶ್ರೀ ಚೌಡೇಶ್ವರಿ ಕೃಪಾಪೋಷಿತ ಯಕ್ಷಗಾನ ಚಿಕ್ಕ ಮೇಳದ ಉದ್ಘಾಟನಾ ಸಮಾರಂಭವು ದಿನಾಂಕ 14 ಅಕ್ಟೋಬರ್ 2024ರಂದು ಕೆಮ್ಮಾರ ಶ್ರೀ ಚೌಡೇಶ್ವರಿ ದೇವಸ್ಥಾನದ ವಠಾರದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ದೇವಸ್ಥಾನದ ಅಭಿವೃದ್ಧಿಯ ದೃಷ್ಟಿಯಿಂದ ಪ್ರಾರಂಭಿಸಿದ ನಿಧಿ ಸಂಚಯನವನ್ನು ಉದ್ಘಾಟಿಸಿದ ಪುತ್ತೂರಿನ ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ “ನಮ್ಮ ಜಿಲ್ಲೆಯ ಹೆಮ್ಮೆಯ ಕಲೆ ಯಕ್ಷಗಾನ ನಮ್ಮ ಧರ್ಮ ಹಾಗೂ ಸಂಸ್ಕೃತಿಯ ಉಳಿವಿಗೆ ಪೂರಕವಾಗಿದೆ. ಅನೇಕ ಪೌರಾಣಿಕ ವಿಚಾರಗಳು ಯಕ್ಷಗಾನ ಪ್ರದರ್ಶನಗಳಿಂದ ತಿಳಿಯುತ್ತದೆ. ಮುಂದಿನ ಪೀಳಿಗೆಗೆ ಧರ್ಮದ ಅರಿವು ಮೂಡಿಸುವ ಕಾರ್ಯ ಚಿಕ್ಕ ಮೇಳಗಳಿಂದ ನಡೆಯಬೇಕು.” ಎಂದರು. ಈ ಚಿಕ್ಕ ಮೇಳವನ್ನು ಉದ್ಘಾಟಿಸಿದ ತೆಂಕುತಿಟ್ಟಿನ ಖ್ಯಾತ ಭಾಗವತ ಆನೆಕಲ್ ಗಣಪತಿ ಭಟ್ ಶುಭಹಾರೈಸಿದರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯಕ್ಷಗಾನ ಕಲಾವಿದ ಅಶೋಕ್ ಶೆಟ್ಟಿ ಸರಪಾಡಿ ಅತಿಥಿ ಸ್ಥಾನದಿಂದ ಶುಭ ಹಾರೈಸಿದರು.
ಗೋಕುಲನಗರ ‘ಯಕ್ಷನಂದನ’ ಕಲಾ ಸಂಘದ ಗೌರವಾಧ್ಯಕ್ಷರಾದ ಮುರಳೀ ಕೃಷ್ಣ ಭಟ್ ಬಡಿಲ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಚಿಕ್ಕ ಮೇಳದ ಮಾರ್ಗದರ್ಶಕ ಜಗನ್ನಾಥ ಕೆ., ಸಂಚಾಲಕ ಗಿರೀಶ್ ಆಚಾರ್ಯ, ಆತೂರು ಶ್ರೀಸದಾಶಿವ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ಯದುಶ್ರೀ ಆನೆಗುಂಡಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ದೇವಾಲಯದ ಜೀರ್ಣೋದ್ಧಾರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಕಾರ್ಯಕರ್ತರನ್ನು ಗೌರವಿಸಲಾಯಿತು.
ಅನುವಂಶೀಯ ಮೊಕ್ತಸರ ಸಂಜೀವ ನೇಕಾರ ಬಡ್ಡಮೆ ಪ್ರಸ್ತಾವನೆಗೈದು, ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಗೌರವ ಪ್ರತಿನಿಧಿ ಮೋಹನ್‌ದಾಸ್ ಶೆಟ್ಟಿ ಬಡಿಲ ಸ್ವಾಗತಿಸಿ, ಪ್ರಕಾಶ್ ಕೆ. ಆರ್. ವಂದಿಸಿದರು. ಬಳಿಕ ಚಿಕ್ಕ ಮೇಳದ ಕಲಾವಿದರಿಂದ ಕಿರು ಪ್ರಸಂಗವನ್ನು ಪ್ರದರ್ಶಿಸಲಾಯಿತು.