ಕಾರ್ಕಳ: ಕನ್ನಡ ಸಾಹಿತ್ಯ ಪರಿಷತ್ತು ಕಾರ್ಕಳ ತಾಲೂಕು ಘಟಕದ ವತಿಯಿಂದ ವಿದ್ಯಾರ್ಥಿಗಳೆಡೆಗೆ ಪುಸ್ತಕದ ನಡಿಗೆ ಎಂಬ ವರ್ಷದ ಸರಣಿ ಕಾರ್ಯಕ್ರಮ ಕನ್ನಡ ಡಿಂಡಿಮ’ದ ಉದ್ಘಾಟನಾ ಸಮಾರಂಭವು ದಿನಾಂಕ 14 ಜುಲೈ 2025ರಂದು ಮುಂಡ್ಕೂರು ವಿದ್ಯಾವರ್ಧಕ ಪದವಿಪೂರ್ವ ಕಾಲೇಜಿನಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ವಿದ್ಯಾವರ್ಧಕ ಪದವಿ ಪೂರ್ವ ಕಾಲೇಜಿನ ಸಂಚಾಲಕ ಡಾ. ಪಿ. ಬಾಲಕೃಷ್ಣ ಅಳ್ವ ಮಾತನಾಡಿ “ಪುಸ್ತಕಗಳನ್ನು ಓದುವ ಹವ್ಯಾಸವೇ ಜ್ಞಾನದ ತಳಹದಿ ಶ್ರದ್ಧೆಯ ಅಧ್ಯಯನವೇ ಅರಿವಿಗೆ ದಾರಿ. ವಿದ್ಯಾರ್ಥಿಗಳು ಉತ್ತಮ ಪುಸ್ತಕಗಳನ್ನು ಓದುವುದರಲ್ಲಿ ನಿರತರಾಗಬೇಕು” ಎಂದರು.
ಸಮಾರಂಭದಲ್ಲಿ ದಿಕ್ಕೂಚಿ ಭಾಷಣ ಮಾಡಿದ ಕಾರ್ಕಳ ತಾಲೂಕು ಇಪ್ಪತ್ತನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದ ಹಿರಿಯ ಜಾನಪದ ವಿದ್ವಾಂಸ ಕೊಳಕೆ ಇರ್ವತ್ತೂರು ಗುಣಪಾಲ ಕಡಂಬ ಮಾತನಾಡಿ “ಉತ್ತಮ ಸಾಹಿತ್ಯದ ಪುಸ್ತಕಗಳನ್ನು ಓದುವುದರಿಂದ ಹಿತ ಮತ್ತು ಅಹಿತದ ಬಗ್ಗೆ ಅರಿವು ಮೂಡಿ ಬದುಕಿನ ಸನ್ಮಾರ್ಗದ ನಡೆಗೆ ನೆರವಾಗುತ್ತದೆ. ಓದುವ ಹವ್ಯಾಸವನ್ನು ರೂಢಿಸಿಕೊಂಡಾಗ ಭವಿಷ್ಯ ಉಜ್ವಲವಾಗುತ್ತದೆ. ಅದ್ದರಿಂದ ವಿದ್ಯಾರ್ಥಿಗಳು ನಿರಂತರ ಮೌಲ್ಯಯುತ ಪುಸ್ತಕಗಳನ್ನು ಓದುವ ಜ್ಞಾನದಾಹಿಗಳಾಗಬೇಕು” ಎಂದು ಅಭಿಪ್ರಾಯಪಟ್ಟರು.
ಕರ್ನಾಟಕ ರಾಜ್ಯ ಫೆಡರೇಷನ್ ಆಫ್ ಕ್ವಾರಿ ಮತ್ತು ಸ್ಟೋನ್ ಕ್ರಷರ್ ಓನರ್ಸ ಅಸೋಸಿಯೇಷನ್ ಇದರ ಅಧ್ಯಕ್ಷರಾದ ಡಾ. ರವೀಂದ್ರ ಶೆಟ್ಟಿ ಬಜಗೋಳಿ ಮಾತನಾಡಿ “ಗ್ರಾಮೀಣ ಪ್ರದೇಶದ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಲ್ಲಿರುವ ಗಟ್ಟಿತನ ಬದುಕಿನಲ್ಲಿ ಯಶಸ್ವಿಯಾಗಲು ನೆರವಾಗುತ್ತದೆ. ವಿದ್ಯಾರ್ಥಿಗಳು ಕನ್ನಡದ ಪ್ರೀತಿಯೊಂದಿಗೆ ಪುಸ್ತಕದ ಪ್ರೀತಿಯನ್ನು ಬೆಳೆಸಿಕೊಳ್ಳಬೇಕು” ಎಂದರು.
ಕನ್ನಡ ಮಾಧ್ಯಮದಲ್ಲಿ ಓದಿ 625ಕ್ಕೆ 625 ಅಂಕಗಳಿಸಿದ್ದ ಶ್ರೇಯಾ ರವೀಂದ್ರ ಶೆಟ್ಟಿಯವರು ಮಾತನಾಡಿ “ಕನ್ನಡ ಮಾಧ್ಯಮದ ಕಲಿಕೆ ಜೀವನದ ಎಲ್ಲಾ ರೀತಿಯ ಸವಾಲುಗಳನ್ನು ಯಶಸ್ವಿಯಾಗಿ ಎದುರಿಸುವ ಶಕ್ತಿ ನೀಡುತ್ತದೆ” ಎಂದರು.
ಕಾರ್ಯಕ್ರಮದ ಪ್ರಯುಕ್ತ ನಡೆಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಭಾಷಣ ಸ್ಪರ್ಧೆ ವಿಜೇತೆ ಶಾನ್ವಿ ‘ನಾನು ಮೆಚ್ಚಿದ ಪುಸ್ತಕ’ ವಿಷಯದ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಸಹಶಿಕ್ಷಕಿ ವಿದ್ಯಾ ಶೆಡಿಗೇರಿ ವಿಜೇತರ ಪಟ್ಟಿ ವಾಚಿಸಿದರು.
ಕನ್ನಡ ಸಾಹಿತ್ಯ ಪರಿಷತ್ತು ಕಾರ್ಕಳ ತಾಲೂಕು ಘಟಕದ ಅಧ್ಯಕ್ಷ ಕೊಂಡಲ್ಲಿ ಪ್ರಭಾಕರ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಮಾಲ್ಲೇಶ ಇಂಗಳಕಿ, ಹಿರಿಯ ಶಿಕ್ಷಕಿ ಸವಿತಾ, ಕಡಂದಲೆ ಸುಬ್ರಹ್ಮಣ್ಯ ಸ್ವಾಮಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ದಿನಕರ ಕುಂಬಾಶಿ, ಹಳ ವಿದ್ಯಾರ್ಥಿ ಸನ್ನಿಧಿ, ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಸುಧಾಕರ ಪೊಸ್ರಾಲ್ ಉಪಸ್ಥಿತರಿದ್ದರು. ಪ್ರಭಾಕರ ಶೆಟ್ಟಿ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿ, ಕ. ಸಾ. ಪ. ಇದರ ಜಿಲ್ಲಾ ಪ್ರತಿನಿಧಿ ಪ್ರಕಾಶ್ ನಾಯ್ಕ ಕಾರ್ಯಕ್ರಮ ನಿರೂಪಿಸಿ, ಗೌರವ ಕೋಶಾಧಿಕಾರಿ ಅರುಣ್ ರಾವ್ ವಂದಿಸಿದರು.
Subscribe to Updates
Get the latest creative news from FooBar about art, design and business.
ಕಾರ್ಕಳದಲ್ಲಿ ಉದ್ಘಾಟನೆಗೊಂಡ ‘ವಿದ್ಯಾರ್ಥಿಗಳೆಡೆಗೆ ಪುಸ್ತಕದ ನಡಿಗೆ’ ಕಾರ್ಯಕ್ರಮ
No Comments2 Mins Read
Previous Articleಪತ್ರಕರ್ತರ ಸಂಘದಿಂದ ‘ಕಥೆ ಹೇಳುವ ಸ್ಪರ್ಧೆ’ | ಕೊನೆಯ ದಿನಾಂಕ ಜುಲೈ 25