ಕೊಣಾಜೆ: ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಮತ್ತು ಶ್ರೀ ವಿಷ್ಣುಮೂರ್ತಿ ಜನಾರ್ದನ ಯಕ್ಷಗಾನ ಅಧ್ಯಯನ ಟ್ರಸ್ಟ್ ಮಂಜನಾಡಿ ಇವರ ಆಶಯದಲ್ಲಿ ಯಕ್ಷಗಾನ ನಾಟ್ಯ ತರಬೇತಿಯ ಉದ್ಘಾಟನಾ ಸಮಾರಂಭವು ದಿನಾಂಕ 16 ಸೆಪ್ಟೆಂಬರ್ 2024 ರಂದು ಮಂಜನಾಡಿಯ ಶ್ರೀ ವಿಷ್ಣುಮೂರ್ತಿ ಜನಾರ್ದನ ದೇವಸ್ಥಾನದ ಆವರಣದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶ್ರೀ ರಾಮಕೃಷ್ಣ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ತ್ಯಾಗಂ ಹರೇಕಳ ಮಾತನಾಡಿ “ಯಕ್ಷಗಾನವು ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಿದೆ. ಇದರಿಂದ ದೈಹಿಕ, ಮಾನಸಿಕ, ಬೌದ್ಧಿಕ ಮತ್ತು ಆಧ್ಯಾತ್ಮಿಕ ಬೆಳವಣಿಗೆಯಾಗುವುದು ಮಾತ್ರವಲ್ಲದೆ, ಮನರಂಜನೆಯೊಂದಿಗೆ ಸಂಸ್ಕಾರವನ್ನು ನೀಡುವ ಶ್ರೀಮಂತ ಕಲೆಯಾಗಿದೆ. ಈ ಕಲೆಯನ್ನು ವಿದ್ಯಾರ್ಥಿಗಳು ಎಳವೆಯಲ್ಲಿಯೇ ಮೈಗೂಡಿಸಿಕೊಂಡಾಗ ಉತ್ತಮ ವ್ಯಕ್ತಿತ್ವ ಹೊಂದಲು ಸಾಧ್ಯ.” ಎಂದು ಅಭಿಪ್ರಾಯ ಪಟ್ಟರು.
ನಾಟ್ಯ ತರಗತಿಯನ್ನು ಉದ್ಘಾಟಿಸಿದ ಕ್ಷೇತ್ರದ ಅರ್ಚಕರಾದ ರಾಘವೇಂದ್ರ ರಾವ್ ಮಂಜನಾಡಿ ಮಾತನಾಡಿ “ಕರಾವಳಿಯ ಗಂಡು ಕಲೆಯಾದ ಯಕ್ಷಗಾನದ ನಾಟ್ಯ ತರಬೇತಿಯನ್ನು ಹಮ್ಮಿಕೊಳ್ಳಲು ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಇವರು ಸಹಕರಿಸುತ್ತಿರುವುದು ಶ್ಲಾಘನೀಯ, ಇದನ್ನು ಈ ಪರಿಸರದ ಹೆಚ್ಚಿನ ವಿದ್ಯಾರ್ಥಿಗಳು ಸದುಪಯೋಗ ಪಡೆಸಿಕೊಳ್ಳಬೇಕು.” ಎಂದು ಕರೆಕೊಟ್ಟರು.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸದಸ್ಯರಾಗಿರುವ ಕೃಷ್ಣಪ್ಪ ಕಿನ್ಯಾ, ಗುರುರಾಜ್ ಭಟ್ ಕೈರಂಗಳ, ಸಮಾಜ ಸೇವಕರಾಗಿರುವ ಶ್ರೀಮತಿ ಗುಣವತಿ ಪಿ. ಸುಲಾಯ, ನಾಟ್ಯ ಗುರುಗಳಾದ ಜಗದೀಶ್ ಎಸ್. ಗಟ್ಟಿ ಉಚ್ಚಿಲ ಮುಂತಾದವರು ಉಪಸ್ಥಿತರಿದ್ದರು.
ಪದಾಧಿಕಾರಿಗಳಾದ ವಿಜೇತ್ ಎಂ. ಶೆಟ್ಟಿ ಮಂಜನಾಡಿ ಸ್ವಾಗತಿಸಿ, ಸಾಂಸ್ಕೃತಿಕ ಕಾರ್ಯದರ್ಶಿ ಉದಯಕುಮಾರ್ ಅಂಚನ್ ಮಂಜನಾಡಿ ಪ್ರಸ್ತಾವನೆಯೊಂದಿಗೆ ನಿರೂಪಿಸಿದರು. ಸಮಾರಂಭಕ್ಕೆ ಶ್ರೀ ವಿಷ್ಣುಮೂರ್ತಿ ಜನಾರ್ದನ ಯಕ್ಷಗಾನ ಅಧ್ಯಯನ ಟ್ರಸ್ಟ್ ಇದರ ಪದಾಧಿಕಾರಿಗಳು ಸಹಕರಿಸಿದರು.