ಕಾಸರಗೋಡು : ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನವು ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಇದರ ಸಹಕಾರದೊಂದಿಗೆ ಆಯೋಜಿಸಿದ ಎರಡು ದಿನಗಳ ತೆಂಕುತಿಟ್ಟು ‘ಯಕ್ಷಮಾರ್ಗ ಶಿಬಿರ ಹಾಗೂ ಯಕ್ಷಗಾನ ಪ್ರದರ್ಶನ’ದ ಉದ್ಘಾಟನಾ ಸಮಾರಂಭವು 24 ಆಗಸ್ಟ್ 2024ರ ಶನಿವಾರದಂದು ಸಿರಿಬಾಗಿಲು ಸಾಂಸ್ಕೃತಿಕ ಭವನದಲ್ಲಿ ನಡೆಯಿತು.


ಕಾರ್ಯಕ್ರಮವನ್ನು ಉದ್ಘಾಟಿಸಿದ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಮಾತನಾಡಿ “ಯಕ್ಷಗಾನದಿಂದ ಭಕ್ತಿಯ ಚಿಂತನೆ ಬರುತ್ತದೆ ಮತ್ತು ಅದು ಜನರಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸುತ್ತದೆ.” ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಮಾತನಾಡಿ “ಶತಮಾನಗಳಿಂದ ಆರಾಧನಾ ಕಲೆಯಾಗಿ ಬೆಳೆದು ಬಂದ ಯಕ್ಷಗಾನ ಪ್ರೇಕ್ಷಕರ ಮನ ತಣಿಸುವ ಕಲೆಯಾಗಿದೆ. ಇಂತಹ ಕಲೆಯನ್ನು ಉಳಿಸಿ ಬೆಳೆಸಲು ಯಕ್ಷಗಾನ ಅಕಾಡೆಮಿ ನಿರಂತರವಾಗಿ ಪ್ರಯತ್ನಿಸುತ್ತಲೇ ಬಂದಿದೆ. ಯಕ್ಷಗಾನ ಕಲೆಯನ್ನು ಹೊಸ ತಲೆಮಾರಿಗೆ ಹಸ್ತಾಂತರಿಸುವ ಉದ್ದೇಶವಿರಿಸಿಕೊಂಡು ಅಕಾಡೆಮಿ ಮಕ್ಕಳ ಯಕ್ಷಗಾನಕ್ಕೆ ಹೆಚ್ಚಿನ ಒತ್ತು ನೀಡಿದೆ.” ಎಂದರು.


ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಂಜೇಶ್ವರದ ಶಾಸಕ ಎ. ಕೆ. ಎಂ. ಅಶ್ರಫ್ ಮಾತನಾಡಿ “ಜಗತ್ತಿನಲ್ಲಿ ಸ್ವರ್ಗವಿದೆ ಎಂದಾದರೆ ಅದು ಈ ಕಲೆ, ಭಾಷೆ, ಸಂಸ್ಕೃತಿಗಳ ಬೀಡಾಗಿರುವ ಭಾರತದಲ್ಲಿದೆ.” ಎಂದರು. ಪ್ರತಿಷ್ಠಾನದ ಅಧ್ಯಕ್ಷ ರಾಮಕೃಷ್ಣ ಮಯ್ಯ, ಅಕಾಡೆಮಿ ಸದಸ್ಯ ಜಿ. ಬಿ. ಎಸ್. ಉಳ್ಳಾಲ ಉಪಸ್ಥಿತರಿದ್ದರು.

ರಿಜಿಸ್ಟಾರ್ ನಮ್ರತಾ ಎನ್. ಸ್ವಾಗತಿಸಿ, ಅಕಾಡೆಮಿ ಸದಸ್ಯ ಸತೀಶ ನಿರೂಪಿಸಿ, ಸದಸ್ಯ ಗುರುಪ್ರಸಾದ್ ವಂದಿಸಿದರು. ಬಳಿಕ ತೆಂಕುತಿಟ್ಟು ಯಕ್ಷಗಾನ ಶಾಸ್ತ್ರೀಯ ನಾಟ್ಯಗುರು ವಿಶ್ವೇಶ್ವರ ಭಟ್ ಅವರಿಂದ ಶಾಸ್ತ್ರೀಯ ನಾಟ್ಯ ಪಾತ್ಯಕ್ಷಿಕೆ, ಪ್ರಸ್ತುತಿ, ಪ್ರದರ್ಶನ, ಸಂವಾದ ಹಾಗೂ ತೆಂಕುತಿಟ್ಟು ಯಕ್ಷಗಾನ ನಾಟ್ಯದ ಪ್ರಾಥಮಿಕ ಹಂತದ ಪ್ರಸಾರ ಹಾಗೂ ಪಾತ್ಯಕ್ಷಿಕೆ ಜರಗಿತು.