ಮಂಗಳೂರು: ಯಕ್ಷಾಂಗಣ ಮಂಗಳೂರು, ಯಕ್ಷಗಾನ ಚಿಂತನ ಮಂಥನ ಮತ್ತು ಪ್ರದರ್ಶನ ವೇದಿಕೆ ಹಾಗೂ ಕರ್ನಾಟಕ ಯಕ್ಷ ಭಾರತಿ ಪುತ್ತೂರು ಆಶ್ರಯದಲ್ಲಿ 12ನೇ ವರ್ಷದ ನುಡಿ ಹಬ್ಬ ದ್ವಾದಶ ಸರಣಿಯ ಕನ್ನಡ ರಾಜ್ಯೋತ್ಸವ ಕಲಾ ಸಂಭ್ರಮ ‘ಯಕ್ಷಗಾನ ತಾಳಮದ್ದಳೆ ಸಪ್ತಾಹ -2024’ ಕಾರ್ಯಕ್ರಮವು ದಿನಾಂಕ 11 ನವೆಂಬರ್ 2024ರಂದು ಕದ್ರಿ ಶ್ರೀ ಮಂಜುನಾಥ ದೇವಾಲಯದ ರಾಜಾಂಗಣದಲ್ಲಿ ಉದ್ಘಾಟಣೆಗೊಂಡಿತು.

ಕದ್ರಿ ಶ್ರೀ ಮಂಜುನಾಥ ದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಡಾ. ಎ. ಜೆ. ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಕ. ಸಾ. ಪ. ಮಾಜಿ ರಾಜ್ಯಾಧ್ಯಕ್ಷ ಡಾ. ಹರಿಕೃಷ್ಣ ಪುನರೂರು ಮಾತನಾಡಿ “ಯಕ್ಷಾಂಗಣ ಮಂಗಳೂರು ಶುದ್ಧ ಕನ್ನಡವನ್ನು ಉಳಿಸುವ ಕೆಲಸವನ್ನು 12 ವರ್ಷಗಳಿಂದ ಮಾಡುತ್ತಿದೆ. ಕನ್ನಡ ರಥವೆಂದು ಕನ್ನಡದ ಹೆಸರಲ್ಲಿ ಪ್ರಚಾರ ಪಡೆಯುವವರಿಗೆ ಕನ್ನಡ ಶಾಲೆಗಳನ್ನು ಕಾಪಾಡಲು ಆಗುತ್ತಿಲ್ಲ, ಅಧ್ಯಾಪಕರ ನೇಮಕ ನಡೆಯುತ್ತಿಲ್ಲ ಇಂಥಹ ಪರಿಸ್ಥಿತಿಯಲ್ಲಿ ರಥಯಾತ್ರೆಯ ಔಚಿತ್ಯ ಪ್ರಶ್ನಾರ್ಹ.” ಎಂದರು.

ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಮಾಜಿ ಸಚಿವ ಕೃಷ್ಣ ಜೆ.ಪಾಲೆಮಾರ್ ಮಾತನಾಡಿ “ನಾವಾಡುವ ಭಾಷೆಯ ಶುದ್ಧ ಸ್ವರೂಪವನ್ನು ಯಕ್ಷಗಾನ ರಂಗಸ್ಥಳದಲ್ಲಿ ಮಾತ್ರ ಕಾಣಲು ಸಾಧ್ಯ. ಅದರಲ್ಲೂ ತಾಳಮದ್ದಳೆಯಲ್ಲಿ ಕನ್ನಡ ಭಾಷೆಯ ಸಿರಿವಂತಿಕೆ ಇದೆ. ತಾನು ಅಮೆರಿಕಕ್ಕೆ ಹೋಗಿದ್ದಾಗ ಅಲ್ಲಿಯ ಕನ್ನಡಿಗರು ವಾರಾಂತ್ಯದಲ್ಲಿ ತಮ್ಮ ವಸತಿ ಸಂಕೀರ್ಣ ಮಧ್ಯೆ ದೊಡ್ಡ ಪರದೆಯ ಮೇಲೆ ತಾಳಮದ್ದಳೆಯನ್ನು ಹಾಕಿ ಸಂಭ್ರಮಿಸುವುದನ್ನು ಕಂಡಿದ್ದೇನೆ.” ಎಂದು ಹೇಳಿದರು.

ಸಮಾರಂಭದಲ್ಲಿ ಆಶಯ ಭಾಷಣಗೈದ ಬಹುಶ್ರುತ ವಿದ್ವಾಂಸ ಡಾ. ಎಂ. ಪ್ರಭಾಕರ ಜೋಶಿ “ಕರ್ನಾಟಕ ರಾಜ್ಯೋತ್ಸವದ ಸುವರ್ಣ ವರ್ಷಾಚರಣೆಯ ಸಂಕಲ್ಪ ಸಾಕಾರ ಆಗಬೇಕಿದ್ದರೆ ರಥವೂ ಬೇಡ, ರಾಜಕಾರಣಿಗಳು ಮತ್ತು ರಾಜಕೀಯ ಸೋಂಕಿತ ಸಾಂಸ್ಕೃತಿಕ ಕಾರ್ಯಕರ್ತರು ಕನ್ನಡಕ್ಕಾಗಿ ಕರೆ ಕೊಡುವುದೂ ಬೇಡ. ಬದಲು ಪ್ರಾಥಮಿಕ ಸರಕಾರಿ ಕನ್ನಡ ಶಾಲೆಗಳನ್ನು ಉಳಿಸಿ, ಕನ್ನಡ ಕಲಿಸಿ, ನೆಲದ ಕಲೆ ಯಕ್ಷಗಾನ ಬಯಲಾಟ ಮತ್ತು ತಾಳಮದ್ದಳೆಯನ್ನು ಪೋಷಿಸಿದರೆ ಸಾಕು. ಪರಿಣಾಮವಾಗಿ ಕನ್ನಡ ಸಮೃದ್ಧವಾಗಿ ಅರಳುವುದು ನಿಸ್ಸಂದೇಹ. ಭಾಷೆ ಮತ್ತು ಭಾಷಾ ಸಂಸ್ಕೃತಿಗಳು ಅದರ ಬಳಕೆ, ಆಚರಣೆಯಿಂದ ಮಾತ್ರವೇ ಬೆಳೆಯುತ್ತದೆ. ಯಕ್ಷಗಾನ ಮತ್ತು ತಾಳಮದ್ದಳೆಯಲ್ಲಿ ತೊಡಗುವುದರಿಂದ ಭಾಷಾ ಪೋಷಣೆಯಾಗುತ್ತದೆ.” ಎಂದರು. ಇದೇ ಸಂದರ್ಭದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ ಅಧ್ಯಕ್ಷ ಮತ್ತು ಕಲ್ಕೂರ ಪ್ರತಿಷ್ಠಾನದ ಸಂಸ್ಥಾಪಕರಾದ ಪ್ರದೀಪ ಕುಮಾರ್ ಕಲ್ಕೂರ ಇವರಿಗೆ ‘ಯಕ್ಷಾಂಗಣ ರಾಜ್ಯೋತ್ಸವ ಪುರಸ್ಕಾರ’ ನೀಡಿ ಗೌರವಿಸಲಾಯಿತು. ವಿನೋದಾ ಕಲ್ಕೂರ ಜತೆಗಿದ್ದರು.

ಸೂರಜ್ ಇಂಟರ್ನ್ಯಾಷನಲ್ ಸ್ಕೂಲ್ ಆಡಳಿತ ನಿರ್ದೇಶಕರಾದ ಡಾ. ಮಂಜುನಾಥ ಎಸ್. ರೇವಣ್ಕರ್, ಉದ್ಯಮಿಗಳಾದ ವಿ. ಕರುಣಾಕರ್, ಜಿತೇಂದ್ರ ಕೊಟ್ಟಾರಿ, ದೆಹಲಿ ಕನ್ನಡಿಗ ವಸಂತ ಶೆಟ್ಟಿ ಬೆಳ್ಳಾರೆ, ವಾಗೀಶ್ವರಿ ಯಕ್ಷಗಾನ ಕಲಾವರ್ಧಕ ಸಂಘ ಶತಮಾನೋತ್ಸವ ಸಮಿತಿ ಅಧ್ಯಕ್ಷ ಸಿ. ಎಸ್. ಭಂಡಾರಿ ಮೊದಲಾದವರು ಅತಿಥಿಗಳಾಗಿ ಪಾಲ್ಗೊಂಡರು. ಯಕ್ಷಾಂಗಣದ ಕಾರ್ಯಾಧ್ಯಕ್ಷ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಸ್ವಾಗತಿಸಿ ಪ್ರಸ್ತಾವನೆಗೈದು, ಕಾರ್ಯದರ್ಶಿ ಸುಮಾ ಪ್ರಸಾದ್ ಸನ್ಮಾನಪತ್ರ ವಾಚಿಸಿ, ಪ್ರಧಾನ ಕಾರ್ಯದರ್ಶಿ ತೋನ್ಸೆ ಪುಷ್ಕಳ ಕುಮಾರ್ ನಿರೂಪಿಸಿ, ಸಂಚಾಲಕಿ ನಿವೇದಿತ ಎನ್. ಶೆಟ್ಟಿ ವಂದಿಸಿದರು.
ಸಭಾಕಾರ್ಯಕ್ರಮದ ಬಳಿಕ ‘ಸಂಘಟನಾ ಪರ್ವ’ದ ಮೊದಲ ಕಾರ್ಯಕ್ರಮವಾಗಿ ಹವ್ಯಾಸಿ ಬಳಗ ಕದ್ರಿ ಇವರ ಸಂಯೋಜನೆಯಲ್ಲಿ ‘ರಾಜಾ ದಂಡಕ’ ಯಕ್ಷಗಾನ ತಾಳಮದ್ದಳೆ ಜರಗಿತು.