ಮಂಗಳೂರು : ಭರತನಾಟ್ಯ ಕಲೆಯನ್ನು ಅಕಾಡೆಮಿಕ್ ಆಗಿ ಬೋಧಿಸುತ್ತಿರುವ ಕಲಾ ಸಂಸ್ಥೆಗಳಲ್ಲಿ ಉರ್ವದ ನಾಟ್ಯಾರಾಧನಾ ಕಲಾ ಕೇಂದ್ರ (ರಿ.) ಸಂಸ್ಥೆಯು ಪ್ರಮುಖವಾದದ್ದು. ಸಂಸ್ಥೆಯು 1994 ಸೆಪ್ಟೆಂಬರ್ 8ರಂದು ಸುರತ್ಕಲ್ ಕೆ.ಆರ್.ಇ.ಸಿ.ಯಲ್ಲಿ ಗುರು ವಿದುಷಿ ಸುಮಂಗಲಾ ರತ್ನಾಕರ್ ರಾವ್ ಅವರ ಕನಸಿನ ಕೂಸಾಗಿ ಆರಂಭವಾಗಿದ್ದು, ಇದೀಗ ನಾಟ್ಯಾರಾಧನಾಕ್ಕೆ 30ನೇ ವರ್ಷಾಚರಣೆಯ ಸಂಭ್ರಮದ ಹೊನಲು. ಈ ಹಿನ್ನೆಲೆಯಲ್ಲಿ ನಾಟ್ಯಾರಾಧನಾ ತ್ರಿಂಶೋತ್ಸವ ಸಮಿತಿ ಮತ್ತು ತ್ರಿಂಶೋತ್ಸವ ವಿದ್ಯಾರ್ಥಿ ಸಮಿತಿಯ ಬೆಂಬಲದೊಂದಿಗೆ ದಿನಾಂಕ 18-01-2024 ಗುರುವಾರದಂದು ಸಂಜೆ 4.45ಕ್ಕೆ ಮಂಗಳೂರು ಪುರಭವನದಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ‘ನಾಟ್ಯಾರಾಧನಾ ತ್ರಿಂಶೋತ್ಸವ’ ಸಂಭ್ರಮದ ಉದ್ಘಾಟನಾ ಸಮಾರಂಭವನ್ನು ಆಯೋಜಿಸಿದೆ.
ಶ್ರೀ ಎಡನೀರು ಮಠದ ಜಗದ್ಗುರು ಶ್ರೀಶಂಕರಾಚಾರ್ಯ ಸಂಸ್ಥಾನ ಇದರ ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಭರತನಾಟ್ಯ ಗುರುಗಳೂ ವಿದ್ವಾಂಸರೂ ಆದ ಗುರು ಶ್ರೀ ಉಳ್ಳಾಲ ಮೋಹನ್ ಕುಮಾರ್, ವಿ. ಚಂದ್ರಶೇಖರ ನಾವಡ ಸುರತ್ಕಲ್, ವಿ. ಶ್ರೀಮತಿ ಶಾರದಾಮಣಿ ಶೇಖರ್, ವಿ. ಗೀತಾ ಸರಳಾಯ ಕದ್ರಿ, ವಿ. ಕಾವ್ಯ ಭಟ್ ಪೆರ್ಲ ಇವರು ಮುಖ್ಯ ಅಭ್ಯಾಗತರಾಗಿ ಆಗಮಿಸಲಿದ್ದಾರೆ. ಖ್ಯಾತ ಜನಪದ ವಿದ್ವಾಂಸರು ನಾಟ್ಯಾರಾಧನಾ ತ್ರಿಂಶೋತ್ಸವ ಸಮಿತಿಯ ಅಧ್ಯಕ್ಷರಾಗಿರುವ ಡಾ. ಗಣೇಶ್ ಅಮೀನ್ ಸಂಕಮಾರ್ ಸಭಾಧ್ಯಕ್ಷತೆ ವಹಿಸಲಿದ್ದಾರೆ.
ಅಂದು ಸಂಜೆ ಗಂಟೆ 5.30ರಿಂದ 7.30ರವರೆಗೆ ನಾಟ್ಯಾರಾಧನಾ ಕಲಾ ಕೇಂದ್ರದ ಅರಳು ಪ್ರತಿಭೆಗಳಾದ ವಿ. ಶೋಧನ್ ಕುಮಾರ್ ಬಿ, ವಿ. ಸತ್ಯನುಶ್ರೀ ಗುರುರಾಜ್, ಜಾಹ್ನವಿ ಶೆಟ್ಟಿ, ಸಾಧ್ವೀ ರಾವ್ ಟಿ., ವೃಂದಾ ಜಿ. ರಾವ್, ಸಮನ್ವಿತಾ ರಾವ್, ಧರಿತ್ರೀ ಭಿಡೆ, ತನ್ವಿ ಪಿ. ಬೋಳೂರು ಇವರಿಂದ ಗುರು ಸುಮಂಗಲಾ ರತ್ನಾಕರ್ ರಾವ್ ನಿರ್ದೇಶನದಲ್ಲಿ ‘ನೃತ್ಯ ವಂದನಾ’ ಕಾರ್ಯಕ್ರಮ ಜರುಗಲಿದೆ.
ವರುಷ ಪೂರ್ತಿ ವೈವಿಧ್ಯಮಯ ಸರಣಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸ್ಮರಣೀಯವಾಗಿಸುವ ಹುಮ್ಮಸ್ಸಿನಲ್ಲಿರುವ ನಾಟ್ಯಾರಾಧನಾ ತ್ರಿಂಶೋತ್ಸವದ ಉದ್ಘಾಟನಾ ಸಮಾರಂಭಕ್ಕೆ ಎಲ್ಲಾ ಕಲಾಭಿಮಾನಿಗಳಿಗೂ ಆತ್ಮೀಯ ಸ್ವಾಗತ.
1 Comment
Thank you for beautiful report Roovari 🙏