ಮಂಜೇಶ್ವರ : ‘ಶ್ರೀ ಮಾತಾ ಕಲಾಲಯ’ ಹಾಗೂ ‘ರೂವಾರಿ’ ಸಂಸ್ಥೆಗಳು ಜಂಟಿಯಾಗಿ ಆಯೋಜಿಸುತ್ತಿರುವ ಕನ್ನಡ, ತುಳು ಭಕ್ತಿ, ಭಾವ, ಜನಪದ ಗೀತೆ, ಚಿತ್ರಕಲೆ, ಯೋಗ, ಶಾಸ್ತ್ರೀಯ ನೃತ್ಯ ಹಾಗೂ ಶಾಸ್ತ್ರೀಯ ಸಂಗೀತ ತರಗತಿಗಳ ಉದ್ಘಾಟನಾ ಸಮಾರಂಭವು ದಿನಾಂಕ 02-06-2024ರ ಆದಿತ್ಯವಾರದಂದು ಕುಂಜತ್ತೂರಿನ ಲಕ್ಷ್ಮೀ ಕಣ್ಣಪ್ಪ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಅತಿಥಿಯಾಗಿ ವಿಜಯಾ ಬ್ಯಾಂಕಿನ ನಿವೃತ್ತ ಎ. ಜಿ. ಎಂ. ಆದ ಶ್ರೀ ಮೋಹನ್ ಶೆಟ್ಟಿ ಹಾಗೂ ನಿವೃತ್ತ ಅಪರ ಜಿಲ್ಲಾಧಿಕಾರಿಯಾದ ಶ್ರೀ ಪ್ರಭಾಕರ ಶರ್ಮ ಭಾಗವಹಿಸಿದರು. ಕಾರ್ಯಕ್ರಮಕ್ಕೆ ದೀಪ ಪ್ರಜ್ವಲಿಸಿ ಚಾಲನೆ ನೀಡಿ ಮಾತನಾಡಿದ ಶ್ರೀ ಪ್ರಭಾಕರ ಶರ್ಮ “ನಗರ ಪ್ರದೇಶಗಳಲ್ಲಿ ಸಾಕಷ್ಟು ನೃತ್ಯ ಹಾಗೂ ಚಿತ್ರಕಲಾ ತರಗತಿಗಳಿರುತ್ತವೆ, ಆದರೆ ಗ್ರಾಮೀಣ ಪ್ರದೇಶದ ಮಕ್ಕಳಿಗಾಗಿ ಇಲ್ಲಿ ತರಗತಿಗಳನ್ನು ಪ್ರಾರಂಭಿಸಿರುವುದು ಶ್ಲಾಘನೀಯ. ಈ ಪ್ರದೇಶದ ಜನರು ತಮ್ಮ ಮಕ್ಕಳನ್ನು ಇಲ್ಲಿ ತರಗತಿಗಳಿಗೆ ಸೇರಿಸುವ ಮೂಲಕ ಮಕ್ಕಳ ಅಭಿವೃದ್ಧಿಗೆ ಹಾಗೂ ಇಂತಹ ಗ್ರಾಮೀಣ ಪ್ರದೇಶದ ತರಗತಿಗಳಿಗೆ ಪ್ರೊತ್ಸಾಹ ನೀಡಬೇಕು.” ಎಂದು ವಿನಂತಿಸಿದರು.
ಕಾರ್ಯಕ್ರಮದಲ್ಲಿ ‘ಶ್ರೀ ಮಾತಾ ಕಲಾಲಯ’ದ ರೂವಾರಿ ಹಾಗೂ ಸಾಮಾಜಿಕ ಕಾರ್ಯಕರ್ತರಾದ ರವೀಂದ್ರ ಉಚ್ಚಿಲ್ ಮತ್ತು ಜಯಶೀಲ ಟೀಚರ್, ಕುಂಜತ್ತೂರು ಐಸ್ ಫ್ಯಾಕ್ಟರೀ ಮಾಲಕರಾದ ಪ್ರಸಾದ್ ಐಲ್, ಟಿ. ಸಿ. ಎಸ್. ಕಂಪನಿ ಉದ್ಯೋಗಿಯಾದ ಜಿತೇಶ್, ತುಳು ಸಾಹಿತಿ ಕುಶಾಲಾಕ್ಷಿ , ಲಕ್ಷ್ಮೀ ಕಣ್ಣಪ್ಪ ಟೀಚರ್ ಇವರ ಶಿಷ್ಯವೃಂದ ಹಾಗೂ ಅವರ ಹೆತ್ತವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ರತ್ನಾವತಿ ಜೆ. ಬೈಕಾಡಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿ ಗೀತೆಗಳ ತರಗತಿ ನಡೆಸಿಕೊಟ್ಟರು.
ಕಾರ್ಯಕ್ರಮವನ್ನು ಶ್ರೀ ಮಾತಾ ಕಲಾಲಯದ ಶ್ರೀಮತಿ ಜಯಶೀಲ ನಿರ್ವಹಿಸಿ, ಶ್ರೀಮತಿ ಚಂದ್ರಿಕಾ ಸ್ವಾಗತಿಸಿ, ಧನ್ಯವಾದ ಸಮರ್ಪಿಸಿದರು.