ಬಂಟ್ವಾಳ : ಬಂಟ್ವಾಳ ಮಂಚಿಯ ಬಿ. ವಿ. ಕಾರಂತ ರಂಗಭೂಮಿಕಾ ಟ್ರಸ್ಟ್ ವತಿಯಿಂದ ಆಯೋಜಿಸಿದ ಮೂರು ದಿನಗಳ ‘ಮಂಚಿ ನಾಟಕೋತ್ಸವ’ದ ಉದ್ಘಾಟನಾ ಸಮಾರಂಭವು ದಿನಾಂಕ 17-05-2024 ರಂದು ಕುಕ್ಕಾಜೆ ಶ್ರೀ ಸಿದ್ಧಿವಿನಾಯಕ ಭಜನಾ ಮಂದಿರ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮಕ್ಕೆ ಚಾಲನೆನೀಡಿ ಮಾತನಾಡಿದ ಉಡುಪಿ ಜಾದೂಗಾರ ಪ್ರೊ. ಶಂಕರ್ “ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ಬೆಳೆದ ಬಿ. ವಿ. ಕಾರಂತರು ಕನ್ನಡ ನಾಡಿನ ಶ್ರೇಷ್ಠ ಕಲಾವಿದರಾಗಿ ಗೌರವ ತಂದು ಕೊಟ್ಟಿರುವುದನ್ನು ಇಲ್ಲಿನ ಜನತೆ ‘ಮಂಚಿ ನಾಟಕೋತ್ಸವ’ದ ಮೂಲಕ ಪ್ರತಿ ವರ್ಷ ನೆನಪಿಸುತ್ತಿರುವುದು ಶ್ಲಾಘನೀಯ. ಜಾದೂ ಹಾಗೂ ನಾಟಕ ಒಂದಕ್ಕೊಂದು ಪೂರಕವಾದ ಕಲೆ. ಮಂಚಿಯಲ್ಲಿ ಬಿ. ವಿ. ಕಾರಂತ ರಂಗ ಮಂದಿರ ನಿರ್ಮಾಣವಾಗಲಿ.” ಎಂದು ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಂಗಾಯಣದ ಮಾಜಿ ನಿರ್ದೇಶಕ ಸಂದೇಶ ಜವಳಿ ಶಿವಮೊಗ್ಗ ಮಾತನಾಡಿ “ಬಿ. ವಿ. ಕಾರಂತರ ನಾಟಕಗಳಲ್ಲಿ ವೈಶಿಷ್ಟ್ಯ ಭಿನ್ನವಾಗಿ ಗುರುತಿಸಿಕೊಂಡಿದೆ.” ಎಂದರು. ಕ್ಯಾಂಪ್ಕೊ ನಿರ್ದೇಶಕ ಜಯಪ್ರಕಾಶ್ ನಾರಾಯಣ್ ಮಾತನಾಡಿದರು.
ಟ್ರಸ್ಟಿನ ಅಧ್ಯಕ್ಷ ಕಜೆ ರಾಮಚಂದ್ರ ಭಟ್ ಸ್ವಾಗತಿಸಿ, ಕಾರ್ಯದರ್ಶಿ ಬಾಲಕೃಷ್ಣ ಕೆ. ಖಂಡಿಗೆ, ಜತೆ ಕಾರ್ಯದರ್ಶಿ ಉಮಾನಾಥ ರೈ ಮೇರಾವು ಗಣ್ಯರನ್ನು ಪರಿಚಯಿಸಿ, ಜತೆ ಕಾರ್ಯದರ್ಶಿ ರಮಾನಂದ ನೂಜಿಪಾಡಿ ನಿರೂಪಿಸಿ, ವಂದಿಸಿದರು.
ಸಭಾಕಾರ್ಯಕ್ರಮದ ಬಳಿಕ ತೀರ್ಥಹಳ್ಳಿಯ ನಟಮಿತ್ರ ತಂಡದಿಂದ ‘ಸಂಸಾರದಲ್ಲಿ ಸನಿದಪ’ ಕನ್ನಡ ಹಾಸ್ಯ ನಾಟಕ ಪ್ರದರ್ಶನಗೊಂಡಿತು.