ಕೊಪ್ಪಳ : ಇಲ್ಲಿನ ಶಿವಶಾಂತವೀರ ಮಂಗಲ ಭವನದಲ್ಲಿ 1858ರ ಸ್ವಾತಂತ್ರ್ಯ ಹೋರಾಟ ಕೊಪ್ಪಳ ಹುತಾತ್ಮರ ವೇದಿಕೆಯಲ್ಲಿ, ಗದಗಿನ ಲಡಾಯಿ ಪ್ರಕಾಶನ, ಹೊನ್ನಾವರ ತಾಲ್ಲೂಕು ಕವಲಕ್ಕಿಯ ಕವಿ ಪ್ರಕಾಶನ, ಧಾರವಾಡದ ಚಿತ್ತಾರ ಕಲಾ ಬಳಗ ಹಾಗೂ ಕೊಪ್ಪಳದ ಮೇ ಸಾಹಿತ್ಯ ಬಳಗದ ಸಹಯೋಗದಲ್ಲಿ ಆಯೋಜಿಸಿರುವ ಎರಡು ದಿನಗಳ ಮೇ ಸಾಹಿತ್ಯ ಮೇಳವು ಇಂದು ದಿನಾಂಕ 25-05-2024ರಂದು ಪ್ರಾರಂಭಗೊಂಡಿತು. ಈ ಬಾರಿ “ಸಂವಿಧಾನ ಭಾರತ ಧರ್ಮಕಾರಣ” ಎಂಬ ಆಶಯವಾಕ್ಯದೊಂದಿಗೆ ಮೇಳ ನಡೆಯುತ್ತಿದೆ.
ಸಮಾಜದ ವಿವಿಧ ಅಲೆಮಾರಿ ಸಮುದಾಯಗಳಿಗೆ ಸೇರಿದ ಜನಸಾಮಾನ್ಯರಾದ ಬಸಮ್ಮ, ಜಂಬವ್ವ, ದುರ್ಗವ್ವ, ಶೋಭಾ ಮಠ, ಫಕೀರಜ್ಜ ಮತ್ತು ಮಕ್ಕಳು ಸಂವಿಧಾನದ ಪ್ರಸ್ತಾವನೆಯನ್ನು ಅತಿಥಿಗಳಿಗೆ ಸಲ್ಲಿಸಿ, ರಮೇಶ ಗಬ್ಬೂರ ನೇತೃತ್ವದಲ್ಲಿ ಎಲ್ಲರೂ ಸಂವಿಧಾನ ರಕ್ಷಣೆಯ ಪ್ರತಿಜ್ಞೆ ಸ್ವೀಕರಿಸುವ ಮೂಲಕ ಮೇಳಕ್ಕೆ ಚಾಲನೆ ದೊರೆಯಿತು. ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಗೋಪಾಲಗೌಡ ಅಧ್ಯಕ್ಷತೆ ವಹಿಸುವರು,ನವದೆಹಲಿಯ ರೈತ ಹೋರಾಟಗಾರ ರಾಕೇಶ್ ಟಿಕಾಯತ್,ಪಣಜಿಯ ಕೊಂಕಣಿ ಕವಿ,ಹೋರಾಟಗಾರ,ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ದಾಮೋದರ್ ಮೌಜೋ,ತೆಲಂಗಾಣದ ಕವಿ,ಹೋರಾಟಗಾರ್ತಿ ದಿಕ್ಸೂಚಿ ಮಾತುಗಳನ್ನಾಡಿದರು.
ಬಸವರಾಜ ಹೂಗಾರ ಪ್ರಾಸ್ತಾವಿಕ ಮಾತನಾಡಿ, “ಸಾಹಿತ್ಯ, ಅಕ್ಷರ ಎನ್ನುವುದು ಜನಸಮುದಾಯದ ಧ್ವನಿಯಾಗಬೇಕು ಎಂಬ ಆಶಯದೊಂದಿಗೆ ಪ್ರಾರಂಭಗೊಂಡ ಮೇ ಸಾಹಿತ್ಯ ಮೇಳವು ಈಗ ದಶಕ ಪೂರೈಸಿದೆ. ಇದೊಂದು ಸಂಘ, ಪದಾಧಿಕಾರಿಗಳನ್ನು ಹೊಂದಿದ ಸಂಘಟನೆಯಲ್ಲ, ಎಲ್ಲರೂ ಕಾರ್ಯಕರ್ತರಾಗಿ ಹಮ್ಮಿಕೊಳ್ಳುವ ಜಾಗೃತಿ ಕಾರ್ಯಕ್ರಮವಾಗಿದೆ. ಅವಕಾಶವಾದದ ರೋಗ ನಮ್ಮ ಸಾಹಿತ್ಯ ಜಗತ್ತನ್ನು ಅತಿಕ್ರಮಿಸಿರುವಾಗ, ಯಾರೂ ಕೂಡ ಶಿಫಾರಸ್ಸು ಮಾಡದ, ಯಾವುದಕ್ಕೂ ಆಸೆ ಪಡದ ಮಹಾನ್ ಸಾಧಕರನ್ನು ಪಾರದರ್ಶಕವಾಗಿ ಆಯ್ಕೆ ಮಾಡುವುದೇ ಈ ಮೇಳದ ಸೌಂದರ್ಯವಾಗಿದೆ” ಎಂದರು.
ರಮೇಶ ಗಬ್ಬೂರ ಸಂವಿಧಾನದ ಪ್ರಸ್ತಾವನೆ ಓದಿದರು. ಕಾಶಪ್ಪ ಚಲವಾದಿ, ಅನಿಲ ಹೊಸಮನಿ ನಿರ್ಣಯಗಳನ್ನು ಮಂಡಿಸಿದರು. ಟಿ. ರತ್ನಾಕರ್, ಜೆ. ಭಾರದ್ವಾಜ, ಕೆ. ವೆಂಕಟರಾಜು, ಮೆಹಮೂದ್ ಬೇಗಂ, ಪ್ರೊ. ಅಲ್ಲಮಪ್ರಭು ಬೆಟ್ಟದೂರ, ಎ.ವಿ. ಕಣವಿ ಉಪಸ್ಥಿತರಿದ್ದರು. ಡಿ.ಎಂ.ಬಡಿಗೇರ ಸ್ವಾಗತಿಸಿ, ಸಂಗಮೇಶ ಮೆಣಸಿನಕಾಯಿ, ಅಖಿಲಾ ವಿದ್ಯಾಸಂದ್ರ ಕಾರ್ಯಕ್ರಮ ಸಂಯೋಜಿಸಿದರು.
ಆರ್. ಸಿ. ಎಫ್. ಕಲಾತಂಡ ಸಿಂಧನೂರು, ದಲಿತ ಕಲಾ ಮಂಡಳಿ, ಇಪ್ಟಾ ಕರ್ನಾಟಕ, ಅರುಣೋದಯ ಕಲಾ ತಂಡ ಕೊತಬಾಳ, ಶರಣ ಕಲಾಬಳಗ ಗಂಗಾವತಿ, ಸಾಂಬಯ್ಯ ಹಿರೇಮಠ ಮತ್ತು ತಂಡ ಹರ್ಲಾಪುರ-ಕುಂದಗೋಳ, ಡಿಂಗ್ರಿ ಭರತ್, ಮರಿಯಮ್ಮ ಚೂಡಿ, ಗೌರಿ ಗೋನಾಳ, ನಾದ ಮಣಿನಾಲ್ಕೂರು ಮತ್ತಿತರ ಕಲಾವಿದರಿಂದ ಹೋರಾಟದ ಹಾಡುಗಳು, ಜನಪರ ಗೀತೆಗಳು ಮೊಳಗಿದವು.