ಕಡಬ: ಕೀರ್ತಿಶೇಷ ಶಾಂತಿಗೋಡು ಗೋಪಾಲಕೃಷ್ಣ ಶಗ್ರಿತ್ತಾಯ ಮತ್ತು ಜಾನಕಿ ಅಮ್ಮಸ್ಮಾರಕ ಸಾಂಸ್ಕೃತಿಕ ಪ್ರತಿಷ್ಠಾನದ ಆಶ್ರಯದಲ್ಲಿ ಹಾಗೂ ಪಡುಬೆಟ್ಟು ಸರಕಾರಿ ಹಿ. ಪ್ರಾ. ಶಾಲೆಯ ಸಹಯೋಗದಲ್ಲಿ ಪಡುಬೆಟ್ಟು ಶ್ರೀ ಬಾಲಸುಬ್ರಹ್ಮಣ್ಯ ಮಕ್ಕಳ ಯಕ್ಷಗಾನ ಮಂಡಳಿಯ ಉದ್ಘಾಟನಾ ಸಮಾರಂಭ, ಗುರುವಂದನೆ ಮತ್ತು ಮಕ್ಕಳ ರಂಗಪ್ರವೇಶ ಕಾರ್ಯಕ್ರಮವು ದಿನಾಂಕ 10-02-2024ರಂದು ಪಡುಬೆಟ್ಟು ಸರಕಾರಿ ಹಿ.ಪ್ರಾ. ಶಾಲಾ ರಂಗಮಂದಿರದಲ್ಲಿ ನಡೆಯಿತು.
ಮಕ್ಕಳ ಯಕ್ಷಗಾನ ಮಂಡಳಿಯನ್ನು ಉದ್ಘಾಟಿಸಿ ಮಾತನಾಡಿದ ನರಿಮೊಗರು ಸರಸ್ವತಿ ವಿದ್ಯಾಮಂದಿರದ ಸಂಚಾಲಕ ಅವಿನಾಶ್ ಕೊಡಂಕಿರಿ “ಎಂಭತ್ತರ ದಶಕದಲ್ಲಿ ಈ ಮೇಳವನ್ನು ಸ್ಥಾಪಿಸಿ ನಾಡಿನಾದ್ಯಂತ ಹಲವಾರು ಕಾರ್ಯಕ್ರಮಗಳ ನೀಡಿ ಪ್ರಸಿದ್ದಿ ಪಡೆಯಲು ಕಾರಣೀಭೂತರಾದ ಇಲ್ಲಿನ ನಿವೃತ್ತ ಶಿಕ್ಷಕ ದಿ. ಶಾಂತಿಗೋಡು ಗೋಪಾಲ ಕೃಷ್ಣ ಶಗ್ರಿತ್ತಾಯರ ನೆನಪಿನಲ್ಲಿ ಪ್ರತಿಷ್ಠಾನ ಮೂಲಕ ನಾಲ್ಕು ದಶಕಗಳ ಬಳಿಕ ಮತ್ತೆ ಅದೇ ಮಕ್ಕಳ ಮೇಳವನ್ನು ಲೋಕಾರ್ಪಣೆಗೊಳಿಸುವ ಕಾರ್ಯ ನನ್ನ ಪಾಲಿಗೊದಗಿದೆ. ಯಕ್ಷಗಾನವು ಭಾರತೀಯ ಸಂಸ್ಕೃತಿ ಬಿಂಬಿಸುವ ಕಲೆಯಾಗಿದ್ದು, ಮಕ್ಕಳ ತಂಡದ ಮೂಲಕ ನಿರಂತರ ಆ ಕೆಲಸ ನಡೆಯುವಂತಾಗಲಿ.” ಎಂದು ಶುಭ ಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ಯಕ್ಷಗಾನ ಪ್ರಸಿದ್ಧ ಅರ್ಥದಾರಿ ಗುಡ್ಡಪ್ಪಗೌಡಬಲ್ಯ ಮಾತನಾಡಿ “ಇಲ್ಲಿ ಮಕ್ಕಳ ಸಮರ್ಥ ತಂಡವೊಂದು ರೂಪುಗೊಳ್ಳಲು ಯಕ್ಷಗಾನದ ದಕ್ಷ ಗುರುಗಳು, ಶಾಲಾ ಅಧ್ಯಾಪಕ ವೃಂದ ಹಾಗೂ ಮಕ್ಕಳ ಪೋಷಕರೆಲ್ಲರ ಸಹಕಾರ ಅವಿಸ್ಮರಣೀಯ.“ ಎಂದರು. ಇದೇ ಸಂದರ್ಭದಲ್ಲಿ ಯಕ್ಷಗಾನ ಗುರು ಯೋಗೀಶ್ ಶರ್ಮ ಅಳದಂಗಡಿ ಅವರನ್ನು ಪ್ರತಿಷ್ಠಾನ ಹಾಗೂ ಶಾಲಾ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ದ.ಕ. ಜಿಲ್ಲಾ ರಿಕ್ಷಾ ಚಾಲಕ ಮಾಲಕ ಸಂಘ ಮಂಗಳೂರು ಇದರ ಅಧ್ಯಕ್ಷ ಬಿ. ವಿಷ್ಣುಮೂರ್ತಿ, ಶಾಂತಿನಗರ ಶಾಲಾ ನಿವೃತ್ತ ಮುಖ್ಯ ಶಿಕ್ಷಕ ಕುಪ್ಪಾಜೆ ಸುಬ್ರಹ್ಮಣ್ಯ ಉಪಾಧ್ಯಾಯ, ನೆಲ್ಯಾಡಿಯ ಉದ್ಯಮಿ ಸುಬ್ರಹ್ಮಣ್ಯ ಆಚಾರ್, ಪ್ರತಿಷ್ಠಾನದ ಅಧ್ಯಕ್ಷ ಗುರುಮೂರ್ತಿ ಶಗ್ರಿತ್ತಾಯ, ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ ಶಗ್ರಿತ್ತಾಯ ಕೊಕ್ಕಡ, ಶ್ರೀ ಬಾಲಸುಬ್ರಹ್ಮಣ್ಯ ಮಕ್ಕಳ ಯಕ್ಷಗಾನ ಮಂಡಳಿ ಸಂಚಾಲಕ ಗಂಗಾಧರ ಶೆಟ್ಟಿ ಹೊಸಮನೆ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಶಿವಪ್ರಸಾದ್, ಮುಖ್ಯ ಶಿಕ್ಷಕಿ ಜೆಸ್ಸಿ ಕೆ.ಎ., ಸುಂದರ ಗೌಡ ಅತ್ರಿಜಾಲು, ಜಯರಾಮ ಗೌಡ ನಾಲ್ಗುತ್ತು, ಸುರೇಶ್ ಪಡಿಪ್ಪಂಡ, ರಮೇಶ್ ಗೌಡ ನಾಲ್ಗುತ್ತು, ಧನಂಜಯ ಹೊಸವಕ್ಲು, ಕಿರಣ್ ಗೌಡ ಪುತ್ತಿಲ, ಧನಂಜಯ ಕೊಡಂಗೆ, ಲೀಲಾವತಿ ಎಂ., ನ್ಯಾನ್ಸಿ ಲಿಝಿ, ಕವಿತ ಡಿ., ಮಮತ ಸಿ.ಎಚ್., ಸಜಿನಾ ಕೆ., ಗೀತಾ ಬಿ.ಎಸ್. ಸುಬ್ರಹ್ಮಣ್ಯ ಶಗ್ರಿತ್ತಾಯ, ಗಂಗಾಧರ ಶೆಟ್ಟಿ ಇದ್ದರು. ಬಳಿಕ ಶ್ರೀ ಬಾಲಸುಬ್ರಹ್ಮಣ್ಯ ಯಕ್ಷಗಾನ ಮಕ್ಕಳ ತಂಡದಿಂದ ‘ಶಾಂಭವಿ ವಿಜಯ’ ಯಕ್ಷಗಾನ ಪ್ರದರ್ಶನಗೊಂಡಿತು.