ತೆಕ್ಕಟ್ಟೆ: ಯಶಸ್ವಿ ಕಲಾವೃಂದ ಕೊಮೆ ತೆಕ್ಕಟ್ಟೆಯ ‘ಸಿನ್ಸ್-1999 ಶ್ವೇತಯಾನ’ ರಜತ ಸಂಭ್ರಮದ ಉದ್ಘಾಟನಾ ಸಮಾರಂಭವು ದಿನಾಂಕ 18-02-2024 ರಂದು ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಕರ್ನಾಟಕ ರಾಜ್ಯ ಹಿಂದುಳಿದ ಆಯೋಗದ ಅಧ್ಯಕ್ಷರಾದ ಜಯಪ್ರಕಾಶ ಹೆಗ್ಡೆ ಮಾತನಾಡಿ “ಕಲಾಭಿಮಾನಿಗಳ ಆಸಕ್ತಿಯನ್ನು ಗುರುತಿಸಿ, ಯಶಸ್ವಿ ಸಂಸ್ಥೆ ಪ್ರದರ್ಶನಗಳನ್ನು ನೀಡುತ್ತಿರುವುದು ಶ್ಲಾಘನೀಯ. ಸಂಸ್ಥೆಯ ಬೆನ್ನೆಲುಬಾಗಿದ್ದ ಸದಸ್ಯರನ್ನು ರಜತ ಸಂಭ್ರಮದಲ್ಲಿ ನೆನಪಿಸುವ ಕೆಲಸ ಮಾಡುತ್ತಿರುವ ಕಲಾವೃಂದ ಬಹಳಷ್ಟು ಎತ್ತರಕ್ಕೆ ಏರುವ ಸಾಧ್ಯತೆಗಳಿವೆ. ಕಲಾ ಪೋಷಕರಿಗೆ ವೇದಿಕೆ ನಿರ್ಮಿಸಿ, ಅವರನ್ನು ಪ್ರದರ್ಶನಕ್ಕೆ ಸಿದ್ಧಗೊಳಿಸುವ ಕಾರ್ಯ ಸಾಧರಣವಲ್ಲ. ಬಹು ಕ್ಲಿಷ್ಟವಾದ ಸಾಹಸವೆನ್ನಿಸುವ ಕೆಲಸವನ್ನೇ ಕೈಗೆತ್ತಿಕೊಂಡು ಮುನ್ನುಗ್ಗುತ್ತಿರುವ ಸಂಸ್ಥೆ ಇಂದು ಇಪ್ಪತೈದನೇ ಸಂಭ್ರಮಕ್ಕೆ ನಾಂದಿ ಹಾಡುತ್ತಿದೆ. 108 ಕಾರ್ಯಕ್ರಮದ ಯೋಜನೆ ಸಾವಿರದಷ್ಟು ಆಗಲಿ” ಎಂದು ಶುಭಹಾರೈಸಿದರು.
ಶುಭಾಶಂಸನೆಗಾಗಿ ಆಗಮಿಸಿದ ಯಕ್ಷ ಸಾಹಿತಿ ಪವನ್ ಕಿರಣ್‌ಕೆರೆ ಮಾತನ್ನಾಡಿ “ಯಶಸ್ವಿ ಸಂಸ್ಥೆ ಯಕ್ಷಗಾನವನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನ ಮಾಡಿತ್ತೇ ಹೊರತು ಯಕ್ಷಗಾನದಿಂದ ತಾನು ಮುಖ್ಯ ವಾಹಿನಿಗೆ ಬರುವ ಯಾವ ಪ್ರಯತ್ನವನ್ನು ಮಾಡಿರಲಿಲ್ಲ. ಇಪ್ಪತ್ತೆತೈದು ವರ್ಷದ ಈ ಯಾನ ಪರಿಶುದ್ಧ ಶ್ವೇತಯಾನ. ಎಲ್ಲಾ ತರಗತಿಗಳನ್ನು ನೆರವೇರಿಸುತ್ತಾ, ಅದರಲ್ಲಿ ಅಭಿರುಚಿ ಹುಟ್ಟಿಸುತ್ತಾ ಯಕ್ಷಗಾನದ ಜೊತೆಗೆ ಉಳಿದ ಕಲೆಗಳನ್ನು ಬೆಳೆಸುತ್ತಾ ಬೆಳೆಸುತ್ತಾ ಕಲೆಯನ್ನು ಕೈ ದಾಟಿಸುವಲ್ಲಿ ಸರ್ವ ಪ್ರಯತ್ನ ಮಾಡುತ್ತಿರುವ ಏಕೈಕ ಸಂಸ್ಥೆ ಯಶಸ್ವಿ ಕಲಾವೃಂದ. ಕಲೆಯು ಚಿರಂಜೀವಿಯಾಗಿ ಉಳಿಯಬೇಕು, ಅಂತಾದರೆ ಮುಂದಿನ ತಲೆಮಾರಿಗೆ ಕಲೆಯನ್ನು ಕಲಿಸಿ ಹಸ್ತಾಂತರಿಸಬೇಕು, ಕೈ ದಾಟಿಸಬೇಕು. ಈ ನಿಟ್ಟಿನಲ್ಲಿ ಯಶಸ್ವೀ ಕಲಾವೃಂದ 1999ರಿಂದ ಇಲ್ಲಿಯವರೆಗೆ ಕಲೆಯನ್ನು ಕೈ ದಾಟಿಸುತ್ತಾ ಬಂದಿದೆ. ಅದರ ಪರಿಣಾಮ ಕಲೆಯ ಎಲ್ಲಾ ವಿಭಾಗದ ಕಲಾ ತಂಡವೇ ಪ್ರತೀ ವರ್ಷ ರಂಗವೇರುತ್ತಾ ಕಲೆಯನ್ನು ಮೆರೆಸುತ್ತಿದೆ. ಇಂತಹ ಕಾರ್ಯವನ್ನು ಸ್ತುತಿಸಿದರೆ ಅತಿಶಯೋಕ್ತಿ ಆಗಲಾರದು” ಎಂದರು.
ಗೌರವ ಉಪಸ್ಥಿತಿಯಲ್ಲಿ ತಲ್ಲೂರು ಶಿವರಾಮ ಶೆಟ್ಟಿ, ಜಯಕರ ಶೆಟ್ಟಿ ಇಂದ್ರಾಳಿ, ಮುರಳಿ ಕಡೆಕಾರ್, ದಿನೇಶ್ ಹೆಗ್ಡೆ ಮೊಳಹಳ್ಳಿ, ಅರುಣ್‌ಕುಮಾರ್ ಶೆಟ್ಟಿ, ಯೋಗೀಂದ್ರ, ಕೃಷ್ಣಮೂರ್ತಿ ಮಂಜರು, ಪ್ರಾಚಾರ್ಯ ಕೆ.ಪಿ. ಹೆಗ್ಡೆ, ಕೊರ್ಗಿ ವಿಠ್ಠಲ ಶೆಟ್ಟಿ, ಸೀತಾರಾಮ ಶೆಟ್ಟಿ ಮಲ್ಯಾಡಿ, ಗೋಪಾಲ ಪೂಜಾರಿ, ಹೆರಿಯ ಮಾಸ್ಟರ್ ಉಪಸ್ಥಿತರಿದ್ದರು. ಕಾರ್ಯಾಧ್ಯಕ್ಷ ಸುಜಯ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ರಾಘವೇಂದ್ರ ತುಂಗ ಸ್ವಾಗತಿಸಿ, ಸೀತಾರಾಮ ಶೆಟ್ಟಿ ಕೊಯಿಕೂರು, ಪ್ರಾಸ್ತಾವಿಕ ಮಾತನ್ನಾಡಿ, ಸುಜಯೀಂದ್ರ ಹಂದೆ ನಿರೂಪಿಸಿ, ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ ಧನ್ಯವಾದಗೈದರು. ಬಳಿಕ ಕಲಾ ಪೋಷಕರ ಕಲಾವಂತಿಕೆಯಲ್ಲಿ ಯಕ್ಷಗಾನ ರಂಗದಲ್ಲಿ ಪ್ರಸ್ತುತಿಗೊಂಡಿತು.