ಧಾರವಾಡ : ಆಲೂರು ವೆಂಕಟರಾವ್ ಸಭಾಭವನದಲ್ಲಿ ಧಾರವಾಡದ ಜಿ.ಬಿ. ಜೋಶಿ ಮೆಮೋರಿಯಲ್ ಟ್ರಸ್ಟ್ ಹಾಗೂ ಹುಬ್ಬಳ್ಳಿಯ ಕ್ಷಮತಾ ಸಂಸ್ಥೆಗಳು ಜಂಟಿಯಾಗಿ ಆಯೋಜಿಸಿರುವ ‘ಅನಂತ ಸ್ವರ ನಮನ’ ಮೂರು ದಿನಗಳ ಸಂಗೀತೋತ್ಸವವು ದಿನಾಂಕ 23 ಆಗಸ್ಟ್ 2024ರಂದು ಪ್ರಾರಂಭವಾಯಿತು.
ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಹಿರಿಯ ಗಾಯಕ ಪಂಡಿತ್ ಗಣಪತಿ ಭಟ್ ಹಾಸಣಗಿ ಇವರು ಮಾತನಾಡಿ “ಸಂಗೀತ ಹಾಗೂ ಸಾಹಿತ್ಯಕ್ಕೆ ಧಾರವಾಡ ಪ್ರಸಿದ್ಧವಾಗಿದೆ. ಸಂಗೀತ ಕ್ಷೇತ್ರದ ಬೆಳವಣಿಗೆಗೆ ಅನಂತ ಹರಿಹರ ನೀಡಿದ ಕೊಡುಗೆ ಅಪಾರವಾಗಿದೆ. ಅನಂತ ಹರಿಹರರು ಯುವ ಕಲಾವಿದರನ್ನು ಪ್ರೋತ್ಸಾಹಿಸುತ್ತಿದ್ದರು. ಹೀಗಾಗಿ ಅವರ ಮಾರ್ಗದರ್ಶನಲ್ಲಿ ಸಾಕಷ್ಟು ಕಲಾವಿದರಿಗೆ ಉತ್ತಮ ವೇದಿಕೆ ದೊರೆಯುವ ಮೂಲಕ ಸಂಗೀತ ಕ್ಷೇತ್ರದಲ್ಲಿ ಮುಂದುವರಿಯಲು ಅವಕಾಶವಾಯಿತು. ಅವರು ಯಾವುದೇ ಅಪೇಕ್ಷೆ ಇಲ್ಲದೆ ಸಂಗೀತಕ್ಕೆ ಸೇವೆ ಸಲ್ಲಿಸಿದ್ದಾರೆ. ಅದೇ ಮಾರ್ಗದಲ್ಲಿ ಯುವ ಕಲಾವಿದರು ಸಾಗಬೇಕು. ಅನಂತ ಹರಿಹರ ಅವರು ಆರು ದಶಕಗಳ ಕಾಲ ಸಂಗೀತ-ನೃತ್ಯ-ಸಾಂಸ್ಕೃತಿಕ ಲೋಕದಲ್ಲಿ ಕಲಾವಿದರ ಹಾಗೂ ಶ್ರೋತೃವರ್ಗದ ಕೊಂಡಿಯಾಗಿದ್ದರು. ಯಶಸ್ವಿ ಸಂಘಟಕ, ಸಂಸ್ಕೃತಿಯ ರಾಯಭಾರಿಯಾಗಿ ಎಲ್ಲರ ಮನದಲ್ಲಿ ವಿಶೇಷ ಛಾಪನ್ನು ಮೂಡಿಸುವ ಮೂಲಕ ಸ್ಮರಣೀಯರಾಗಿದ್ದಾರೆ” ಎಂದರು.
ಪದ್ಮಶ್ರೀ ಪಂಡಿತ್ ಎಂ. ವೆಂಕಟೇಶ ಕುಮಾರ ಮಾತನಾಡಿ, “ಅನಂತ ಹರಿಹರ ಅವರಲ್ಲಿ ಸಂಗೀತದ ಬಗ್ಗೆ ಅಪಾರ ಗೌರವ ಹಾಗೂ ಪ್ರೇಮ ಇತ್ತು. ಕಲಾವಿದರನ್ನು ಪ್ರೀತಿಯಿಂದ ಕಾಣುತ್ತಿದ್ದರು. ಅವರ ಮಾರ್ಗದರ್ಶನದಲ್ಲಿ ಸಾಕಷ್ಟು ಯುವ ಕಲಾವಿದರು ಬೆಳೆದಿದ್ದಾರೆ. ಸಂಗೀತ ಕ್ಷೇತ್ರಕ್ಕೆ ಅವರು ನಿಸ್ವಾರ್ಥದಿಂದ ಸೇವೆ ಮಾಡಿದ್ದಾರೆ. ಸರಳ ವ್ಯಕ್ತಿತ್ವ ಹೊಂದಿದ್ದ ಅವರು ಪ್ರಸಿದ್ಧಿ ಪಡೆಯಲು ಎಂದೂ ಬಯಸಿರಲಿಲ್ಲ. ಅವರು ಎಲೆಮರೆ ಕಾಯಿಯಂತೆ ಕೆಲಸ ಮಾಡುವ ಮೂಲಕ ಕಲಾವಿದರನ್ನು ಪ್ರೋತ್ಸಾಹಿಸುತ್ತಿದ್ದರು” ಎಂದರು.
ಪಂಡಿತ್ ಕೈವಲ್ಯಕುಮಾರ ಗುರವ ಮಾತನಾಡಿ, “ಅನಂತ ಹರಿಹರ ಅವರು ಸಂಗೀತಗಾರರಿಗೆ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು. ಕಲಾವಿದರನ್ನು ಪ್ರೋತ್ಸಾಹಿಸಿ ಸಂಗೀತ ಕೇಳುಗರ ಸಂಖ್ಯೆಯನ್ನು ಹೆಚ್ಚಿಸಿದ್ದರು. ಅವರು ಪ್ರತಿ ಕಾರ್ಯಕ್ರಮ ಆಯೋಜಿಸುವ ಮುನ್ನ ಸಂಗೀತದ ಗುಣಮಟ್ಟದ ಬಗ್ಗೆ ವಿಚಾರ ಮಾಡುತ್ತಿದ್ದರು ಎನ್ನುವುದು ವಿಶೇಷ” ಎಂದರು.
ಈ ಸಂದರ್ಭದಲ್ಲಿ ಅನಂತ ಹರಿಹರ ಅವರ ಭಾವಚಿತ್ರಕ್ಕೆ ಗಣ್ಯರು ಪುಷ್ಪನಮನ ಸಲ್ಲಿಸಿದರು. ಕ್ಷಮತಾ ಸಂಸ್ಥೆಯ ಸಂಚಾಲಕ ಗೋವಿಂದ ಜೋಶಿ, ಪಂಡಿತ್ ಶ್ರೀನಿವಾಸ ಜೋಶಿ ಮಾತನಾಡಿದರು. ಪಂಡಿತ್ ಶ್ರೀಪಾದ ಹೆಗಡೆ ಕಂಪ್ಲಿ, ಪಂಡಿತ್ ಬಿ.ಎಸ್. ಮಠ, ಡಾ. ರಮಾಕಾಂತ ಜೋಶಿ, ಡಾ. ಹ.ವೆಂ. ಕಾಖಂಡಿಕಿ, ಸಮೀರ ಜೋಶಿ ಇತರರು ಉಪಸ್ಥಿತರಿದ್ದರು.
ಧಾರವಾಡದಲ್ಲಿ ಆರಂಭಗೊಂಡ ‘ಅನಂತ ಸ್ವರ ನಮನ’ ಮೂರು ದಿನಗಳ ಸಂಗೀತೋತ್ಸವಕ್ಕೆ ಹುಬ್ಬಳ್ಳಿಯ ಯುವ ಕಲಾವಿದ ಸುಜಯೀಂದ್ರ ಕುಲಕರ್ಣಿ ಗಾಯನದೊಂದಿಗೆ ಚಾಲನೆ ದೊರೆಯಿತು. ಸುಜಯೀಂದ್ರ ಇವರು ಪೂರಿಯಾ ಕಲ್ಯಾಣ ರಾಗದೊಂದಿಗೆ ತಮ್ಮ ಸಂಗೀತ ಕಛೇರಿಯನ್ನು ಆರಂಭಿಸಿದರು. ವಿಲಂಬಿತ್ ಏಕತಾಲ್ ನಲ್ಲಿ ‘ಆಜ ಸೋಬನ….’, ಧೃತ್ ತೀನ್ ತಾಲ್ ನಲ್ಲಿ ‘ಧನ ಧನ ತೇರೋ..’ ಹಾಗೂ ಸುಪ್ರಸಿದ್ಧ ‘ಬಹುತ ದಿನ ಬೀತೆ…’ ಬಂದಿಶಗಳನ್ನು ಪ್ರಸ್ತುತಪಡಿಸಿದರು. ಇವರಿಗೆ ಡಾ. ಶ್ರೀಹರಿ ದಿಗ್ಗಾವಿ ತಬಲಾ ಹಾಗೂ ವಿನೋದ ಪಾಟೀಲ ಹಾರ್ಮೋನಿಯಂ ಸಾಥ್ ನೀಡಿದರು.
ನಂತರ ಕಿರಾನಾ ಘರಾಣೆಯ ಶುಭಾಂಗಿ ಜಾಧವ ಅವರ ತಮ್ಮ ಗಾಯನವನ್ನು ರಾಗ ಶುದ್ಧಕಲ್ಯಾಣದೊಂದಿಗೆ ಆರಂಭಿಸಿದರು. ವಿಲಂಬಿತ ಏಕ್ ತಾಲ್ ನಲ್ಲಿ ‘ಹೋ ತುಮ ಬಿನ ಕೌನ…’ ಹಾಗೂ ಧೃತ್ ತೀನ್ ತಾಲದಲ್ಲಿ ‘ಮೌಂದರ ಬಾಜೋ..’ ಬಂದಿಶಗಳನ್ನು ಪ್ರಸ್ತುತ ಪಡಿಸಿದರು. ನಂತರ ಮರಾಠಿ ಅಭಂಗ ಸಾದರಪಡಿಸಿದರು. ಇವರಿಗೆ ಪಂಡಿತ್ ಕೇಶವ ಜೋಶಿ ತಬಲಾ ಹಾಗೂ ಬಸವರಾಜ ಹಿರೇಮಠ ಹಾರ್ಮೋನಿಯಂ ಸಾಥ್ ನೀಡಿದರು.
ಕಿರಾನಾ ಘರಾಣೆಯ ಡಾ. ವಿಜಯಕುಮಾರ ಪಾಟೀಲ ತಮ್ಮ ಗಾಯನವನ್ನು ಛಾಯಾನಟ್ ರಾಗದೊಂದಿಗೆ ಆರಂಭಿಸಿದರು. ವಿಲಂಬಿತ್ ಏಕತಾಲ್ ನಲ್ಲಿ ‘ಪ್ರೀತಮ ಕಿ….’ ಹಾಗೂ ಧೃತ್ ತೀನ್ ತಾಲನಲ್ಲಿ ‘ತೊರೆ ಪ್ರೀತ ಲಾಗೆ…’ ಬಂದಿಶಗಳನ್ನು ಸಾದರಪಡಿಸಿದರು. ನಂತರ ‘ಸಾವರೆ ಹೈಜೈಯೋ…’ ಹಾಗೂ ಕೊನೆಯದಾಗಿ ಭೈರವಿ ರಾಗದಲ್ಲಿ ‘ಇತನಾ ತೊ ಕರನಾ ಸ್ವಾಮಿ…’ ನಿರ್ಗುಣಿ ಭಜನ್ ಪ್ರಸ್ತುತಿಯೊಂದಿಗೆ ಮೊದಲ ದಿನದ ಕಾರ್ಯಕ್ರಮಕ್ಕೆ ತೆರೆ ಎಳೆದರು. ಇವರಿಗೆ ಪಂಡಿತ್ ಕೇಶವ ಜೋಶಿ ತಬಲಾ ಹಾಗೂ ಬಸವರಾಜ ಹಿರೇಮಠ ಹಾರ್ಮೋನಿಯಂ ಸಾಥ್ ನೀಡಿದರು.