ಸೋಮವಾರಪೇಟೆ : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಸೋಮವಾರಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಸೋಮವಾರಪೇಟೆ ಕ.ಸ.ಬಾ. ಹೋಬಳಿ ಘಟಕ ಕನ್ನಡ ಸಾಹಿತ್ಯ ಪರಿಷತ್ತು ಐಗೂರು ಕೇಂದ್ರದ ವತಿಯಿಂದ ಸೋಮವಾರಪೇಟೆ ಕ.ಸ.ಬಾ. ಹೋಬಳಿ ಘಟಕದ ನೂತನ ಕಚೇರಿಯು ದಿನಾಂಕ 9 ಅಕ್ಟೋಬರ್ 2024ರಂದು ಐಗೂರು ಗ್ರಾಮದಲ್ಲಿ ಉದ್ಘಾಟನೆಗೊಂಡಿತು.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ನೂತನ ಕಚೇರಿಯನ್ನು ಉದ್ಘಾಟಿಸಿದ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್ ಮಾತನಾಡಿ “ಕನ್ನಡ ಸಾಹಿತ್ಯ ಬೆಳವಣಿಗೆಗಾಗಿ ಪಕ್ಷಾತೀತ, ಜಾತ್ಯಾತೀತವಾಗಿ ಹಾಗೂ ಸರ್ವ ಭಾಷಿಕರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಕೊಡಗು ಜಿಲ್ಲೆಯಲ್ಲಿ ಕೇವಲ 53 ಸದಸ್ಯರಿದ್ದ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಇಂದು 3500 ಸದಸ್ಯರಿದ್ದಾರೆ. ಹತ್ತು ಸಾವಿರ ಸದಸ್ಯರನ್ನು ನೋಂದಾಯಿಸುವ ಗುರಿ ಹೊಂದಲಾಗಿದೆ. ಸದಸ್ಯತ್ವ ಆಂದೋಲನಕ್ಕೆ ಹೆಚ್ಚಿನ ಒತ್ತು ನೀಡಬೇಕಿದೆ. ಈ ಹಿನ್ನೆಲೆಯಲ್ಲಿ ಸ್ತ್ರೀ ಶಕ್ತಿ ಮತ್ತು ಗ್ರಾಮ ಪಂಚಾಯಿತಿ ಸಹಕಾರದೊಂದಿಗೆ ಸದಸ್ಯತ್ವ ಆಂದೋಲನ ಮಾಡಬೇಕು” ಎಂದು ಕರೆ ನೀಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷ ಎಸ್.ಎ. ಮುರಳೀಧರ್ ಮಾತನಾಡಿದರು. ಹೋಬಳಿ ಘಟಕದ ಅಧ್ಯಕ್ಷ ನಂಗಾರು ಕೀರ್ತಿ ಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ತಾಲೂಕು ಘಟಕದ ಅಧ್ಯಕ್ಷ ಎಸ್.ಡಿ. ವಿಜೇತ, ತಾಲೂಕು ಘಟಕದ ಕಾರ್ಯದರ್ಶಿ ಜ್ಯೋತಿ, ಕೆ.ಪಿ. ದಿನೇಶ್, ಗೌರವ ಕಾರ್ಯದರ್ಶಿ ಸರಳಾಕುಮಾರಿ, ಕೋಶಾಧಿಕಾರಿ ಬೆಳ್ಳಿಯಪ್ಪ, ಸಂಘಟನಾ ಕಾರ್ಯದರ್ಶಿ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಕ ಅಜಿತ್ ಕುಮಾರ್ ಮತ್ತಿತರರು ಇದ್ದರು.
ಇದೇ ಸಂದರ್ಭ ಹೋಬಳಿ ಘಟಕಕ್ಕೆ ನೆರವು ನೀಡಿದ ಸ್ಥಳೀಯರಾದ ಮಚ್ಚಂಡ ಅಶೋಕ್, ಕೆ.ಪಿ.ರೋಷನ್, ಕಸಬ ಹೋಬಳಿ ಘಟಕದ ಸಂವಹನ ಕಾರ್ಯದರ್ಶಿ ವಿಶ್ವನಾಥ ರಾಜೇ ಅರಸ್, ಸಾಂದೀಪನಿ ವಿದ್ಯಾ ಸಂಸ್ಥೆಯ ಅಧ್ಯಕ್ಷ ಮೂಡಗದ್ದೆ ದಾಮೋದರ್, ನಿವೃತ್ತ ಡಿವೈಎಸ್‌ಪಿ ಕೂಡಕಂಡಿ ಸೋಮಣ್ಣ ಇವರನ್ನು ಸನ್ಮಾನಿಸಲಾಯಿತು.