ಕೊರವಡಿ : ಕೊರವಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಿನಾಂಕ 11 ಸೆಪ್ಟೆಂಬರ್ 2024ರಂದು ಯಶಸ್ವೀ ಕಲಾವೃಂದ (ರಿ.) ಕೊಮೆ ತೆಕ್ಕಟ್ಟೆ ಇವರ ಪ್ರಸ್ತುತಿಯಲ್ಲಿ ‘ಸಿನ್ಸ್ 1999 ಶ್ವೇತಯಾನ- 57’ ಕಾರ್ಯಕ್ರಮದಡಿಯಲ್ಲಿ ‘ಶಾಲೆಗಳಲ್ಲಿ ಒಡ್ಡೋಲಗ’ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಗಣಪತಿ ಟಿ. ಶ್ರೀಯಾನ್ ಇವರು ಮಾತನಾಡಿ “ಚಿಣ್ಣರ ಮೂಲಕವೇ ಚಿಣ್ಣರಿಗೆ ಯಕ್ಷಗಾನದ ಪರಂಪರೆಯ ಒಡ್ಡೋಲಗವನ್ನು ಪರಿಚಯಿಸುವ ಕಾರ್ಯ ನಿಜಕ್ಕೂ ಸ್ತುತ್ಯರ್ಹ. ಗತಕಾಲದ ಪರಂಪರೆಯ ಹಲವು ಒಡ್ಡೋಲಗಗಳು ಮಾಯವಾಗಿದೆ. ಅದನ್ನು ಅಧ್ಯಯನ ಮಾಡಿ ರಂಗದಲ್ಲಿ ಪ್ರಸ್ತುತ ಪಡಿಸುವ ಸಹನೆ ಕಲಾವಿದರಿಗೂ ಇಲ್ಲ, ಅದನ್ನು ನೋಡುವ ಸಹನೆ ಪ್ರೇಕ್ಷಕರಲ್ಲೂ ಇಲ್ಲ. ಅಂದದ ಪ್ರಸ್ತುತಿ ‘ಪರಂಪರೆಯ ಒಡ್ಡೋಲಗ’ ರಂಗದಿಂದ ಹೊರಗುಳಿದಿರುವುದು ನಿಜಕ್ಕೂ ಖೇದಕರ ಸಂಗತಿ. ಯಶಸ್ವೀ ಕಲಾವೃಂದ ಈ ನಿಟ್ಟಿನಲ್ಲಿ ಪ್ರತೀ ವರ್ಷ ಶಾಲೆಗಳಿಗೆ ತೆರಳಿ ಚಿಣ್ಣರ ಮುಖೇನ ರಂಗಪ್ರಸ್ತುತಿ ನೀಡುತ್ತಿರುವ ವಿಚಾರ ಶ್ಲಾಘ್ಯಾಯೋಗ್ಯ ವಿಚಾರ” ಎಂದು ಹೇಳಿದರು.
ಕುಂಭಾಶಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಆನಂದ ಪೂಜಾರಿ ಮಾತನಾಡಿ, “ಯಕ್ಷಗಾನವು ಕರಾವಳಿ ಭಾಗದ ಪ್ರಬುದ್ಧ ಕಲೆ. ಇಂತಹ ಕಲೆಯನ್ನು ಮಕ್ಕಳಿಗೆ ಕಲಿಸಿ, ಮಕ್ಕಳಿಗೆ ಪರಿಚಯಿಸುವ ಕಾರ್ಯ ಶ್ಲಾಘನೀಯ. 25 ವರ್ಷದ ಇತಿಹಾಸದ ಯಶಸ್ವೀ ಕಲಾವೃಂದ ಅನೇಕಾನೇಕ ಕಾರ್ಯಕ್ರಮವನ್ನು ನಿರ್ವಹಿಸುತ್ತ ಪ್ರಪಂಚದಾದ್ಯಂತ ಹೆಸರು ಗಳಿಸಿ, ಇದೀಗ ಸ್ಥಳೀಯ ಶಾಲೆಗಳಲ್ಲಿ ಒಡ್ಡೋಲಗ ನೀಡುವುದಕ್ಕಾಗಿ ತೊಡಗಿಸಿಕೊಂಡಿರುವುದು ಅತ್ಯಂತ ಸೂಕ್ತ” ಎಂದರು.
ಯಶಸ್ವೀ ಕಲಾವೃಂದದ ಅಧ್ಯಕ್ಷ ಸೀತಾರಾಮ ಶೆಟ್ಟಿ ಮಲ್ಯಾಡಿ, ಚಾರಿಟೇಬಲ್ ಟ್ರಸ್ಟಿನ ಪ್ರಸಾದ್ ಹೆಬ್ಬಾರ್, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷೆಯಾದ ದೀಪಿಕಾ ಆರ್. ಪುತ್ರನ್, ಹಿರಿಯರಾದ ರಾಮ ಕಾಂಚನ್ ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕಿ ಶ್ಯಾಮಲಾ ಸ್ವಾಗತಿಸಿ, ಪ್ರಾಸ್ತಾವಿಕ ಮಾತನ್ನಾಡಿದರು. ಬಂಗೇರ ಓವರ್‌ಸೀಸ್ ಮಾಲಕ ರಾಜೇಶ್ ಕಾಂಚನ್ ಶಾಲಾ ಮಕ್ಕಳಿಗೆ ಉಪಹಾರದ ವ್ಯವಸ್ಥೆ ಮಾಡಿ ಸಹಕರಿಸಿದರು. ಸಹ ಶಿಕ್ಷಕಿ ಶಾಂತಿ ಡಿ’ಸೋಜ ಧನ್ಯವಾದಗೈದರು. ಹಿರಿಯ ಶಿಕ್ಷಕಿ ಮಾಲತಿ ಶೆಟ್ಟಿ ನಿರೂಪಣೆ ಮಾಡಿದರು. ಬಳಿಕ ಪ್ರಾಚಾರ್ಯ ದೇವದಾಸ್ ರಾವ್ ಕೂಡ್ಲಿ ನಿರ್ದೇಶನದಲ್ಲಿ ‘ಒಡ್ಡೋಲಗ ಇನ್ ಸ್ಕೂಲ್ಸ್’ ಯಕ್ಷಗಾನದ ಒಡ್ಡೋಲಗಗಳ ಪ್ರಾತ್ಯಕ್ಷಿಕೆಯನ್ನು ಶಾಲಾ ಮಕ್ಕಳಿಗಾಗಿ ನೀಡಿದರು.