ಮೈಸೂರು : ಮಂಡ್ಯ ರಮೇಶ್ ನೇತೃತ್ವದ ‘ನಟನ ಮೈಸೂರು’ ಆಯೋಜಿಸುವ ‘ರಜಾ ಮಜಾ’ ಮಕ್ಕಳ ಬೇಸಿಗೆ ಶಿಬಿರವು ದಿನಾಂಕ 11 ಏಪ್ರಿಲ್ 2025ರಂದು ಮೈಸೂರಿನ ದಟ್ಟಗಳ್ಳಿಯ ಸುಪ್ರೀಮ್ ಪಬ್ಲಿಕ್ ಶಾಲೆಯಲ್ಲಿ ಉದ್ಘಾಟನೆಗೊಂಡಿತು. ನಟನದ 24ನೇ ವರ್ಷದ ಈ ಕಾರ್ಯಕ್ರಮವು ಮಕ್ಕಳು, ಪೋಷಕರು, ಅತಿಥಿಗಳ ಮುಂದೆ ಸಂಭ್ರಮದಿಂದ ಅನಾವರಣಗೊಂಡಿತು.
ಅಲ್ಲಿ ವೃತ್ತಿ ರಂಗಭೂಮಿಯ ಹಿರಿಯ ಕಲಾವಿದರಿದ್ದರು, ಈ ತುತ್ತ ತುದಿಗೆ ಆಧುನಿಕ ರಂಗಭೂಮಿಯ ಡಿಪ್ಲೋಮಾ ವಿದ್ಯಾರ್ಥಿ ವಿದ್ಯಾರ್ಥಿನಿಯರಿದ್ದರು, ಜನಪ್ರಿಯ ಹಿರಿಯ ಸಿನಿಮ ಕ್ರಿಯಾಶೀಲ ನಿರ್ದೇಶಕರಿದ್ದರು, ನಟನ ಯಾನದಿಂದ ಹೊರಟು ಹೋಟೆಲ್ ಉದ್ಯಮದಲ್ಲಿ ಮೇರು ಸಾಧಿಸಿದ ಮಾಲೀಕರಿದ್ದರು, ಶಿಕ್ಷಣ ತಜ್ಞರಿದ್ದರು. ಕಲಾವಿದ ಮನಸ್ಸಿನ ಪೋಷಕರು ಮಕ್ಕಳು ತುಂಬಿ ತುಳುಕಿದರು. ಪ್ರತಿಯೊಬ್ಬರೂ ಅವರ ಅನುಭವಗಳನ್ನು ಮಕ್ಕಳಿಗಾಗಿ ಹಂಚಿಕೊಳ್ಳುತ್ತಿದ್ದಾಗ ವಿಚಾರ, ವಿನೋದ, ಭಾವುಕತೆ ಮಕ್ಕಳ ಮನಸ್ಸಿನಲ್ಲಿ ಕನಸುಗಳಾಗಿ ಅರಳಿಕೊಳ್ಳುತ್ತಿದ್ದುದನ್ನು ತೀರಾ ಸಮೀಪದಲ್ಲಿ ಕಂಡೆ. ಮುಂದಿನ 26 ದಿನಗಳ ಶಿಬಿರದಲ್ಲಿ ಆ ಮಕ್ಕಳ ಅರ್ಥಪೂರ್ಣ ಕಲಿಕಾ ಸಂಭ್ರಮದ ನಾಂದಿಯಾಗಿ ಇಡೀ ಕಾರ್ಯಕ್ರಮ ಚೇತೋಹಾರಿಯಾಗಿತ್ತು !
ಹೊರಡುವ ಮುನ್ನ ಹಿರಿಯ ಕಲಾವಿದರಾದ ರಾಧಾ-ರುಕ್ಮಿಣಿ ಮತ್ತು ಜಿ.ವಿ. ಕೃಷ್ಣ ‘ಗುಬ್ಬಿ ಕಂಪನಿ ನೆನಪಿಸಿದಿರಿ’ ಎಂದು ಹೇಳಿದರೇ ಯೋಗರಾಜ್ ಭಟ್ಟರು “ನಿಮ್ಮ ಆಶಯ ಮತ್ತು ಸಂಪನ್ಮೂಲರ ಕನ್ನಡ ಎಷ್ಟು ಚಂದ… ಕನ್ನಡ ಕಟ್ಟುವ ಬಗೆ ಇದೆ ಅಲ್ವಾ.. ಇದು ನಾಡಿಗೆ ಪಸರಿಸಲಿ” ಅಂತ ಅಂದು ಭಾವುಕರಾಗಿದ್ದರು. ಎಲ್ಲಾ ಒಳ್ಳೆ ಮನಸ್ಸುಗಳ ಹಾರೈಕೆ ಇನ್ನಷ್ಟು ಕೆಲಸ ಮಾಡಲು ದೀವಿಗೆಯಾಗುತ್ತದೆ.