ಶಿರಹಟ್ಟಿ : ಫಕೀರೇಶ್ವರ ನಗರದ ಎಚ್.ಎಮ್. ದೇವಗಿರಿಯವರ ಮನೆಯಲ್ಲಿ ಕಾಸರಗೋಡಿನ ಕನ್ನಡ ಭವನ, ಗ್ರಂಥಾಲಯ (ರಿ.) ಕನ್ನಡ ಭವನದ ಗದಗ ಜಿಲ್ಲಾ ಘಟಕವು ದಿನಾಂಕ 22 ಮಾರ್ಚ್ 2026ರಂದು ಜ್ಯೋತಿ ಬೆಳಗಿಸುವುದರೊಂದಿಗೆ ವಿದ್ಯುಕ್ತವಾಗಿ ಉದ್ಘಾಟನೆಗೊಂಡಿತು. ಇದೇ ಸಂದರ್ಭದಲ್ಲಿ ಗದಗ ಜಿಲ್ಲಾ ಘಟಕದ ಉಪಾಧ್ಯಕ್ಷರೂ, ಬಸಾಪೂರ ಶಾಲೆಯ ಶಿಕ್ಷಕಿಯವರಾದ ರತ್ನಾ ಗಿರೋಸಾ ಬದಿ ಅವರ ‘ರತ್ನನ ಪದ’ ಕವನ ಸಂಕಲನದ ಸಂವಾದ ಕಾರ್ಯಕ್ರಮವನ್ನು ನಡೆಸಲಾಯಿತು.
ಕನ್ನಡ ಭವನ ಗದಗ ಜಿಲ್ಲಾ ಘಟಕದ ಅಧ್ಯಕ್ಷರಾದ ಡಾ. ಸಂಗಮೇಶ ತಮ್ಮನಗೌಡ್ರ ಮಾತನಾಡುತ್ತ “ರತ್ನಾ ಗಿರೋಸಾ ಬದಿಯವರು ತಮ್ಮ ಭಾವ ತನ್ಮಯತೆಯಲ್ಲಿ ಉದ್ಭವಿಸಿದ ಅಂತರಾತ್ಮದ 50 ಕವನಗಳನ್ನು ಈ ಕೃತಿಯಲ್ಲಿ ಹೊಸೆದಿದ್ದಾರೆ. ಪ್ರಕೃತಿ ಪ್ರೇಮ, ವ್ಯಕ್ತಿಚಿತ್ರಣ, ಮಕ್ಕಳ ಗೀತೆಗಳು ಮುಂತಾದ ವಿಷಯಗಳನ್ನು ಒಳಗೊಂಡ ಕವನಗಳು ಈ ಪುಸ್ತಕದ ಹಿರಿಮೆಯನ್ನು ಹೆಚ್ಚಿಸಿವೆ. ಇನ್ನೂ ಹೆಚ್ಚು ಅಧ್ಯಯನದೊಂದಿಗೆ ಕವಿಯತ್ರಿ ಬೆಳೆದರೆ ಉತ್ತಮ ಸಾಹಿತಿಯಾಗುವ ವ್ಯಕ್ತಿತ್ವವನ್ನು ಗಳಿಸಿಕೊಳ್ಳುವ ಅವಕಾಶವು ರತ್ನಾ ಬದಿಯವರಿಗೆ ಇದೆ” ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಜ್ಯೋತಿ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದ ಹಿರಿಯರಾದ ಎಚ್.ಎಂ. ದೇವಗಿರಿಯವರು ಮಾತನಾಡುತ್ತಾ “ದೂರದ ಕಾಸರಗೋಡಿಗೂ ಮತ್ತು ಗದುಗಿಗೂ ನಂಟು ಬೆಸೆದ ಕನ್ನಡ ಭವನದ ಜಿಲ್ಲಾ ಅಧ್ಯಕ್ಷರಾದ ಡಾ. ಸಂಗಮೇಶ ತಮ್ಮನಗೌಡ್ರ ಅವರ ಕಾರ್ಯ ಮೆಚ್ಚುವಂತಹದ್ದು ಯುವ ಪ್ರತಿಭೆಗಳನ್ನು ಗುರುತಿಸಿ, ಸಂಘಟನೆಯ ಮುಖಾಂತರ ಅವರು ಉತ್ತರೋತ್ತರವಾಗಿ ಬೆಳೆಯಲು ಪ್ರೋತ್ಸಾಹಿಸಿದರೆ ಈ ಸಂಘಟನೆಗೂ ದೊಡ್ಡ ಹೆಸರು ಬರುತ್ತದೆ” ಎಂಬ ಆಶಯ ನುಡಿದರು.
ಪುಸ್ತಕ ಸಂವಾದದಲ್ಲಿ ಅಲ್ಲಾಸಾಬ ನದಾಫ, ಶಿವಾನಂದ ಪರಸಣ್ಣವರ ‘ರತ್ನನ ಪದ’ ಸಂವಾದ ನಡೆಸಿದರು. ಮುಖ್ಯ ಅತಿಥಿಗಳಾದ ಶಿರಹಟ್ಟಿ ತಾಲೂಕಾ ಕದಳಿ ವೇದಿಕೆ ಅಧ್ಯಕ್ಷರಾದ ನಂದಾ ಕಪ್ಪತ್ತನವರ ಮಾತನಾಡಿ “ನಮ್ಮ ಶಿರಹಟ್ಟಿ ಪಟ್ಟಣದಲ್ಲಿ ಕಾಸರಗೋಡಿನ ಕನ್ನಡ ಭವನದ ಸಂಘಟನೆಯ ಕಾರ್ಯಕ್ರಮ ನಮ್ಮ ಪಟ್ಟಣದ ಹೆಮ್ಮೆ. ಈ ಕಾರ್ಯಕ್ರಮದಲ್ಲಿ ಶಿಕ್ಷಕಿ ಮತ್ತು ಸಾಹಿತಿಯಾಗಿರುವ ರತ್ನಾ ಬದಿಯವರ ಪುಸ್ತಕ ಸಂವಾದ ನಡೆಸಿರುವುದು ಸಾಹಿತ್ಯದ ಹಿರಿಮೆಯನ್ನು ಹೆಚ್ಚಿಸುತ್ತದೆ” ಎಂದರು.
ಮತ್ತೋರ್ವ ಅತಿಥಿಗಳಾದ ಶಿಕ್ಷಕಿ ರೇಣುಕಾ ಲಕ್ಕುಂಡಿ ಅವರು ಮಾತನಾಡುತ್ತಾ “ರತ್ನನ ಪದ ಕೃತಿಯಲ್ಲಿ ಭಾವನೆಯ ಸೊಗಸಿನ ಪದ್ಯಗಳು ಹೆಚ್ಚಾಗಿವೆ. ಅವುಗಳು ಪುಸ್ತಕದ ಹಿರಿಮೆಯನ್ನು ಹೆಚ್ಚಿಸಿವೆ” ಎಂದರು. ಕಾರ್ಯಕ್ರಮದಲ್ಲಿ ಪಕ್ಕೀರೇಶ ಹಳ್ಳೆಮ್ಮನವರ, ವಾಸುದೇವ ಕಲಾಲ, ಅಲ್ಲಾಸಾಬ ನದಾಫ, ಶಂಕ್ರಪ್ಪ ಶಿಳ್ಳಿನ, ಗುರುಬಾಯಿ ಹುಲಸೂರ, ಸುಜಾತಾ ಪಾಟೀಲ, ರತ್ನಾ ಬಬಲಿಯವರ, ನಿವೇದಿತಾ ಛಬ್ಬಿ, ಈರಮ್ಮ ಕಳಸಾಪೂರ, ಶಶಿಕಲಾ ಸಂಕದಾಳ, ನಿರ್ಮಲಾ ತಂಬು ತುಳಿ, ಪವಿತ್ರಾ ಬಸವರಾಜ ತುಳಿ, ಶಶಾಂಕ ಸಂಕದಾಳ, ಶಿವಾನಂದ ಪರಸಣ್ಣವರ, ಗೀತಾ ಹಲಸೂರ, ರೇಣುಕಾ ಜಗಂಡಬಾವಿ, ಸವಿತಾ ದೇವಗಿರಿ ಮುಂತಾದವರು ಪಾಲ್ಗೊಂಡಿದ್ದರು. ರತ್ನಾ ಬಬಲಿಯವರ ಹಾಗೂ ಶಶಾಂಕ ಸಂಕದಾಳ ಪ್ರಾರ್ಥಿಸಿದರು. ಸುಜಾತಾ ಪಾಟೀಲ ಸ್ವಾಗತಿಸಿ, ವಾಸುದೇವ ಕಲಾಲ ನಿರೂಪಿಸಿ, ಶಂಕ್ರಪ್ಪ ಶಿಳ್ಳಿನ ವಂದಿಸಿದರು.
