ಮಂಗಳೂರು : ಮಾಂಡ್ ಸೊಭಾಣ್ ಸುಮೇಳ್ ಸಹಯೋಗದಲ್ಲಿ ನೀಡುವ ಅಂತರರಾಷ್ಟ್ರೀಯ ಸಂಗೀತ ದಿವಸದ ಗೌರವಕ್ಕೆ ಹಿರಿಯ ಸಂಗೀತ ತರಬೇತುದಾರ ಚಾರ್ಲ್ಸ್ ಮೌರಿಸ್ ಡಿಮೆಲ್ಲೊ ಕುಡುಪು ಭಾಜನರಾಗಿದ್ದಾರೆ. ದಿನಾಂಕ 04 ಅಕ್ಟೋಬರ್ 2026ರಂದು ಶಕ್ತಿನಗರದ ಕಲಾಂಗಣದಲ್ಲಿ ಸಂಜೆ 6-30 ಗಂಟೆಗೆ ಅನಿವಾಸಿ ಉದ್ಯಮಿ ಹಾಗೂ ಅಬುಧಾಬಿಯ ಕೊಂಕಣಿ ಸಾಂಸ್ಕೃತಿಕ ಸಂಘಟನೆ ಅಧ್ಯಕ್ಷ ಲಿಯೊ ರೊಡ್ರಿಗಸ್ ಈ ಗೌರವವನ್ನು ಹಸ್ತಾಂತರಿಸುವರು. ನಂತರ 298ನೇ ತಿಂಗಳ ವೇದಿಕೆಯಲ್ಲಿ ರೈನಾ ಸಿಕ್ವೇರಾ ನೇತೃತ್ವದಲ್ಲಿ ಸುಮೇಳ್ ಹಾಗೂ ವಿಂಟರ್ ಟೋನ್ ಬಂಟ್ವಾಳ ತಂಡಗಳಿಂದ ವಿವಿದ್ ನಿನಾದ್ ಸಂಗೀತ ಕಾರ್ಯಕ್ರಮ ನಡೆಯಲಿದೆ. ಉದ್ಯಮಿ ಹಾಗೂ ಸಮಾಜ ಸೇವಕ ಜೊನ್ ಸುರೇಶ್ ತಿಂಗಳ ವೇದಿಕೆಗೆ ಚಾಲನೆ ನೀಡಲಿರುವರು.

ಸ್ವ-ಇಚ್ಛೆಯಿಂದ ಸಂಗೀತ ಕಲಿಕೆ ನಡೆಸಿದ ಚಾರ್ಲ್ಸ್ ಇವರು ವಯೊಲಿನ್, ಗಿಟಾರ್, ಕೀಬೊರ್ಡ್, ಬೆಂಜೊ, ಮೆಡೊಲಿನ್, ಟ್ರಂಪೆಟ್, ಸ್ಯಾಕ್ಸೊಫೊನ್, ಝೈಲೊಫೊನ್ ಇತ್ಯಾದಿ ಸಂಗೀತ ಸಾಧನಗಳನ್ನು ಕಲಿತು, ಕಲಿಸುತ್ತಿದ್ದಾರೆ. ಫಾ. ಗಿಲ್ಬರ್ಟ್ ಗೊನ್ಸಾಲ್ವಿಸ್ ಇವರಿಂದ ಸ್ವರಲಿಪಿ ಕಲಿತರು. ಸಾಹಿತ್ಯದ ದಿಗ್ಗಜರಾದ ವಿಜೆಪಿ ಸಲ್ಡಾನ್ಹಾ, ಚಾಫ್ರಾ ಡಿಕೊಸ್ತಾ ಇವರಿಂದ ಕೊಂಕಣಿ ಭಾಷೆಯ ಪ್ರೌಢಿಮೆ ಪಡೆದರು. ಎರಿಕ್ ಒಝೆರಿಯೊ ಮಕ್ಕಳಿಗೆ ಕಲಿಸುವ ಅವಕಾಶ ನೀಡಿದರು. ಹೆನ್ರಿ ಟಿ. ಡಿ’ಸೋಜ, ವಿಲ್ಪಿ ರೆಬಿಂಬಸ್, ಸಾತುರ್ನಿನ್ ಮೊರಾಸ್ ಹಾಗೂ ಕೊಂಕಣಿ ನಾಟಕ ಸಭೆಯ ಕಾರ್ಯಕ್ರಮಗಳಲ್ಲಿ ಪ್ರತಿಭೆಗೆ ಅವಕಾಶ ದೊರೆಯಿತು. ವಿಜಯ್ ಕುಮಾರ್ ಕೊಡಿಯಾಲ್‌ಬೈಲ್ ರವರ ತುಳು ನಾಟಕಗಳಲ್ಲೂ ಸಂಗೀತ ನೀಡುವ ಅವಕಾಶ ಲಭಿಸಿತು. ಬಡ ಪ್ರತಿಭಾನ್ವಿತ ಮಕ್ಕಳಿಗಾಗಿ ಫಾ. ವಾಲ್ಟರ್ ಆಲ್ಬುಕರ್ಕ್ ಆರಂಭಿಸಿದ ಸಂಗೀತಾಲಯದ ಮುಖ್ಯ ತರಬೇತುದಾರರಾಗಿ ಸೇವೆ ಸಲ್ಲಿಸಿದರು.
ಇವರು ಮೆಟಲೊಫೊನ್ ಸಾಧನ ಬಳಸುವ ಆಕಾಶ್‌ವಾಣಿಯ ಎ ಗ್ರೇಡ್ ಕಲಾವಿದರು. ಕುಲಶೇಖರ ಮತ್ತು ಬೆಂದೂರ್ ಇಗರ್ಜಿಗಳ ಗಾಯನ ವೃಂದದ (ಕೊಯರ್) ಶಿಕ್ಷಕರಾಗಿ ಹಾಗೂ ವಾಲೆನ್ಸಿಯಾ, ಜೆಪ್ಪು, ಮಿಲಾರ್, ಕಾಸ್ಸಿಯಾ, ವಾಮಂಜೂರು ಚರ್ಚ್‌ಗಳ ಕೊಯರ್‌ನಲ್ಲಿ ಅವರು ಅಗತ್ಯ ಸೇವೆ ಸಲ್ಲಿಸಿದ್ದಾರೆ. ಸಂತ ಎಲೋಶಿಯಸ್, ಲೇಡಿಹಿಲ್, ಸೈಂಟ್ ಆನ್ಸ್, ಕಾರ್ಮೆಲ್, ಜೆರೊಸಾ, ಕೋಟೆಕಾರ್ ಶಾಲೆಗಳಲ್ಲಿ ಮಕ್ಕಳಿಗೆ ಸಂಗೀತ ತರಬೇತಿ ನೀಡಿದ್ದಾರೆ. ಆಲ್ವಿನ್ ಫೆರ್ನಾಂಡಿಸ್, ಕ್ಯಾಜಿಟನ್ ಡಾಯಸ್, ಮೆಲ್ವಿನ್ ಪೆರಿಸ್, ದೇವರಾಜ್ ಇವರಂತಹ ಸಂಗೀತ ಕ್ಷೇತ್ರದ ಮೇರು ನಕ್ಷತ್ರಗಳು ಅವರಲ್ಲಿ ಕಲಿತಿದ್ದಾರೆ. ಮದರ್ ತೆರೆಜಾ ಮಂಗಳೂರಿಗೆ ಬಂದಾಗ ಅವರ ಮೆಚ್ಚಿನ ಸ್ತ್ರೋತ್ರ ಗೀತೆಯನ್ನು ಹಾಡುವ ಅವಕಾಶ ಲಭಿಸಿತ್ತು. ಅದೇ ರೀತಿ ಪೋಪ್ ದ್ವಿತೀಯ ಜೋನ್ ಪಾವ್ಲ್ ಬಜ್ಪೆಗೆ ಆಗಮಿಸಿದಾಗ ಅವರ ಬಲಿಪೂಜೆಯ ಗಾಯನವೃಂದದ ಸಂಗೀತಗಾರರಾಗಿ ಭಾಗವಹಿಸಿದ ಹಿರಿಮೆ ಅವರದ್ದು.

ಕ್ರೀಡಾ ಕ್ಷೇತ್ರದಲ್ಲೂ ಪಾರಮ್ಯ ಮೆರೆದ ಅವರು ವೇಯ್ಟ್ ಲಿಫ್ಟಿಂಗ್, ರೆಸ್ಲಿಂಗ್ ಮತ್ತು ಬೊಡಿ ಬಿಲ್ಡಿಂಗ್‌ನಲ್ಲಿ ಪದಕಗಳನ್ನು ಪಡೆದಿದ್ದಾರೆ. 2015ರಲ್ಲಿ ಎರಿಕ್ ಒಝೇರಿಯೊರಿಂದ ಸ್ಥಾಪನೆಗೊಂಡ ಸುಮೇಳ್ ಕೊಂಕಣಿ ಗಾಯನ ಮಂಡಳಿಯು ಆಲ್ಟೊ, ಟೆನರ್, ಸೊಪ್ರಾನೊ ಮತ್ತು ಬೇಝ್ ಸ್ವರಗಳಲ್ಲಿ ಹಾಡಲು ತರಬೇತಿ ನೀಡುತ್ತದೆ. ಅಕ್ಟೋಬರ್ ತಿಂಗಳಿನಲ್ಲಿ ಅಂತರರಾಷ್ಟ್ರೀಯ ಸಂಗೀತ ದಿನಾಚರಣೆ ಮಾಡಿ ಹಿರಿಯ ಕಲಾವಿದರನ್ನು ಗೌರವಿಸಲಾಗುತ್ತದೆ. ಇದುವರೆಗೆ ವಿಮಲಾ ಲೋಬೊ, ಗ್ಲ್ಯಾಡಿಸ್ ಸಿಲ್ವರ್, ಚರಣ್‌ದಾಸ್ ಮಲ್ಯ, ಉಸ್ತಾದ್ ರಫಿಕ್ ಖಾನ್, ಡಿ’ಸಿಲ್ವಾ ಸೋದರರು (ರೊನಿ-ಡೊನಿ), ವಂ. ಬೆನ್ ಬ್ರಿಟ್ಟೊ, ಓಸ್ಕರ್ ವೆಲ್ತಾ, ರೋಶನ್ ಮಾರ್ಟಿಸ್, ಸೈಮನ್ ಪಾಯ್ಸ್ ಮತ್ತು ನಿರಂಜನ್ ಸುನೀಲ್ ಕುಮಾರ್ ಇವರನ್ನು ಗೌರವಿಸಲಾಗಿದೆ.
